ಪುತ್ತೂರು: ಅಪಘಾತವೊಂದರಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿರುವ ಮನೆಯ ಆಧಾರಸ್ಥಂಭವಾಗಿರುವ ಆಟೋ ರಿಕ್ಷಾ ಚಾಲಕ ಇದೀಗ ಕುಟುಂಬ ಜೀವನ ನಿರ್ವಹಣೆಗೆ ಆರ್ಥಿಕ ನೆರವಿನ ಯಾಚನೆಗೆ ಮೊರೆ ಹೋಗಿದ್ದಾರೆ.
ಕೊಡಿಪ್ಪಾಡಿ ಗ್ರಾಮದ ಭಟ್ರುಪ್ಪಾಡಿ ನಿವಾಸಿ ಅನಿಲ್ ಪೂಜಾರಿ(42 ವ) ಅವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಸಂದರ್ಭ ಅವರ ರಿಕ್ಷಾ ಕಳೆದ 6 ತಿಂಗಳ ಹಿಂದೆ ಅಫಘಾತಕ್ಕೀಡಾಗಿತ್ತು. ಘಟನೆಯಲ್ಲಿ ತಲೆ ಹಾಗೂ ದೇಹದ ಇನ್ನಿತರ ಭಾಗಗಳಿಗೆ ಗಾಯಗಳಾಗಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆ ಬಳಿಕ ಅವರ ದೇಹ ಶಕ್ತಿಹೀನವಾಗಿದೆ. ಸ್ವತಂತ್ರವಾಗಿ ನಡೆದಾಡಿಕೊಳ್ಳಲು ಚೈತನ್ಯವಿಲ್ಲ. ನಡೆದುಕೊಂಡು ಹೋಗಲು ಕೂಡ ಇನ್ನೊಬ್ಬನ ಸಹಾಯ ಬೇಕಾಗಿದೆ. ರಿಕ್ಷಾ ಚಾಲಕ ದುಡಿಮೆಯ ಮೂಲಕ ತನ್ನ ಸಂಸಾರದ ಜೀವನ ನಿರ್ವಹಣೆ ಮಾಡುತ್ತಿದ್ದ ಅನಿಲ್ಪೂಜಾರಿ ಅವರು ಕಳೆದ 6 ತಿಂಗಳಿಂದ ಮಲಗಿದಲ್ಲೇ ಕಾಲ ಕಳೆಯುವ ಸ್ಥಿತಿಯಲ್ಲಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಸಣ್ಣ ಮನೆಯೊಂದನ್ನು ಬಿಟ್ಟರೆ ಬೇರೇನೂ ವ್ಯವಸ್ಥೆಗಳಿಲ್ಲ. ಇದೀಗ ಆಧಾರಸ್ತಂಭ ಕಳಚಿದ ಪರಿಣಾಮವಾಗಿ ಸಂಸಾರದ ಬದುಕಿನ ಭಾರವನ್ನು ಪತ್ನಿ ರೇವತಿ ಅವರು ಹೊತ್ತುಕೊಳ್ಳಬೇಕಾಗಿ ಬಂದಿದೆ.
ಚಿಕಿತ್ಸೆ, ಸಾಲದ ಹೊರೆ:
ರೇವತಿ ಅವರು ಬೀಡಿ ಸುತ್ತಿ ಸಂಸಾರದ ನಿರ್ವಹಣೆ ಮಾಡಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ರಿಕ್ಷಾ ಖರೀದಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆದಿರುವ ರೂ.2 ಲಕ್ಷ ಸಾಲದ ಬಾಬ್ತು ಪ್ರತೀ ವಾರ ರೂ.1300 ಹಣ ಪಾವತಿಸಬೇಕಾಗಿದೆ. ತಿಂಗಳೊಂದಕ್ಕೆ ಪತಿಯ ಚಿಕಿತ್ಸೆ ಮತ್ತು ಔಷಧಿಗಾಗಿ ರೂ.1500 ರಿಂದ 2ಸಾವಿರದಷ್ಟು ಬೇಕಾಗುತ್ತಿದೆ. ಬೀಡಿ ಕೆಲಸವೂ ಈಗ ಇಲ್ಲ. ಏನು ಮಾಡುವುದೆಂದೇ ನನಗೆ ದಿಕ್ಕು ತೋಚುತ್ತಿಲ್ಲ ಎಂದು ರೇವತಿ ಅವರು ಕಣ್ಣೀರು ಸುರಿಸುತ್ತಿದ್ದಾರೆ.
ತೀರಾ ಸಂಕಷ್ಟಕ್ಕೊಳಗಾಗಿರುವ ಮತ್ತು ಶೋಚನೀಯ ಸ್ಥಿತಿಯಲ್ಲಿರುವ ಈ ಕುಟುಂಬವೀಗ ನೆರವಿನ ನಿರೀಕ್ಷೆಯೊಂದಿಗೆ ಸಮಾಜದ ಮುಂದೆ ಕೈಚಾಚಿದ್ದಾರೆ. ಈ ಕುಟುಂಬದ ಸಂಕಷ್ಟಕ್ಕೆ ಸ್ಪಂದನೆ ನೀಡಲು ಬಯಸುವವರು ಕರ್ನಾಟಕ ಬ್ಯಾಂಕ್, ಕಬಕ ಶಾಖೆ ಪುತ್ತೂರು ತಾಲ್ಲೂಕು, ಇಲ್ಲಿ ರೇವತಿ ಬಿ ಅವರ ಹೆಸರಿನಲ್ಲಿರುವ ಖಾತೆ ನಂಬ್ರ 4012500101605401 ಐಎಫ್ಎಸ್ಸಿ ಕೋಡ್ ಕೆಎಆರ್ಬಿ0000401 ಇದಕ್ಕೆ ಆರ್ಥಿಕ ನೆರವು ಜಮೆ ಮಾಡಬಹುದು. ಇಲ್ಲವೇ ಅನಿಲ್ ಪೂಜಾರಿ ಅವರ ಮೊಬೈಲ್ ಸಂಖ್ಯೆ : 9964823954 ನ್ನು ಸಂಪರ್ಕಿಸಿ ಸಹಾಯ ಹಸ್ತ ಚಾಚಬಹುದು .