ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದಲ್ಲಿ ಉಗ್ರ ಹೋರಾಟ-ಮೀರಾ ಸಾಹೇಬ್
ಕಡಬ: ಕಡಬ ತಾಲೂಕು ರಚನೆ ಆಗಿ 2018ರಲ್ಲಿ ಮಂಜೂರಾತಿ ಆಗಿದ್ದು ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿದೆ. ಆದರೆ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 18 ಕಚೇರಿಗಳು ಇನ್ನೂ ಕಾರ್ಯವೆಸಗದೇ ಇರುವುದರಿಂದ ಕಡಬ ತಾಲೂಕಿನ ಜನತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈಗಾಗಲೇ ಅನೇಕ ಮನವಿಗಳನ್ನು ನೀಡಿದ್ದರೂ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ, ಇದು ನಮ್ಮ ಕೊನೆಯ ಮನವಿಯಾಗಿದ್ದು ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಮುಂದಕ್ಕೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಸಯ್ಯದ್ ಮೀರಾ ಸಾಹೇಬ್ ಎಚ್ಚರಿಕೆ ನೀಡಿದ್ದಾರೆ.
ಕಡಬ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕಡಬ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಜು.11 ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಮ್ಮ ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸುಮಾರು 42 ಗ್ರಾಮಗಳನ್ನೊಳಗೊಂಡ ಕಡಬ ತಾಲೂಕು ಮಂಜೂರಾಗಿ 5 ವರ್ಷವಾದರೂ ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಈ ವರೆಗೆ ತಾಲೂಕು ಮಟ್ಟದ ವಿವಿಧ ಇಲಾಖಾ ಕಚೇರಿಗಳು ಪ್ರಾರಂಭಗೊಂಡಿಲ್ಲ. ಮುಂದಕ್ಕೂ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅನಿವಾರ್ಯವಾಗಿ ಧರಣಿ, ಮುಷ್ಕರ, ಬಂದ್ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.
ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಡಯಾಲಿಸಿಸ್ ಹಾಗೂ ವೈದ್ಯರ ಕೊರತೆ ಇದೆ, ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇಲ್ಲ, ಸ್ಥಳಾವಕಾಶ ಇದ್ದರೂ ಸಬ್ ರಿಜಿಸ್ಟಾರ್ ಕಚೇರಿ ತೆರೆದಿರುವುದಿಲ್ಲ, ಸಮಾಜ ಕಲ್ಯಾಣ ಇಲಾಖೆ, ಕೃಷಿ ತೋಟಗಾರಿಕೆ, ಪಶು ವೈದ್ಯಕೀಯ, ಅರಣ್ಯ, ಲೋಕೋಪಯೋಗಿ ಇಲಾಖೆ, ಅಲ್ಪಸಂಖ್ಯಾತ, ಹಿಂದುಳಿದ, ಮಹಿಳಾ ಮಕ್ಕಳ ಇಲಾಖೆ, ಅಧಿಕಾರಿಗಳು ಕಾರ್ಯ ನಿರ್ವಹಿಸುವುದಿಲ್ಲ, ಸಾರ್ವಜನಿಕ ಬಸ್ಸ್ಟ್ಯಾಂಡ್ ಇಲ್ಲ, ಅಗ್ನಿ ಶಾಮಕ ದಳಕ್ಕೆ ಸ್ಥಳ ಕಾಯ್ದಿರಿಸಿದರೂ ಕಾರ್ಯ ನಿರ್ವಹಿಸಲು ಕ್ರಮ ವಹಿಸಿಲ್ಲ, ಅಪ್ಗ್ರೇಡ್ ಕಾಲೇಜು ಸ್ಥಾಪನೆ ಆಗಿಲ್ಲ, ಐಟಿಐ, ಪಾಲಿಟೆಕ್ನಿಕ್ ಮುಂತಾದ ವಿದ್ಯಾಭ್ಯಾಸಕ್ಕೂ ಅವಕಾಶವಿಲ್ಲ ಎಂದು ಅವರು ಹೇಳಿದರು.
ಕಡಬದಲ್ಲಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ತೆರೆಯಬೇಕು, ನೆಲ್ಯಾಡಿ ಮತ್ತು ಕಾಣಿಯೂರಲ್ಲಿ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದ ಅವರು ಕಡಬ ತಾಲೂಕಿನಲ್ಲಿ ಅಕ್ರಮ ಸಕ್ರಮ ಮನೆ ನಿವೇಶನ ಹಾಗೂ ಕುಟುಂಬದ ಆಸ್ತಿ ಪಾಲು ಪಟ್ಟಿ ಹಲವಾರು ವರ್ಷ ಕಳೆದರೂ ಕೂಡಾ ಸರ್ವೇ ಪ್ಲಾಟಿಂಗ್ ಆಗುತ್ತಿಲ್ಲ, ಇವೆಲ್ಲದರ ಬಗ್ಗೆ ಸರಕಾರ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಡಬ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ, ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಹರಿಪ್ರಸದಾದ್ ಎಣ್ಕಾಜೆ, ಇ.ಜೆ ಜೋಸೆಫ್ ನೂಜಿಬಾಳ್ತಿಲ, ರಾಜನ್ ಕೆ ಮ್ಯಾಥ್ಯೂ, ರಾಯ್ ಅಬ್ರಾಹಂ, ಪಿ.ಇ ಜೋಸೆಫ್, ಕೆ.ಕೆ ಬಾಬು, ಅಲೆಕ್ಸ್, ಕೆ.ಆರ್ ಉಮೇಶ್, ಈಫನ್ ಜೋಸೆಫ್, ಲಿಂಗಪ್ಪ ಗೌಡ, ದುಗ್ಗಪ್ಪ ನಾಯ್ಕ್, ಹರಿಪ್ರಸಾದ್ ಎಣ್ಕಾಜೆ, ತಿಲಕ್ ಎ.ಎ, ಕಾರ್ತಿಕ್ ಜಿ.ಎಂ, ಜೋಕಿಂ ಡಿಸೋಜಾ, ಚಂದ್ರಶೇಖರ ಗೌಡ ಕೋಡಿಬೈಲು, ಅಶೋಕ್ ಕುಮಾರ್ ರೈ ವಜ್ರಪಾಣಿ, ಕೆ.ಎ ಆದಂ ಕುಂತೂರು, ಶಿವರಾಮ ಗೌಡ ಕರಿಕ್ಕಳ, ಖಾದರ್, ಕುಶಾಲ ಅರಿಮೈಲ್, ಮಹಮ್ಮದ್ ಕುಂಞ, ವಿನಯ ಐತ್ತೂರು, ಲತೀಫ್ ಕಡಬ, ವಿವೇಕಾನಂದ ಬೊಳ್ಳಾಜೆ, ಪ್ರಕಾಶ್ ಎಸ್, ಚಂದ್ರಶೇಖರ್ ನೆಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಹಲವರು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ತಿಲಕ್ ಮಾಸ್ಟರ್ ವಂದಿಸಿದರು.
ಮನವಿ ಸಲ್ಲಿಕೆ:
ಹಕ್ಕೊತ್ತಾಯದ ಬಳಿಕ ಕಡಬ ತಾಲೂಕು ಉಪತಹಶೀಲ್ದಾರ್ ಮನೋಹರ್ ಕೆ.ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಮನೋಹರ್ ಕೆ.ಟಿ ಮಾತನಾಡಿ ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸುವ ಕಾರ್ಯ ಮಾಡುತ್ತೇವೆ. ನಿಮ್ಮ ಬೇಡಿಕೆ ವಿಚಾರವಾಗಿ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಅವರು ಹೇಳಿದರು.