ಗುಡ್ಡ ಕುಸಿತದ ಭೀತಿ-ಸುಬ್ರಹ್ಮಣ್ಯ ನೂಚಿಲದ 8 ಕುಟುಂಬಗಳ ಸ್ಥಳಾಂತರ

0

ಕಡಬ: ವಾಸ್ತವ್ಯದ ಮನೆಗಳ ಹಿಂಬದಿಯ ಅಪಾಯಕಾರಿ ಗುಡ್ಡ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸಂಭವವಿದ್ದು ಮುಂಜಾಗ್ರತಾ ಕ್ರಮವಾಗಿ ತಪ್ಪಲಿನ 8 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.

ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಅನತಿ ದೂರದಲ್ಲಿರುವ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ನೂಚಿಲ ಎಂಬಲ್ಲಿರುವ ಪರ್ವತ ತಪ್ಪಲಿನ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಬಳಿಯಲ್ಲಿರುವ ನೂಚಿಲ ಗುಡ್ಡದ ಬುಡದಲ್ಲಿ 8 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಧಾರಾಕಾರ ಮಳೆಯ ನಡುವೆ ಗುಡ್ಡ ಕುಸಿದು ಬೀಳುವ ಅಪಾಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಟುಂಬಗಳನ್ನು ಕುಕ್ಕೆ ದೇವಳಕ್ಕೆ ಸೇರಿದ ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಗೀತಾ ಸತೀಶ್ ನೂಚಿಲ, ಪದ್ಮಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ ನೂಚಿಲ, ಶೋಭಾ ಪ್ರಮೋದ್ ಕುಮಾರ್ ಮತ್ತು ಬಿ.ಎನ್. ರಾಧಾಕೃಷ್ಣ ಎಂಬವರ ಮನೆಗಳು ಬೆಟ್ಟದ ತಪ್ಪಲಿನಲ್ಲಿದೆ. ಕಡಬ ತಹಶೀಲ್ದಾರ್ ಈ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಕ್ಷಣ ಮನೆಗಳಿಂದ ತೆರವಾಗಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಮನೆ ಖಾಲಿ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಮಳೆಗಾಲ ಮುಗಿಯುವವರೆಗೆ ಈ ಮನೆಗಳನ್ನು ಬಳಸದಂತೆಯೂ ಸೂಚನೆ ನೀಡಲಾಗಿದೆ. ಎಸ್‌ಡಿಆರ್‌ಎ- ತಂಡ ಸ್ಥಳ ಪರಿಶೀಲಿಸಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಗಗನಚುಂಬಿ ಬೆಟ್ಟ ಇದಾಗಿದ್ದು, ಇದರ ಬುಡದಲ್ಲೇ ಮನೆಗಳಿವೆ. ಧಾರಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಮಳೆಗಾಲದಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಮೀಪದ ಪರ್ವತಮುಖಿ ಎಂಬಲ್ಲಿನ ಮನೆಯೊಂದರ ಮೇಲೆ ಹಿಂಬದಿಯ ಬೆಟ್ಟ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು.

LEAVE A REPLY

Please enter your comment!
Please enter your name here