ಖ್ಯಾತ ಕಾಂಪೌಂಡರ್ ನರಸಿಂಹ ಭಟ್ ವಿಶ್ರಾಂತ ಜೀವನಕ್ಕೆ- ಬಿಜೆಪಿಯಿಂದ ಗೌರವ, ಸನ್ಮಾನ

0

ಮಾತಿನ ಮೂಲಕವೇ ಕಾಯಿಲೆ ಗುಣಪಡಿಸಬಹುದೆಂದು ತೋರಿಸಿಕೊಟ್ಟವರು – ಸಂಜೀವ ಮಠಂದೂರು

ಪುತ್ತೂರು: ತನ್ನ 16ನೇ ವಯಸ್ಸಿಗೆ ಪುತ್ತೂರಿನ ಡಾ. ಶಿವರಾಂ ಭಟ್ ಅವರಲ್ಲಿ ಕಾಂಪೌಂಡರ್ ಆಗಿ ಕೆಲಸಕ್ಕೆ ಸೇರಿಕೊಂಡ ನರಸಿಂಹ ಭಟ್ ಅವರಿಗೆ ಈಗ 82 ವರ್ಷ. ಕಾಂಪೌಂಡರ್ ಆಗಿ ಸುಮಾರು 68 ವರ್ಷಗಳ ಸೇವೆಯ ನಂತರ ಕೆಲಸಕ್ಕೆ ವಿದಾಯ ಹೇಳಿ ವಿಶ್ರಾಂತ ಜೀವನಕ್ಕೆ ಮುನ್ನಡಿಯಿಟ್ಟಿರುವ ನರಸಿಂಹ ಭಟ್ ಅವರನ್ನು ಪುತ್ತೂರು ಬಿಜೆಪಿಯಿಂದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಜು.12ರಂದು ಕಾಂಪೌಂಡರ್ ಅವರ ಹಾರಾಡಿ ಮನೆಯಲ್ಲೇ ಗೌರವ ವಿದಾಯ ಸನ್ಮಾನ ಮಾಡಲಾಯಿತು.

ಮಾತಿನ ಮೂಲಕವೇ ಕಾಯಿಲೆ ಗುಣಪಡಿಸಬಹುದೆಂದು ತೋರಿಸಿಕೊಟ್ಟವರು :
ಕಾಂಪೌಂಡರ್ ನರಸಿಂಹ ಭಟ್ ದಂಪತಿಗೆ ಶಾಲು, ಹಾರಾ, ಪೇಟ ಧರಿಸಿ, ಫಲಪುಷ್ಪ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸ್ಮರಣಿಕೆ ನೀಡಿ ಗೌರವಿಸಿದ ಬಳಿಕ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ’ವೈದ್ಯೋ ನಾರಾಯಣೋ ಹರೀಃ’ ಎಂಬಂತೆ ಡಾ.ಶಿವರಾಮ ಭಟ್ ಅವರ ಜೊತೆ ಕಾಂಪೌಂಡರ್ ಆಗಿ ಕೆಲಸ ಮಾಡಿದ ನರಸಿಂಹ ಭಟ್ ಎಲ್ಲರಿಗೂ ಚಿರಪರಿಚಿತರು. ವೈದ್ಯರನ್ನು ಕಾಣುವ ಮೊದಲು ಕಾಂಪೌಂಡರ್ ಅನ್ನು ಕಾಣುವುದಿದ್ದರೆ ಅದು ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿ ಮಾತ್ರವಾಗಿತ್ತು. ವೈದ್ಯಕೀಯ ಸೇವೆ ಮಾಡಿ ಮಾತಿನ ಮೂಲಕ ಕಾಯಿಲೆ ಗುಣಪಡಿಸಬಹುದೆಂದು ತೋರಿಸಿಕೊಟ್ಟ ಇತಿಹಾಸ ಇದ್ದರೆ ಅದು ಅದು ನರಸಿಂಹ ಭಟ್ ಅವರಿಗೆ ಸಲ್ಲುತ್ತದೆ ಎಂದರು. ಅವರು 68 ವರ್ಷಗಳ ಸಾರ್ಥಕ ಸೇವೆಯಿಂದ ಬೇರೆ ಬೇರೆ ತಾಲೂಕಿನ ಜನರಿಗೆ ಚಿರಪರಿಚಿತರಾಗಿದ್ದಾರೆ. ಅವರ ವಿಶ್ರಾಂತ ಜೀವನವನ್ನು ಇಡಿ ಸಮಾಜ ಗೌರವಿಸುತ್ತದೆ. ಅವರಂತೆ ಇನ್ನೊಂದಷ್ಟು ಜನ ವೈದ್ಯಕೀಯ ಸೇವೆ ಮಾಡಿ ಜನರ ಆರೋಗ್ಯ ಕಾಪಾಡುವ ಪ್ರಯತ್ನಶೀಲರಾಗಬೇಕು ಮತ್ತು ನರಸಿಂಹ ಭಟ್ ಅವರ ಸೇವೆ ಇವತ್ತಿನ ಪೀಳಿಗೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ಬಿಜೆಪಿಯಿಂದ ಅವರನ್ನು ಗೌರವಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಸದಸ್ಯರಾದ ಪ್ರೇಮಲತಾ ಜಿ ನಂದಿಲ, ಗೌರಿ ಬನ್ನೂರು, ಬಿಜೆಪಿಯ ಹಿರಿಯರಾದ ಎಸ್.ಅಪ್ಪಯ್ಯ ಮಣಿಯಾಣಿ, ಮಾಜಿ ಪುರಸಭೆ ಅಧ್ಯಕ್ಷರಾದ ಯು.ಲೋಕೇಶ್ ಹೆಗ್ಡೆ, ಉಷಾ ನಾಯಕ್, ರಾಜೇಶ್ ಬನ್ನೂರು, ಕಿರಣ್ ಶಂಕರ್ ಮಲ್ಯ, ರಾಧಾಕೃಷ್ಣ ಗೌಡ ಬನ್ನೂರು, ಪ್ರಭಾಕರ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here