9 ಮಂದಿ ರೈತರ ಸಾಲಮನ್ನಾ ಮಾಡುವಂತೆ ಶಾಸಕ ಅಶೋಕ್ ರೈಯವರಿಂದ ಸಚಿವರಿಗೆ ಮನವಿ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳಿಂದ 9 ಮಂದಿ ರೈತರು ಸಾಲಪಡೆದಿದ್ದು, ಪಡೆದುಕೊಂಡ ಸಾಲವನ್ನು ತೀರಿಸಲು ಯಾವುದೇ ಆರ್ಥಿಕ ಮಾರ್ಗ ಅವರಿಗೆ ಇಲ್ಲವಾಗಿದ್ದು ಆ 9 ಮಂದಿಯ ಸಾಲವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮನ್ನಾ ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ರಾಜ್ಯ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಅವರಿಗೆ ಮನವಿ ಮಾಡಿದ್ದಾರೆ.

9 ಮಂದಿ ರೈತರು ನಾಲ್ಕು ಸಹಕಾರಿ ಬ್ಯಾಂಕುಗಳಿಂದ ಸುಸ್ತಿ ಬೆಳೆ ಸಾಲವನ್ನು ಪಡೆದುಕೊಂಡಿದ್ದಾರೆ. ಸುಮಾರು 14 ವರ್ಷದ ಹಿಂದೆ ಈ ಸಾಲವನ್ನು ಪಡೆದುಕೊಂಡಿದ್ದು ಪಡೆದುಕೊಂಡ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ. 9 ಮಂದಿ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ ಜಾರಿಗೆ ತಂದಿದ್ದ ಸಾಲಮನ್ನಾ ಮತ್ತು ಬಡ್ಡಿ ಮನ್ನಾದ ಯಾವುದೇ ಸೌಲಭ್ಯವನ್ನು ಇವರಿಗೆ ನೀಡಲಾಗಿಲ್ಲ. 14 ವರ್ಷದ ಇವರುಗಳ ಸಾಲವನ್ನು ಕುಲಗೆಟ್ಟ ಸಾಲದಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ 9 ಮಂದಿಯನ್ನು ಸಾಲ ಮುಕ್ತಗೊಳಿಸಬೇಕು ಎಂದು ಶಾಸಕರು ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದ ಸಚಿವರು, ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ, ರೈತ ಸಂಘ ಹಸಿರು ಸೇನೆಯ ದ ಕ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ರೋಶನ್ ರೈ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here