ಕೂಡುರಸ್ತೆಯಲ್ಲಿ ಮೋರಿ ಬ್ಲಾಕ್ ಆಗಿ ಜಲಾವೃತವಾಗುವ ರಸ್ತೆ..!ಹಲವು ವರ್ಷಗಳ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

0

@ಯೂಸುಫ್ ರೆಂಜಲಾಡಿ

ಪುತ್ತೂರು: ಮುಂಡೂರು-ತಿಂಗಳಾಡಿ ರಸ್ತೆಯ ಕೂಡುರಸ್ತೆ ಎಂಬಲ್ಲಿ ಮೋರಿ ಬ್ಲಾಕ್ ಆಗಿ ನೀರು ರಸ್ತೆಯಲ್ಲಿ ಶೇಖರಣೆಗೊಂಡು ವಾಹನ ಸಂಚಾರರು ಪರದಾಟ ನಡೆಸುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಕೂಡುರಸ್ತೆಯಲ್ಲಿರುವ ಮೋರಿಯಲ್ಲಿ ಹೂಳು ಹಾಗೂ ಕಸ ಕಡ್ಡಿಗಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ಶೇಖರಣೆಗೊಳ್ಳುತ್ತಿದೆ.

ಕೂಡುರಸ್ತೆಯಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಕೆಲವು ವರ್ಷಗಳಿಂದ ಕೂಡುರಸ್ತೆಯ ಯುವಕರು ಸೇರಿಕೊಂಡು ದುರಸ್ತಿ ಶ್ರಮದಾನ ಕಾರ್ಯ ನಡೆಸಿ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ವರ್ಷಗಳ ಹಿಂದೆ ಮುಂಡೂರು ಗ್ರಾ.ಪಂ ವತಿಯಿಂದ ತಾತ್ಕಾಲಿಕ ಪರಿಹಾರ ಮಾಡಲಾಗಿತ್ತು. ಆದರೆ ಈ ಬಾರಿಯ ಮಳೆಗಾಲಕ್ಕೆ ಮತ್ತದೇ ಸಮಸ್ಯೆ ಎದುರಾಗಿದೆ. ಪ್ರತೀ ಮಳೆಗಾಲದಲ್ಲೂ ನೀರು ಶೇಖರಣೆಗೊಂಡು ರಸ್ತೆ ಬ್ಲಾಕ್ ಆಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಕೆಯಾದರೂ ಪರಿಹಾರ ಆಗಿಲ್ಲ:
ಕೂಡುರಸ್ತೆಯಲ್ಲಿ ಮೋರಿ ಬ್ಲಾಕ್ ಆಗಿ ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ‘ಸುದ್ದಿ’ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಸ್ಥಳಕ್ಕೆ ಜಿ.ಪಂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ ಅವರು 2021 ಜೂ.17ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಳೆ ಹಾನಿಯಡಿಯಲ್ಲಿ ರೂ.15 ಲಕ್ಷದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಬರೆದಿದ್ದಾರೆ. ರಸ್ತೆಯನ್ನು ಅಂದಾಜು ಮೂರು ಅಡಿ ಎತ್ತರ ಮಾಡಿ ಕಿರು ಸೇತುವೆ ರೂಪದಲ್ಲಿ ಬದಲಿ ಕಾಮಗಾರಿಯ ಅವಶ್ಯಕತೆ ಇದೆ ಎಂದಿರುವ ಭರತ್ ಬಿ.ಎಂ ಅವರು ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿಕೊಟ್ಟಿರುವುದಾಗಿ ಆ ಸಂದರ್ಭದಲ್ಲಿ ಹೇಳಿದ್ದರು.

ಪ್ರತೀ ಮಳೆಗಾಲದಲ್ಲೂ ಸಮಸ್ಯೆ:
ಅನೇಕ ವರ್ಷಗಳಿಂದ ಕುಡುರಸ್ತೆಯಲ್ಲಿ ಮೋರಿ ಬ್ಲಾಕ್ ಆಗಿ ರಸ್ತೆಯಲ್ಲಿ ಕೃತಕ ಕೊಳ ನಿರ್ಮಾಣವಾಗುತ್ತಿರುವ ಕಾರಣದಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಪ್ರತೀ ಮಳೆಗಾಲದಲ್ಲೂ ಇಲ್ಲಿ ಸಮಸ್ಯೆಯಾಗುತ್ತಲೇ ಇದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಸ್ಥಳೀಯರು, ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here