ಉಪ್ಪಿನಂಗಡಿ ಹಲಸಿನ ಹಬ್ಬದ ಸಮಾರೋಪ ಸಮಾರಂಭ

0

ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬಂದಾಗ ಉದ್ಯೋಗ ಸೃಷ್ಟಿ ಸಾಧ್ಯ: ಮಠಂದೂರು


ಉಪ್ಪಿನಂಗಡಿ: ಓರ್ವ ಕೃಷಿಕನಾಗಿ ಕೃಷಿಕರ ಕಷ್ಟ- ನಷ್ಟಗಳು ನನಗೆ ಗೊತ್ತಿದೆ. ಇಂತಹ ಮೇಳಗಳನ್ನು ನಡೆಸುವುದರಿಂದ ರೈತ ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಬರಲು ಸಾಧ್ಯವಿದೆಯಲ್ಲದೆ, ಉದ್ಯೋಗ ಸೃಷ್ಟಿಯೂ ಆಗಲಿದೆ. ಆದ್ದರಿಂದ ಉಪ್ಪಿನಂಗಡಿಯ ಜೇಸಿಐಯು ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಯ ಬೀದರ್, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ನವತೇಜ ಟ್ರಸ್ಟ್ ಪುತ್ತೂರು ಇವುಗಳ ಸಂಯುಕ್ತಾಶ್ರಯದಲ್ಲಿ ಉಪ್ಪಿನಂಗಡಿಯ ಶ್ರೀ ಗುರು ಸುಧೀಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಹಲಸಿನ ಹಬ್ಬದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ರೈತ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಸಿಕ್ಕಿದಾಗ ಮಾತ್ರ ಅದಕ್ಕೆ ಉತ್ತಮ ಮೌಲ್ಯ ಬರಲು ಸಾಧ್ಯ. ಹಲಸಿನ ಬೇರೆ ಬೇರೆ ತಳಿಯ ಪರಿಚಯದೊಂದಿಗೆ ಹಲಸಿನಲ್ಲಿ ಏನೆಲ್ಲಾ ವಿವಿಧ ಖಾದ್ಯಗಳನ್ನು ಮಾಡಬಹುದೆಂದು ಈ ಹಲಸಿನ ಹಬ್ಬ ತೋರಿಸಿಕೊಟ್ಟಿದೆ. ಆದ್ದರಿಂದ ಹಲಸನ್ನು ಆರ್ಥಿಕತೆಯೆಡೆಗೆ ಜೋಡಣೆ ಮಾಡುವ ಕೆಲಸವಾಗಬೇಕು ಎಂದರು.


ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮಾತನಾಡಿ, ಒಂದು ಕಾಲದಲ್ಲಿ ಹಲಸು ಜಾನುವಾರುಗಳ ಆಹಾರವೂ ಆಗಿತ್ತು. ಆದರೆ ಇಂದು ಹಲಸಿನ ವಿವಿಧ ತಳಿಗಳು ಅಭಿವೃದ್ಧಿಗೊಂಡಿದ್ದು, ಅದರ ವಿವಿಧ ಉತ್ಪನ್ನಗಳು ಮಾರುಕಟ್ಟೆಗೆ ಕಾಲಿಟ್ಟಿದ್ದರಿಂದ ಭವಿಷ್ಯದಲ್ಲಿ ಹಲಸಿಗೆ ಉತ್ತಮ ಮಾರುಕಟ್ಟೆ ಮೌಲ್ಯ ದೊರೆಯಲು ಸಾಧ್ಯ ಎಂದರು.
ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಮೊದಲೆಲ್ಲಾ ಹಲಸಿನ ಹಣ್ಣು ಅಂದಾಗ ಗೊತ್ತಿದ್ದದ್ದು ತುಳುವೆ ಹಾಗೂ ಬರಿಕೆ ಎಂಬ ಎರಡು ಜಾತಿಯ ಹಣ್ಣುಗಳು ಮಾತ್ರ. ಆದರೆ ಈಗ ತಳಿಗಳ ಅಭಿವೃದ್ಧಿಯಾಗಿದ್ದು, ಇವುಗಳಿಗೆ ಉತ್ತಮ ಮಾರುಕಟ್ಟೆ ಮೌಲ್ಯವೂ ಬರುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಹಲಸಿನ ಹಣ್ಣು ಇನ್ನಷ್ಟು ಪ್ರಸಿದ್ಧಿಗೆ ಬರಲಿ ಎಂದರು.


ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಮಾತನಾಡಿ, ಈ ಹಲಸಿನ ಹಬ್ಬವನ್ನು ನೋಡಿದಾಗ ಇದು ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ಮಾಡಿದ್ದು ಅಲ್ಲ. ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಜೇಸಿಐ ಸಂಸ್ಥೆಯು ಈ ಬಾರಿಯೂ ನಾಲ್ಕು ಜನರಿಗೆ ಉಪಯೋಗವಾಗುವ ಕಾರ್ಯಕ್ರಮವನ್ನು ಮಾಡುವ ಮೂಲಕ ಮಾದರಿಯೆನಿಸಿದೆ ಎಂದರು.


ತುಳುನಾಡ ಒಕ್ಕೂಟ ಬೋಲ್ತೇರ್ ಇದರ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಮಾತನಾಡಿ, ಹಿಂದೆ ಬಡತನವಿದ್ದ ಸಮಯದಲ್ಲಿ ಊಟಕ್ಕೆ ಮೊದಲು ಹಲಸಿನ ಹಣ್ಣು ತಿಂದು ಆ ಬಳಿಕ ಊಟ ಮಾಡುತ್ತಿದ್ದರು. ಆಗ ದೊರೆಯುತ್ತಿದ್ದ ಯಥೇಚ್ಛ ಹಲಸಿನ ಹಣ್ಣುಗಳನ್ನು ಜಾನುವಾರುಗಳಿಗೆ ಆಹಾರವನ್ನಾಗಿಯೂ ನೀಡುತ್ತಿದ್ದರು. ಆಗ ಯಾರೂ ಹಲಸನ್ನು ನೆಟ್ಟು ಬೆಳೆಸ್ತಾ ಇರಲಿಲ್ಲ. ಆದರೆ ಈಗ ಹಲಸಿನ ಚಿತ್ರಣವೇ ಬದಲಾಗಿದ್ದು, ವಿದೇಶಕ್ಕೂ ಹಲಸು ರಫ್ತು ಆಗುವಲ್ಲಿವರೆಗೆ ಮುಟ್ಟಿದೆ. ತಳಿಗಳ ಸಂವರ್ಧನೆಯೂ ಆಗಿದ್ದು, ಹಲಸಿನ ಪ್ರತಿಯೊಂದು ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಮೌಲ್ಯ ಬಂದಿದೆ. ಇದು ಉತ್ತಮ ಬೆಳವಣಿಗೆ ಎಂದರು.


ಜೇಸಿಐ ವಲಯ ೧೫ರ ಪೂರ್ವಾಧ್ಯಕ್ಷ ಅಶೋಕ್ ಚೂಂತಾರು ಮಾತನಾಡಿ, ಜೇಸಿಐ ಸಂಸ್ಥೆ ಯುವಕರಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸುವುದಲ್ಲದೆ, ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸುತ್ತದೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತದೆ. ಉಪ್ಪಿನಂಗಡಿ ಜೇಸಿಐಯು ಸಮಾಜಕ್ಕೆ ಉಪಯೋಗವಾಗುವಂತಹ ವಿನೂತನ ಕಾರ್ಯಕ್ರಮವನ್ನು ನೀಡಿದೆ ಎಂದರು.


ವೇದಿಕೆಯಲ್ಲಿ ಜೇಸಿಐ ಪುತ್ತೂರು ಇದರ ಅಧ್ಯಕ್ಷ ಸುಹಾಸ್ ಮರಿಕೆ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಪ್ರಶಾಂತ್ ಕುಮಾರ್ ರೈ, ಜೇಸಿಐ ಪೂರ್ವಾಧ್ಯಕ್ಷ ಮೋಹನಚಂದ್ರ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಶೇಖರ ಗೌಂಡತ್ತಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here