ಉಪ್ಪಿನಂಗಡಿ: ಸುಗಮ ವಾಹನ ಸಂಚಾರಕ್ಕಾಗಿ ಇಲ್ಲಿನ ಪಂಚಾಯತ್ ಆಡಳಿತವು ಕಾರ್ಯಾನುಷ್ಠಾನಗೊಳಿಸಲು ಉದ್ದೇಶಿಸಿರುವ ಪಾರ್ಕಿಂಗ್ ಸ್ಥಳ ಹಾಗೂ ಪಾರ್ಕಿಂಗ್ ನಿಷೇಧಿತ ವಲಯಗಳ ಬಗ್ಗೆ ಶನಿವಾರದಂದು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಮಾರ್ಗದರ್ಶನ ನೀಡಿದರು.
ವಾಹನ ದಟ್ಟನೆಯಿಂದಾಗಿ ಪೇಟೆಯಲ್ಲಿ ಸತತ ಸಮಸ್ಯೆಗಳು ಉದ್ಭವಿಸುತ್ತಿರುವುದರಿಂದ 23 ಅಂಶಗಳನ್ನು ಒಳಗೊಂಡ ಸಂಚಾರಿ ನಿಯಮ ಹಾಗೂ ನಿಲುಗಡೆಯ ಸೂಚನೆಗಳನ್ನು ಸಭೆಯಲ್ಲಿ ಪ್ರಕಟಿಸಲಾಯಿತು.
ಈ ಬಗ್ಗೆ ಒಂದಷ್ಟು ಮಂದಿ ಸಹಮತ ಸೂಚಿಸಿ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಿ ಎಂದರೆ, ವರ್ತಕ ಸಮೂಹದ ಹಲವು ಮಂದಿ ವ್ಯಾಪಾರಿಗಳ ಹಿತವನ್ನು ಕಡೆಗಣಿಸಿ ಯಾವುದೇ ನಿಯಮವನ್ನು ಅನುಷ್ಠಾನಿಸಬಾರದೆಂದು ಅಗ್ರಹಿಸಿದರು.
ಎಲ್ಲೆಡೆ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿರುವುದರಿಂದ ಬೀದಿ ಬದಿ ವ್ಯಾಪಾರ, ಪುಟ್ ಪಾತ್ ವ್ಯಾಪಾರಗಳಿಗೆ ನಿಷೇಧ ವಿಧಿಸಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದಾಗ , ಪಂಚಾಯತ್ ಅಧೀನದ ಕಟ್ಟಡಗಳನ್ನೇ ಪಾರ್ಕಿಂಗ್ ಸ್ಥಳ ಕಾಯ್ದಿರಿಸದೆ ಕಟ್ಟಲಾಗಿದೆ. ಸಾಲದಕ್ಕೆ ಬಸ್ ನಿಲ್ದಾಣ ಸಮೀಪದ ಕಂದಾಯ ಇಲಾಖೆಯ ಭೂಮಿಯನ್ನು ಪಂಚಾಯತ್ ಒತ್ತುವರಿ ಮಾಡಿಕೊಂಡು ಅಲ್ಲಿಯೂ ಹೂವಿನ ಮಾರುಕಟ್ಟೆಯನ್ನು ನಿರ್ಮಿಸಿದ್ದಾರೆ. ಬಹುಮಹಡಿ ವಾಣಿಜ್ಯ ಕಟ್ಟಡಗಳನ್ನು ಕಟ್ಟುವಾಗ ಪಾರ್ಕಿಂಗ್ಗೆ ತೋರಿಸಿದ ಜಾಗದಲ್ಲಿ ಕಟ್ಟಡ ಕಟ್ಟಿ ಆದ ಮೇಲೆ ಅಂಗಡಿ ಕೋಣೆಗಳನ್ನು ನಿರ್ಮಿಸಲು ಗ್ರಾ.ಪಂ. ಅವಕಾಶ ನೀಡಿದೆ. ಈ ರೀತಿ ತಾನೇ ನಿಯಮ ಪಾಲಿಸದೆ ಸಾರ್ವಜನಿಕರಿಗೆ ನಿಯಮ ಪಾಲಿಸಿ ಎಂದು ಆದೇಶಿಸುವುದು ಸರಿಯಲ್ಲ ಎಂದು ಪಂಚಾಯತ್ ಆಡಳಿತದ ವಿರುದ್ದ ತೀಕ್ಷ್ಣ ಟೀಕೆ ವ್ಯಕ್ತವಾಯಿತು.
ವರ್ತಕ ಸಂಘದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಆರು ವರ್ಷಗಳ ಹಿಂದೆ ಗ್ರಾ.ಪಂ. ಹಳೇ ಬಸ್ ನಿಲ್ದಾಣದಲ್ಲಿ ಶೀಟ್ ಹಾಕಿದ ಕಟ್ಟಡ ನಿರ್ಮಿಸುವಾಗ ಅದಕ್ಕೆ ನಾವು ಆಕ್ಷೇಪಣೆ ಮಾಡಿದ್ದೇವೆ. ಆಗ ಅದು ತಾತ್ಕಾಲಿಕ ಕಟ್ಟಡ ಅದನ್ನು ತೆಗೆಯಲಾಗುತ್ತೆ. ಅಲ್ಲಿ ಪೇ ಪಾರ್ಕಿಂಗ್ ಮಾಡುತ್ತೇವೆ ಎಂಬ ಭರವಸೆ ದೊರಕಿತ್ತು. ಆದರೆ ಅದರಲ್ಲಿ ಈಗ ಅಂಗಡಿ ಕೋಣೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗಿದೆ. ಆದ್ದರಿಂದ ಆ ಭರವಸೆಯನ್ನು ಈಡೇರಿಸಿ ಎಂದು ಒತ್ತಾಯಿಸಿದರು. ಬೀದಿ ಬದಿ ವ್ಯಾಪಾರಿಗಳು ಬದುಕಬೇಕು. ಅವರಿಗೆ ಒಂದು ಕಡೆ ವ್ಯವಸ್ಥೆ ಮಾಡಿ, ಬಳಿಕ ಅವರನ್ನು ತೆರವುಗೊಳಿಸಿ ಎಂಬ ಆಗ್ರಹವನ್ನು ಎಂ.ಕೆ. ಮಠ ಮಾಡಿದರು. ಫುಟ್ಪಾತ್ ಮಳೆಗಾಲದಲ್ಲಿ ನೀರು ಹರಿದು ಕಣಿಯಂತೆ ಆಗಿರುವ ಬಗ್ಗೆ ಕೈಲಾರು ರಾಜಗೋಪಾಲ್ ಭಟ್ ತಿಳಿಸಿದರು. ಕಡೆಗೆ ಒಂದಷ್ಟು ಬದಲಾವಣೆಯೊಂದಿಗೆ ಪಂಚಾಯತ್ ಮಂಡಿಸಿದ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ರವಿ, ಉಪ ನಿರೀಕ್ಷಕ ರಾಜೇಶ್ ಕೆ.ವಿ., ಸಂಚಾರಿ ಉಪ ನಿರೀಕ್ಷಕ ಉದಯ ರವಿ, ಪಂಚಾಯತ್ ಉಪಾಧ್ಯಕ್ಷ ವಿನಾಯಕ ಪೈ, ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ವಿದ್ಯಾಲಕ್ಷ್ಮಿ ಪ್ರಭು, ಸಂಜೀವ ಮಡಿವಾಳ , ರಶೀದ್, ಧನಂಜಯ, ಲೋಕೇಶ್ ಬೆತ್ತೋಡಿ, ಪ್ರಮುಖರಾದ ಡಾ. ರಾಜಾರಾಮ ಕೆ ಬಿ, ಕೃಷ್ಣ ರಾವ್ ಆರ್ತಿಲ, ಪ್ರಶಾಂತ್ ಡಿಕೋಸ್ತ, ಜಯಂತ ಪುರೋಳಿ, ಹಾರೂನ್ ರಶೀದ್ ಅಗ್ನಾಡಿ , ಝಕಾರಿಯಾ, ಇರ್ಷಾದ್ ಯು.ಟಿ., ಭರತೇಶ್, ಉರುವಾಲು ರಾಜಗೋಪಾಲ ಭಟ್, ಯು.ಜಿ. ರಾಧ, ಲೋಕೇಶ್ ಆಚಾರ್ಯ, ಉಷಾ ನಾಯಕ್ , ಶೋಭಾ ದಯಾನಂದ್, ಮುಹಮ್ಮದ್ ಕೆಂಪಿ, ಕೆ. ವಂಕಟರಮಣ ಭಟ್, ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.