ಗ್ರಾ.ಪಂ ಉಪಚುನಾವಣೆ: ನಿಡ್ಪಳ್ಳಿ- ಆರ್ಯಾಪಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿದ್ದು ಮತದಾರರು ಕಾಂಗ್ರೆಸ್ ಬೆಂಬಲಿಸುತ್ತಾರೆಂಬ ಪೂರ್ಣ ವಿಶ್ವಾಸವಿದೆ: ಶಾಸಕ ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳು ಮೂರೇ ತಿಂಗಳೊಳಗೆ ಕಾರ್ಯರೂಪಕ್ಕೆ ಬರಲಿದ್ದು ಶಕ್ತಿ ಯೋಜನೆ ಮತ್ತು ಅನ್ನಾ ಭಾಗ್ಯ ಯೋಜನೆ ಪ್ರತಿ ಮನೆ ಮನೆಗೆ ತಲುಪಿದೆ. ಕಾಂಗ್ರೆಸ್ ಸರಕಾರದ ಈ ಯೋಜನೆಯನ್ನು ಜನ ಒಪ್ಪಿಕೊಂಡಿದ್ದು ಮುಂಬರುವ ಗ್ರಾಪಂ ಉಪ ಚುನಾವಣೆಯಲ್ಲಿ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಮದ ಮತದಾರರು ಕಾಂಗ್ರೆಸ್ ಬೆಂಬಲಿತರನ್ನು ಪೂರ್ಣವಾಗಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಜು.15ರಂದು ಉಪಚುನಾವಣೆ ನಡೆಯಲಿರುವ ನಿಡ್ಪಳ್ಳಿ ಮತ್ತು ಅರ್ಯಾಪು ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕರ್ತರ ಹಾಗೂ ಮತದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಸರಕಾರದ ಯೋಜನೆಯ ಬಗ್ಗೆ ತಿಳಿ ಹೇಳಬೇಕು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದೆ. ಬಡವರಿಗಾಗಿಯೇ ಈ ಯೋಜನೆಯನ್ನು ಜಾರಿ ಮಾಡಿದೆ. ಶಕ್ತಿ ಯೋಜನೆಯಿಂದ ದಿನವೊಂದಕ್ಕೆ ಸಾವಿರಾರು ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಾಭಾಗ್ಯದ ಅಕ್ಕಿಯನ್ನು ನೀಡುತ್ತಿದ್ದೇವೆ. 5 ಕಿಲೋ ಅಕ್ಕಿಯ ಹಣವನ್ನು ಪಡಿತರದಾರರ ಖಾತೆಗೆ ಜಮಾವಣೆಯಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲಿದ್ದು, ಆ ಮೂಲಕ ಎಲ್ಲಾ ಮಹಿಳೆಯರ ಖಾತೆಗೆ ತಿಂಗಳಿಗೆ ತಲಾ ಎರಡು ಸಾವಿರ ಹಣ ಜಮಾವಣೆಯಾಗಲಿದೆ ಎಂದು ಶಾಸಕರು ಹೇಳಿದರು. ಜನರ ಹಿತಕ್ಕಾಗಿ ಕಾಂಗ್ರೆಸ್ ಈ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮದ ಕಟ್ಟಕಡೇಯ ಕುಟುಂಬಕ್ಕೂ ಈ ಸೌಲಭ್ಯ ದೊರೆಯುತ್ತಿದೆ. ಈ ಕಾರಣಕ್ಕೆ ಮತದಾರ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತಹಾಕುವ ಮೂಲಕ ಕಾಂಗ್ರೆಸ್‌ಗೆ ಶಕ್ತಿ ತುಂಬಲಿದ್ದಾರೆ ಎಂಬ ಪೂರ್ಣ ವಿಶ್ವಾವಿದೆ ಎಂದು ಶಾಸಕರು ಹೇಳಿದರು.
ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮಗಳ ಅಭಿವೃದ್ದಿಗೆ ವಿಶೇಷ ಮುತುವರ್ಜಿವಹಿಸುವುದು ಮತ್ತು ಇಲ್ಲಿ ಆಗಬೇಕಾದ ತುರ್ತು ಕಾಮಗಾರಿಗೆ ಸ್ಪಂದನೆ ನೀಡುವ ಕಾರ್ಯವೂ ನಡೆಯಲಿದೆ ಎಂದು ಶಾಸಕರು ಹೇಳಿದರು.

ಗೆದ್ದರೆ ಶಾಸಕರಿಗೆ ಸ್ಪೂರ್ತಿ: ಎಂ ಬಿ ವಿಶ್ವನಾಥ ರೈ
ಎರಡೂ ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತದಾರ ಆಶೀರ್ವಾದ ಮಾಡಬೇಕು ಆಮೂಲಕ ನಾವು ಶಾಸಕರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಬೇಕು.ಈಗಾಗಲೇ ಸಾವಿರಾರು ಬಡವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡುವುದು ಸೇರಿದಂತೆ ಗ್ರಾಮದ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದು ಇದು ಈ ಬರಿ ಪ್ರತಿಷ್ಟೆಯ ಚುನವಣೆಯಾಗಿದ್ದು ಗ್ರಾಮದ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮನವಿ ಮಾಡಿದರು.ನಿಡ್ಪಳ್ಳಿ ಕ್ಷೆತ್ರದ ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮತ್ತು ಬ್ಲಾಕ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಅವರುಗಳು ವಹಿಸಿಕೊಂಡಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರ ಸಹಕಾರದಿಂದ ವಾರ್ಡಿನಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಶಾಸಕರಿಂದ ನಿರೀಕ್ಷೆಗೂ ಮೀರಿದ ಕೆಲಸ: ಹೇಮನಾಥ ಶೆಟ್ಟಿ
ಶಾಸಕರು ನಿರೀಕ್ಷೆಗೂ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಜನರ ಪರವಾಗಿ ಮಾತನಾಡುತ್ತಿದ್ದಾರೆ. ಪುತ್ತೂರು ಕ್ಷೇತ್ರದ ಸಮಸ್ಯೆಯ ಜೊತೆಗೆ ಉಡುಪಿ ಮತ್ತು ದಕ ಜಿಲ್ಲೆಯ ಜನತೆಯ ಪರವಾಗಿ ಅಧಿವೇಶನದಲ್ಲಿ ಮಾತನಾಡುತ್ತಿದ್ದಾರೆ. ಧಾರ್ಮಿಕ ಸ್ಥಳಗಳ ಸಕ್ರಮೀಕರಣ, ಕೋವಿ ಅಡಮಾನ, ಅಡಿಕೆಗೆ ವಿಮೆ ಸೇರಿದಂತೆ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ವಿಚಾರದಲ್ಲಿ ನಿರಂತರ ಸರಕಾರದ ಗಮನಕ್ಕೆ ತರುವ ಮೂಲಕ ಕ್ಷೇತ್ರದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು. ಈಗ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಗ್ರಾಮಗಳ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನವನ್ನು ತರಲು ಸುಲಭವಾಗಲಿದ್ದು ಗ್ರಾಮದ ಅಭಿವೃದ್ದಿಯ ದೃಷ್ಟಿಯಿಂದ ಈ ಬಾರಿ ಎರಡೂ ಗ್ರಾಮಗಳಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಿಡ್ಪಳ್ಳಿ ವಾರ್ಡಿನ ಸಭೆಯು ತಂಬುತ್ತಡ್ಕ ಹಾಲು ಉತ್ಪಾದಕರ ಸಭಾಂಗಣದಲ್ಲಿ ನಡೆಯಿತು. ಆರ್ಯಾಪುವಾರ್ಡಿನ ಕಾರ್ಯಕರ್ತರ ಸಭೆಯು ಕಾಂಗ್ರೆಸ್ ಮುಖಂಡ ಮಹಾಬಲ ರೈ ಅವರ ಮನೆಯಲ್ಲಿ ನಡೆಯಿತು.

ಮಠಂದೂರು ನನ್ನ ವಿರುದ್ದ ಸುಳ್ಳು ಕೇಸು ದಾಖಲಿಸಿದ್ದರು: ಮಹಾಬಲ ರೈ
ಆರ್ಯಾಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ಸಿಗ ಮಹಾಬಲ ರೈ ಮಾತನಾಡಿ ಸಂಜೀವ ಮಠಂದೂರು ಅವರು ಶಾಸಕರಾಗಿದ್ದಾಗ ದ್ವೇಷ ರಾಜಕಾರಣ ಮಾಡುತ್ತಿದ್ದರು. ನಾನು ಕಾಂಗ್ರೆಸ್ಸಿಗ ಎಂಬ ಒಂದೇ ಕಾರಣಕ್ಕೆ ನನ್ನ ವಿರುದ್ದ ಪೊಲೀಸರ ಮೇಲೆ ಒತ್ತಡ ಹಾಕಿ ಕೇಸು ಮಾಡಿಸಿದ್ದರು. ಶಾಸಕರ ಉಪಟಳದ ಮಧ್ಯೆಯೂ ನಾವು ಆರ್ಯಾಪು ಗ್ರಾಮದಲ್ಲಿ ಪಕ್ಷವನ್ನು ಗಟ್ಟಿಗೊಳಿಸುತ್ತಲೇ ಬಂದಿದ್ದೇವೆ. ಅವರು ಹಾಕಿದ ಕೇಸು ಈಗಲೂ ಇದೆ ಎಂದು ಶಾಸಕರ ಮುಂದೆ ನೋವು ತೋಡಿಕೊಂಡರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರಾದ ಅಶೋಕ್ ರೈ ದ್ವೇಷ ರಾಜಕಾರಣ ಯಾರೂ ಮಾಡಬಾರದು, ನಾನು ಆಕೆಲಸವನ್ನು ಎಂದಿಗೂ ಮಾಡಲಾರೆ. ನಾನು ಕಾಂಗ್ರೆಸ್‌ನಿಂದ ಚುನಾಯಿತ ಶಾಸಕನಾದರೂ ಗೆದ್ದ ಮೇಲೆ ನಾನು ಎಲ್ಲರಿಗೂ ಶಾಸಕನಾಗಿದ್ದೇನೆ, ವೋಟು ಹಾಕಿದವರಿಗೂ , ಹಾಕದವರಿಗೂ ನಾನೇ ಶಾಸಕನಾಗಿರುವ ನಾನು ಯಾರ ಮೇಲೂ ದ್ವೇಷ ಸಾಧಿಸುವ ಕೆಲಸವನ್ನು ಮಾಡಬಾರದು ಅದು ರಾಜಕೀಯ ಮತ್ಸದ್ದಿತನವಲ್ಲ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳಿಧರ್ ರೈ ಮಠಂತಬೆಟ್ಟು ಮಾತನಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಮಲರಾಮಚಂದ್ರ, ಶಕೂರ್ ಹಾಜಿ, ಜಯಪ್ರಕಾಶ್ ಬದಿನಾರ್, ಸಿದ್ದಿಕ್ ಸುಲ್ತಾನ್, ಆಲಿಕುಂಞಿ ಕೊರಿಂಗಿಲ, ರವೀಂದ್ರ ರೈ ನೆಕ್ಕಿಲು, ಮಹಾಲಿಂಗ ನಾಯ್ಕ , ಶಿವರಾಮ ಆಳ್ವ ಬಳ್ಳಮಜಲು, ಶಶಿಕಿರಣ್ ರೈ ನೂಜಿಬೈಲು, ನಿಡ್ಪಳ್ಳಿ ಬೂತ್ ಅಧ್ಯಕ್ಷರಾದ ತಾರನಾಥ ನಾಯ್ಕ, ಶೀನಪ್ಪಪೂಜಾರಿ, ಸತೀಶ್ ರ‍್ಯ ಮುಂಡೂರು, ನಿಡ್ಪಳ್ಳಿ ಗ್ರಾ.ಪಂ ಅಭ್ಯರ್ಥಿ ಸತೀಶ್ ರೈ ನೆಲ್ಲಿಕಟ್ಟೆ, ಗ್ರಾಪಂ ಸದಸ್ಯರಾದ ಗ್ರೇಟಾ, ತುಳಸಿ, ಅವಿನಾಶ್ ರೈ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ಮೊಯಿದು, ಉಸ್ತುವಾರಿ ಬಾಲಚಂಧ್ರ ರೈ ಆನಾಜೆ, ಮಾಜಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ನಾಯ್ಕ, ಆಶಲತಾ, ವೆಂಕಪ್ಪ ನಾಯ್ಕ, ಸುರೇಂದ್ರ ರೈ ಬಳ್ಳಮಜಲು , ಆಸಿಫ್ ತಂಬುತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here