ಉಪ್ಪಿನಂಗಡಿ: ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಬಾರ್ಯತ್ತಾರು ಎಂಬಲ್ಲಿ ಸುಜಾನಂದ ರೈ ಎಂಬವರ ಭೂಮಿಯಲ್ಲಿ ಶಿಲಾಮಯ ದೇಗುಲವೊಂದರ ಕುರುಹುಗಳು ಪತ್ತೆಯಾಗಿದ್ದು, ಇತಿಹಾಸಕಾರರ ಅಧ್ಯಯನಕ್ಕೆ ಸೂಕ್ತವೆನಿಸಿದೆ.
ಗಿಡಗಂಟಿ ಪೊದೆಗಳು ಬೆಳೆದು ಮೇಲ್ನೋಟಕ್ಕೆ ಯಾವುದೂ ಗೋಚರಿಸದಿದ್ದರೂ, ಶತಮಾನಗಳ ಹಿನ್ನೆಲೆಯನ್ನು ಸಾದರಪಡಿಸುವ ಅಗಲವಾದ ಮುರಕಲ್ಲಿನಿಂದ ಕಟ್ಟಲಾದ ಪಂಚಾಂಗಗಳ ಕಲ್ಲುಗಳು ಪೊದೆಯ ಮಧ್ಯ ಭಾಗದಲ್ಲಿ ಅಲ್ಲಿಲ್ಲಿ ಕಾಣಿಸುತ್ತಿದೆ. ಮಾತ್ರವಲ್ಲದೆ ದೇವಾಲಯಗಳ ಬಳಿ ಇರುವಂತಹ ಬಾವಿ ಇಂದಿಗೂ ಗಿಡಮರಗಳ ಮಧ್ಯೆ ಸುಸ್ಥಿತಿಯಲ್ಲಿದ್ದು, ಇಲ್ಲಿ ದೇವಾಲಯವಿರುವುದನ್ನು ಖಚಿತಪಡಿಸುತ್ತಿದೆ. ಸುಜಾನಂದ ರೈ ಯವರ ಮನೆ ಸಮೀಪ ಹಲವು ಚಪ್ಪಡಿ ಕಲ್ಲುಗಳು ದೊರಕಿದ್ದು, ಅವೆಲ್ಲವೂ ಶಿಲಾಮಯ ದೇಗುಲದಲ್ಲಿ ಕಿಟಕಿ ದಾರಂದಗಳಿಗೆ ಬಳಸುವಂತಿದ್ದ ಸ್ವರೂಪದಲ್ಲಿದೆ.
ಸ್ಥಳೀಯ ನಿವಾಸಿಗರಾದ ವಿಶ್ವನಾಥ ಶೆಟ್ಟಿರವರು ಅಭಿಪ್ರಾಯಿಸಿದಂತೆ, ಸುತ್ತಮುತ್ತಲ ದೇವಾಲಯಗಳಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಈ ಗ್ರಾಮಕ್ಕೆ ಗ್ರಾಮ ದೇವಾಲಯವಾಗಿ ಶಿವ ದೇವಾಲಯವೊಂದು ಅಸ್ತಿತ್ವದಲ್ಲಿತ್ತೆಂದೂ, ಕಾಲಾಂತರದ ವಿದ್ಯಾಮಾನಗಳಿಂದಾಗಿ ಆ ದೇವಾಲಯ ಜೀರ್ಣ ಸ್ಥಿತಿಯಲ್ಲಿದೆ ಎಂದೂ ತಿಳಿದು ಬರುತ್ತಿತ್ತು. ಈ ಕಾರಣಕ್ಕಾಗಿ ಹಲವಾರು ಮಂದಿ ಇಲ್ಲಿಗೆ ಬಂದು ದೇವಾಲಯದ ಕುರುಹುಗಳಿದ್ದ ಸ್ಥಳಕ್ಕೆ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿರುತ್ತಾರೆ. ಅಲ್ಲಲ್ಲಿ ಕೆತ್ತನೆ ಕಲ್ಲುಗಳು ಕಾಣಿಸಿಕೊಂಡಿರುವುದು, ನಾಗರ ಹಾವಿನ ಸಂಚಾರ ಪದೇ ಪದೇ ಗೋಚರಿಸುತ್ತಿರುವುದು, ರಾತ್ರಿ ವೇಳೆ ದೇವಿ ಸಂಚಾರ ಗೋಚರಿಸುತ್ತಿರುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆಯಾದರೂ, ಇಲ್ಲಿ ಈ ಹಿಂದೆ ಇದೆ ಎನ್ನಲಾದ ದೇವಾಲಯದ ಬಗ್ಗೆ ಪ್ರಶ್ನಾ ಚಿಂತನೆಯನ್ನು ನಡೆಸಲು ಮತ್ತು ಆ ವೇಳೆ ದೊರಕುವ ನಿರ್ದೇಶನಗಳನ್ನು ಪಾಲಿಸಲು ನಾವು ಸಮರ್ಥರಾಗಿಲ್ಲ ಎಂದು ತಿಳಿಸುತ್ತಾರೆ.
ಗ್ರಾಮಕ್ಕೆ ಪ್ರಧಾನ ದೇಗುಲವಾಗಿದ್ದ ದೇವಾಲಯ ಇದೇ ಎನ್ನುವುದಾದರೆ ಗ್ರಾಮದ ಜನತೆ ಒಗ್ಗೂಡಿ ದೇವಾಲಯದ ಬಗ್ಗೆ ನಿಖರ ಇತಿಹಾಸ ತಿಳಿಯಲು ಪ್ರಶ್ನಾ ಚಿಂತನೆಯನ್ನು ನಡೆಸಬೇಕಾಗಿದೆ.
ಅದರ ಹೊರತಾಗಿಯೂ ಶಿಲಾಮಯ ದೇಗುಲವೊಂದು ಅಸ್ತಿತ್ವದಲ್ಲಿದ್ದು ಪ್ರಸಕ್ತ ಜೀರ್ಣ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ನಿಖರ ಕಾರಣವನ್ನು ಇತಿಹಾಸ ಅಧ್ಯಯನಕಾರರೂ ಇಲ್ಲಿ ಗಮನ ಹರಿಸಬಹುದಾಗಿದೆ. ಇತಿಹಾಸ ಅಧ್ಯಯನಕ್ಕೆ ಪೂರಕವಾಗಿ ಇಲ್ಲಿ ಬಹಳಷ್ಟು ಶಿಲಾ ಕಲ್ಲುಗಳು ಲಭ್ಯವಿದೆ. ಸರಕಾರವೂ ಇದರತ್ತ ಚಿತ್ತವಿರಿಸಿದರೆ ಕಾಲಗರ್ಭದಲ್ಲಿ ಹುದುಗಿಹೋಗಿರುವ ಹಲವಾರು ವಿಚಾರಗಳು ಬೆಳಕಿಗೆ ಬರಬಹುದಾಗಿದೆ.