@ ಸಿಶೇ ಕಜೆಮಾರ್
ತುಳುವರಿಗೆ ಪ್ರತಿಯೊಂದು ತಿಂಗಳು ಕೂಡ ವಿಶೇಷವೇ. ಇಂದಿನಿಂದ ಆರಂಭವಾಗುವ ಆಟಿ ತಿಂಗಳು ಕೂಡ ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರ ತಿಂಗಳು. ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದೇ ಆಟಿ ಅಮಾವಾಸ್ಯೆಯ ದಿನ. ಆಟಿ ತಿಂಗಳಿಗೆ ತುಳುನಾಡಿನಲ್ಲಿ ತನ್ನದೇ ಆದ ವಿಶೇಷತೆ ಇದೆ. ಆಟಿ ಕಷ್ಟದ ತಿಂಗಳು ಆದರೂ ಇಷ್ಟದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಆರಂಭವಾಗುತ್ತಿದೆ ಎಂದರೆ ಜನರಲ್ಲಿ ಭಯ. ಈ ವರ್ಷದ ಆಟಿ ತಿಂಗಳು ಹೇಗಿರುತ್ತದೋ? ʼಧೋʼ ಎಂದು ಸುರಿಯುವ ಮಳೆ ನಿಲ್ಲುತ್ತದೊ ಇಲ್ಲವೋ ಎಂಬ ಚಿಂತೆ ಕಾಡುತ್ತಿತ್ತು. ಆದರೆ ಕಾಲ ಬದಲಾದಂತೆ ಆಟಿ ತಿಂಗಳ ಸ್ವರೂಪ ಕೂಡ ಬದಲಾಗಿದೆ. ಈ ಹಿಂದಿನಂತೆ ಧೋ ಎಂದು ಸುರಿಯುವ ಮಳೆ ಈಗ ಕಾಣುತ್ತಿಲ್ಲ. ಹಿಂದಿನ ಕಾಲದ ಭಯ, ಕಷ್ಟಗಳು ಈಗಿಲ್ಲ. ತುಳುವರಿಗೆ ಆಟಿ ಎಂದರೆ ಆಷಾಢ. ಈ ತಿಂಗಳಲ್ಲಿ ಮದುವೆ, ಗೃಹಪ್ರವೇಶ,ಹೊಸ ಮನೆ ಖರೀದಿ, ಹೊಸ ಜಾಗ ಖರೀದಿ ಇತ್ಯಾದಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಶುಭ ಕಾರ್ಯಗಳನ್ನು ಮಾಡಬೇಕಾದರೆ ಆಟಿ ತಿಂಗಳು ಕಳೆಯಬೇಕು. ಆದರೆ ಆಟಿ ತಿಂಗಳಲ್ಲಿ ತುಳುವರು ಆಚರಿಸುವ ಪದ್ಧತಿಗಳು ಮಾತ್ರ ಅತ್ಯಂತ ವಿಶಿಷ್ಟ.
ಆಟಿ ತಿಂಗಳಲ್ಲಿ ತುಳುವರ ಅಡುಗೆ ಮನೆಯಲ್ಲಿ ವಿವಿಧ ಬಗೆಯ ಖಾದ್ಯಗಳು ತಯಾರಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಸಾಮಾಗ್ರಿಗಳು ಆಟಿ ತಿಂಗಳಿಗೆ ಮುಗಿದು ಬಿಟ್ಟು ಆಹಾರದ ಕೊರತೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತುಳುನಾಡಿನ ಜನ ಆಟಿಯಲ್ಲಿ ಪ್ರಕೃತಿಯ ಮೊರೆ ಹೋಗಿ ಅಲ್ಲಿ ಸಿಗುವಂತಹ ಸಸ್ಯ ಚಿಗುರು,ಗಡ್ಡೆ ಗೆಣಸು,ಫಲವಸ್ತುಗಳನ್ನು ಉಪಯೋಗಿಸಿ ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಸೇವಿಸುವುದು ಸಂಪ್ರದಾಯವಾಗಿದೆ. ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರೆಯುವ ಫಲವಸ್ತುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವ ನಂಬಿಕೆಯೂ ಇದೆ. ಆಟಿ ತಿಂಗಳಿಗಾಗಿಯೇ ತಯಾರಿಸಿದ ಹಪ್ಪಳ, ಸಾಂತಣಿ, ಹಲಸಿನ ಬೀಜ, ಉಪ್ಪು ನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ, ಉಪ್ಪಡಚ್ಚಿಲ್, ನೀರು ಕುಕ್ಕು ಇತ್ಯಾದಿಗಳ ತಿನಿಸುಗಳನ್ನು ತಯಾರಿಸಲಾಗುತ್ತದೆ. ಅರಿಶಿನ ಎಲೆಯ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ,ಎಳೆ ಬಿದಿರಿನ ಪಲ್ಯ, ಉಪ್ಪಿನಕಾಯಿ, ತಜಂಕ ಪಲ್ಯ, ಮೋಡೆ, ಹಲಸಿನ ಎಲೆಯ ಕಡುಬು, ಹಲಸಿನ ಕಡುಬು, ಪತ್ರೊಡೆ, ಕೆಸುವಿನ ಚಟ್ನಿ, ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಸೌತೆ ಪದೆಂಗಿ ಗಸಿ, ತಜಂಕ್ ವಡೆ, ತೇವು ಪದ್‌ಪೆ ಗಸಿ ಇತ್ಯಾದಿ ತಿನಿಸಿಗಳನ್ನು ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ. ತಿನ್ನಬಹುದಾಗಿದೆ.
ತುಳುನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ ಅದು ಆಟಿ ಕಳೆಂಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ, ಪರವ ಮತ್ತು ಪಾಣಾರ ಜನಾಂಗದವರು ಈ ಆಟಿ ಕಳೆಂಜ ನಲಿಕೆಯನ್ನು ನಡೆಸಿಕೊಡುತ್ತಾರೆ. ಇದು ಆಟಿ ತಿಂಗಳಲ್ಲಿ ನಡೆಸುವ ವಿಶೇಷ ಕುಣಿತ. ಆಟಿ ಕಳೆಂಜನನ್ನು ಮಾರಿ ಅಂದರೆ ದುಷ್ಟ ಶಕ್ತಿಗಳನ್ನು, ರೋಗ ರುಜಿನಗಳನ್ನು ಓಡಿಸುವ ಮಾಂತ್ರಿಕ ಎಂದು ನಂಬಲಾಗಿದೆ. ಜನರಿಂದ ಹಿಡಿದು ಪ್ರಾಣಿ ಪಕ್ಷಿಗಳಿಗೂ ಆಟಿ ತಿಂಗಳಲ್ಲಿ ರೋಗ ರುಜಿನಗಳು ಅಂಟಿ ಕೊಳ್ಳುತ್ತವೆ. ಊರಿಗೆ ಬಂದಂತಹ ಮಾರಿಯನ್ನು ಅಂದರೆ ರೋಗವನ್ನು ಓಡಿಸುವ ಸಲುವಾಗಿ ದೇವರ ಪ್ರತಿನಿಧಿಯಾಗಿ ಆಟಿ ಕಳೆಂಜ ಉರಿಗೆ ಬರುತ್ತಾನೆ. ಕಳೆಂಜ ವೇಷಧಾರಿಯು ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಕೈಗೆ ಮೈಗೆ ಬಣ್ಣ, ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಟೊಪ್ಪಿ ಇವುಗಳನ್ನು ಧರಿಸಿರುತ್ತಾರೆ. ಕೈಯಲ್ಲಿ ತಾಳೆಗರಿಯ ತತ್ರ ಅಂದರೆ ಛತ್ರಿ ಇರುತ್ತದೆ. ಈ ಛತ್ರಿಯನ್ನು ತಿರುಗಿಸುತ್ತಾ ಕುಣಿಯುತ್ತಾನೆ. ಕುಣಿಯಲು ಹಿಮ್ಮೆಳವಾಗಿ ತೆಂಬರೆ ಒಂದು ರೀತಿಯ ಚರ್ಮ ವಾದ್ಯವನ್ನು ಬಳಸಲಾಗುತ್ತದೆ. ಕುಣಿಯುವ ಸಂದರ್ಭದಲ್ಲಿ ಆಟಿ ಕಳೆಂಜನ ಪಾದ್ದನವನ್ನು ಕೂಡ ಹೇಳಲಾಗುತ್ತದೆ. ಮನುಷ್ಯನಿಗಾಗಲಿ, ಪ್ರಾಣಿ ಪಶುಗಳಿಗಾಗಲಿ ಬಂದ ಮಾರಿಯನ್ನು ಅಥವಾ ರೋಗವನ್ನು ಓಡಿಸುವುದು ಆಟಿಕಳೆಂಜನ ಕಾರ್ಯ ಎಂಬುದಾಗಿ ಪಾದ್ದನದಿಂದ ತಿಳಿದು ಬರುತ್ತದೆ. ಆಟಿ ತಿಂಗಳಲ್ಲಿ ಆಟಿ ಕಳೆಂಜ ಮನೆಗೆ ಬಂದರೆ ರೋಗ ರುಜಿನಗಳ ನಿವಾರಣೆಯಾಗುತ್ತದೆ ಎನ್ನುವುದು ತುಳುವರ ನಂಬಿಕೆ. ಕಳೆಂಜ ಮನೆಗೆ ಬಂದಾಗ ಮನೆಯ ಯಜಮಾನ ಅಥವಾ ಹಿರಿಯರು ಕಳೆಂಜನಲ್ಲಿ ತಮ್ಮ ಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ಕಳೆಂಜ ಪಾತ್ರಧಾರಿ ನೀರು ಹೊಯ್ಯುವ ಕ್ರಮಗಳನ್ನು ಕೂಡ ಮಾಡುತ್ತಾನೆ. ಮುಖ್ಯವಾಗಿ ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ, ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ, ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ,ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಕ್ರಮ ಕೂಡ ಕಳೆಂಜ ಮಾಡುತ್ತಾನೆ. ಒಟ್ಟಿನಲ್ಲಿ ಮನೆಗೆ ಬಂದು ಮಾರಿಯನ್ನು ಓಡಿಸಿ, ನಾಡಿನ ಫಸಲಿನ ಸಂರಕ್ಷಕವಾಗಿ ಕಳೆಂಜ ಕಾಣುತ್ತಾನೆ. ಊರಿಗೆ ಬಂದ ಮಾರಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಜನ ಸಮುದಾಯಕ್ಕೆ ತರುವುದೇ ಕಳೆಂಜ ಕುಣಿತದ ಆಶಯವಾಗಿದೆ. ಹೀಗೆ ಮಾರಿ ಓಡಿಸಿದ ಆಟಿ ಕಳೆಂಜನಿಗೆ ಮನೆಯೊಡೆಯ ಅಕ್ಕಿ ಅಥವಾ ಪಣವು ನೀಡಿ ಕಳುಹಿಸುತ್ತಾನೆ.
ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಆಟಿಯ ಅಮಾವಾಸ್ಯೆಯಂದು ಆಗಿದೆ. ಈ ದಿನವೇ ಆಟಿದ ಅಗೇಲು ಕೊಡುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ತುಳುವರು ದೈವರಾಧಕರು. ಮನೆಯ ದೈವಗಳಿಗೆ ಈ ದಿನ ವಿಶೇಷವಾದ ಅಗೇಲು ಬಡಿಸುವ ಕ್ರಮ ಮಾಡುತ್ತಾರೆ. ಇದಲ್ಲದೆ ನಮ್ಮನ್ನಗಲಿದ ಮನೆಯ ಸದಸ್ಯರಿಗೆ ಅಂದರೆ ಪ್ರೇತಗಳಿಗೆ ಬಡಿಸುವ ಕ್ರಮವೂ ನಡೆಯುತ್ತದೆ.ತುಳುವರದ್ದು ಕೂಡು ಕುಟುಂಬ ಪದ್ಧತಿ. ಹಾಗಿದ್ದ ಮೇಲೆ ಸಾವು ಇಲ್ಲದ ಮನೆಯನ್ನು ಹುಡುಕುವುದು ಕಷ್ಟ. ಮನುಷ್ಯನ ಆತ್ಮವನ್ನು ತುಳುವರು ಪ್ರೇತ, ಕುಲೆ ಎಂದು ನಂಬುತ್ತಾರೆ. ಮನೆಯಲ್ಲಿ ಮರಣ ಹೊಂದಿದವರಿಗೆ ಆಟಿ ಅಮಾವಾಸ್ಯೆ ದಿನ ವಿಶೇಷ ಅಗೇಲು ಬಡಿಸುವ ಕ್ರಮ ತುಳುನಾಡಿನಲ್ಲಿ ನಡೆಯುತ್ತದೆ. ಇನ್ನು ಆಟಿ ಅಮಾವಾಸ್ಯೆ ದಿನ ಹಾಲೆ ಮರದ ರಸ ಅಂದರೆ ಆಟಿದ ಮರ್ದ್ ಕುಡಿಯುವ ಕ್ರಮ ತುಳುನಾಡಿನಲ್ಲಿ ಪ್ರಚಲಿತವಾಗಿದೆ. ಹಾಲೆ ಮರ ಅಂದರೆ ಡೆವಿಲ್ ಟ್ರೀ ಇದರ ತೊಗಟೆಯ ರಸವನ್ನು ಈ ದಿನ ಕುಡಿಯುತ್ತಾರೆ. ಬೆಳಗ್ಗಿನ ಜಾವ ಹಾಲೆ ಮರದ ತೊಗಟೆಯನ್ನು ಚೂಪು ಕಲ್ಲಿನಲ್ಲಿ ಜಜ್ಜಿ ತರಲಾಗುತ್ತದೆ. ಹೀಗೆ ತಂದ ತೊಗಟೆಯಿಂದ ರಸ ತೆಗೆದು ಅದನ್ನು ಸೋಸಿ ಕುಡಿಯುತ್ತಾರೆ. ಈ ರಸದಲ್ಲಿ ವಿಶೇಷವಾದ ಔಷಧೀಯ ಗುಣವಿದೆ ಎಂದು ನಂಬಲಾಗಿದೆ. ಆಟಿ ಅಮಾವಾಸೆ ದಿನ ಸಾವಿರದೊಂದು ಬಗೆಯ ಔಷಧಿಗಳು ಈ ರಸದಲ್ಲಿ ಕೂಡಿಕೊಂಡಿರುತ್ತವೆ ಎಂಬುದು ತುಳುವರ ನಂಬಿಕೆ. ಒಟ್ಟಿನಲ್ಲಿ ಆಟಿ ಹಲವು ಕೌತುಕಗಳ ಆಗರವೂ ಆಗಿದೆ.