ಪುತ್ತೂರು: ಹೆಣ್ಮಕ್ಕಳ ಪಾಲಿನ ಅಭ್ಯುದಯದ ಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ದೂರದೃಷ್ಟಿ ಉದ್ದೇಶದೊಂದಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ ಹೇಳಿದರು. ಸಂಸ್ಥೆಯಲ್ಲಿ ಜು.30ರಂದು ನಡೆದ ಅನಿವಾಸಿ ನಾಯಕರ ಸಂಗಮದಲ್ಲಿ ಅವರು ಮಾತನಾಡಿದರು.
ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಮಾತನಾಡಿ ಮರ್ಕಝುಲ್ ಹುದಾ ವಿದ್ಯಾಸಂಸ್ಥೆ ಸಮಾಜಕ್ಕೆ ರೋಲ್ ಮಾಡೆಲ್ ಆಗಿದ್ದು ಹಲವರ ಕಠಿಣ ಪರಿಶ್ರಮದ ಫಲವಾಗಿ ಇಂದು ಈ ಮಟ್ಟಕ್ಕೆ ಬೆಳೆದು ಬಂದಿದೆ. ಮುಂದೆ ಈ ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಕಾಣಬೇಕಾಗಿದೆ ಎಂದು ಹೇಳಿದರು. ಎಂ.ಎಚ್.ಕೆ ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಷಾದ್ ಪೋಳ್ಯ ಮಾತನಾಡಿ ಇಂದಿನ ಮರ್ಕಝ್ಗೂ ಅಂದಿನ ಮರ್ಕಝ್ಗೂ ಅಜಗಜಾಂತರ ವ್ಯತ್ಯಾಸವಿದ್ದು ಪ್ರಸ್ತುತ ಮರ್ಕಝ್ ಅದ್ಭುತ ಸಾಧನೆ ಮಾಡಿದೆ ಎಂದು ಹೇಳಿದರು. ಎಂ.ಎಚ್.ಕೆ ಸೌದಿ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಶಾಹುಲ್ ಹಮೀದ್ ಉಜಿರೆ ಮಾತನಾಡಿ ಸಮಿತಿಯ ಸದಸ್ಯರ ಅವಿರತ ಶ್ರಮ ಇಲ್ಲಿ ಯಶಸ್ಸನ್ನು ನೀಡಿದ್ದು ಉನ್ನತ ಕೋರ್ಸ್ ಅಳವಡಿಸುವ ಮೂಲಕ ಸಂಸ್ಥೆ ಇನ್ನಷ್ಟು ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ಉಪಾಧ್ಯಕ್ಷ ಡಾ.ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಮಾತನಾಡಿ ಹಲವು ತ್ಯಾಗಗಳನ್ನು ದಾಟಿ ಈ ಸಂಸ್ಥೆ ಇಂದು ಬೆಳೆದು ಬಂದಿದೆ, ಒಂದು ಮಹಿಳೆ ಕಲಿತರೆ ಒಂದು ಕುಟುಂಬವನ್ನು ಬೆಳೆಗಿಸಿದಂತೆ, ಧಾರ್ಮಿಕ ಮತ್ತು ಲೌಖಿಕ ಈ ಎರಡೂ ವಿದ್ಯೆ ಅತ್ಯವಶ್ಯಕ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದುಬೈ ಸಮಿತಿಯ ಅಧ್ಯಕ್ಷ ಸಲೀಂ ಸಖಾಫಿ, ಹಮೀನ್ ಸಅದಿ, ಆಡಳಿತ ಸಮಿತಿಯ ಕರೀಂ ಹಾಜಿ ಕಾವೇರಿ, ಆಶಿಕುದ್ದೀನ್ ಅಖ್ತರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿ ವಂದಿಸಿದರು.