ಪುಣ್ಚತ್ತಾರಿನಲ್ಲಿ ಶ್ರೀ ಹರಿ ರಿಕ್ಷಾ ತಂಗುದಾಣ ಲೋಕಾರ್ಪಣೆ

0

ತುರ್ತು ಸಮಯದಲ್ಲೂ ಸ್ಪಂದಿಸುವ ಗುಣ ರಿಕ್ಷಾ ಚಾಲಕರದ್ದು- ಭಾಗೀರಥಿ ಮುರುಳ್ಯ

ಕಾಣಿಯೂರು: ಎಷ್ಟೇ ಕಷ್ಟ ಇರಲಿ, ಯಾವುದೇ ಸಮಸ್ಯೆಯಿರಲಿ ರಿಕ್ಷಾ ಚಾಲಕರು ತಕ್ಷಣ ಸ್ಪಂದಿಸುವ ಗುಣ ಹೊಂದಿರುತ್ತಾರೆ. ಅನೇಕ ತುರ್ತು ಸಂದರ್ಭದಲ್ಲಿಯೂ ಸಮಾಜದಲ್ಲಿ ರಿಕ್ಷಾ ಚಾಲಕರ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಸೇವೆಯನ್ನು ಗುರುತಿಸಿ ಮುರುಳ್ಯ ಭಾಸ್ಕರ ಗೌಡರು ರಿಕ್ಷಾ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಸುಮಾರು ರೂ 1.70 ಲಕ್ಷ ವೆಚ್ಚದಲ್ಲಿ ಭಾಸ್ಕರ ಗೌಡ ಮುರುಳ್ಯ ಅವರು ಪುಣ್ಚತ್ತಾರಿನಲ್ಲಿ ನಿರ್ಮಿಸಿಕೊಟ್ಟ ಶ್ರೀ ಹರಿ ರಿಕ್ಷಾ ತಂಗುದಾಣವನ್ನು ಜು.15ರಂದು ಅವರು ಉದ್ಘಾಟಿಸಿ, ಬಳಿಕ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್‌ನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಮಾತನಾಡಿ, ಎಷ್ಟೋ ಮಂದಿ ಕೋಟ್ಯಾಧಿಪತಿಯಾಗಿದ್ದರೂ ಕೊಡುಗೈ ದಾನಿಗಳಾಗಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿಯೂ ರಿಕ್ಷಾ ಚಾಲಕರಿಗೆ ಸುಸಜ್ಜಿತ ರಿಕ್ಷಾ ತಂಗುದಾಣವನ್ನು ನಿರ್ಮಿಸಿಕೊಟ್ಟ ಭಾಸ್ಕರ ಗೌಡರು ಮಾದರಿಯಾಗಿದ್ದಾರೆ. ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಅದರೊಂದಿಗೆ ಸಂಘದ ಕೆಲವೊಂದು ನಿಬಂಧನೆಗಳನ್ನು ಸದಸ್ಯರು ಪಾಲಿಸಿಕೊಳ್ಳಬೇಕು. ಸಂಬಂಧಪಟ್ಟ ದಾಖಲೆಗಳನ್ನು ಚಾಲನೆ ವೇಳೆ ಇಟ್ಟುಕೊಳ್ಳಬೇಕು. ಆ ಮೂಲಕ ಪುಣ್ಚತ್ತಾರಿನ ರಿಕ್ಷಾ ಚಾಲಕ ಮಾಲಕರ ಸಂಘವನ್ನು ಬೆಳೆಸಿಕೊಂಡು ಊರಿನ ಜನತೆಯ ಸೇವೆ ಮಾಡಬೇಕು ಎಂದರು.


ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘ ಗೌರವಾಧ್ಯಕ್ಷರು, ಕಾಣಿಯೂರು ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ವೃತ್ತಿಯಲ್ಲಿ ಪ್ರಾಮಾಣಿಕ ಗುಣಗಳನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ. ರಿಕ್ಷಾ ತಂಗುದಾಣದ ಒಳ ಚರಂಡಿ ಕಾಮಗಾರಿಗಾಗಿ ಗ್ರಾ.ಪಂ, ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯತ್‌ನಿಂದ ಅನುದಾನವನ್ನು ನೀಡಲಾಗಿದ್ದು, ಅದನ್ನು ಸರಕಾರದ ಕರ್ತವ್ಯದ ನೆಲೆಯಿಂದ ನೀಡಿದ್ದೇವೆ. ದಾನಿಗಳಾದ ಮುರುಳ್ಯ ಭಾಸ್ಕರ ಗೌಡರು ವಿಶೇಷವಾಗಿ ತನ್ನ ಸಂಪಾದನೆಯಿಂದ ಸಮಾಜ ಸೇವೆಗಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಲಯನ್ಸ್ ಜಿಲ್ಲೆ ಪೂರ್ವ ಗವರ್ನರ್ ಡಾ| ಗೀತಾಪ್ರಕಾಶ್ ಮಾತನಾಡಿ, ಪುಣ್ಯವನ್ನು ಇಹಲೋಕದಲ್ಲಿ ಪಡೆಯಬೇಕಾದರೆ ಇತರರ ಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ಆ ಪುಣ್ಯದ ಫಲವನ್ನು ಜೀವಿತದ ಕಾಲದಲ್ಲಿ ಅಸ್ವಾದಿಸಲು ಸಾಧ್ಯವಾಗುತ್ತದೆ. ರಿಕ್ಷಾ ಚಾಲಕರ ಸಂಘದ ಬಹುದಿನದ ಬೇಡಿಕೆಯನ್ನು ಪೂರೈಸಿದ ಸಂತೃಪ್ತಿ ಭಾಸ್ಕರ ಗೌಡರ ಕುಟುಂಬಕ್ಕೆ ಇದೆ. ರಿಕ್ಷಾ ಚಾಲಕರು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಆ ಮೂಲಕ ಪುಣ್ಚತ್ತಾರಿನ ರಿಕ್ಷಾ ಚಾಲಕ ಮಾಲಕರ ಸಂಘ ಉತ್ತಮ ಸಂಘವಾಗಿ ಮೂಡಿ ಬರಬೇಕು ಎಂದರು.

ಲಯನ್ಸ್ ಜಿಲ್ಲಾ ಸಂಪುಟ ಸಂಯೋಜಕ ಜಾಕೆ ಮಾಧವ ಗೌಡ ಅಭಿನಂದನಾ ಭಾಷಣ ಮಾಡಿ,ಕಷ್ಟದಲ್ಲಿರುವ ಜನರಿಗೆ ಸಹಾಯವನ್ನು ಮಾಡುವ ಮೂಲಕ ಪ್ರತಿಯೊಬ್ಬರು ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ರಿಕ್ಷಾ ಚಾಲಕರು ಯಾವುದೇ ರೀತಿಯ ತೊಂದರೆಯಿಲ್ಲದೇ, ನೆಮ್ಮದಿಯ ವಾತವರಣದಲ್ಲಿರಬೇಕೆಂದು ಮನಗಂಡ ಭಾಸ್ಕರ ಗೌಡರು ಸುಸಜ್ಜಿತ ರಿಕ್ಷಾ ತಂಗುದಾಣದ ನಿರ್ಮಾಣಕ್ಕೆ ಕೈಜೋಡಿಸಿರುವುದು ಅಭಿನಂದನೀಯ ಎಂದರು.

ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ ಮಾತನಾಡಿ, ನಮ್ಮ ಕಷ್ಟ ಸುಖವನ್ನು ಹಂಚಿಕೊಂಡಾಗ ನಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ಭಾಸ್ಕರ ಗೌಡರದ್ದು. ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡ ಭಾಸ್ಕರ ಗೌಡರು ಪುಣ್ಚತ್ತಾರಿನ ರಿಕ್ಷಾ ಚಾಲಕರ ಮನವಿಗೆ ತಕ್ಷಣ ಸ್ಪಂದಿಸಿದ್ದಾರೆ ಎಂದರು.

ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಪೈಕ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಅಧ್ಯಕ್ಷ ಮಧುಕರ ಬೇಂಗಡ್ಕ, ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಿರೀಶ್ ಬೀಜತಡ್ಕ, ಕಾರ್ಯದರ್ಶಿ ಭರತ್ ರೈ ಮಾಳ, ಪಂಜ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ, ಆನಂದ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಶಾಂತ್ ಮುರುಳ್ಯ, ಭಾಸ್ಕರ ಗೌಡ ಕೊಜಂಬೇಡಿ, ಸೀತಾರಾಮ ಅಬ್ಬಡ, ಸಂತೋಷ್ ಜಾಕೆ, ಪುಟ್ಟಣ್ಣ ಗೌಡ, ಉಮೇಶ್ ಬೀರುಕುಡಿಕೆ, ದಿನೇಶ್ ಬೈಲಡ್ಡೆ, ಗಂಗಾಧರ ಉಪ್ಪಡ್ಕ, ದಿನೇಶ್ ಕರಿಮಜಲು, ಸುರೇಶ್ ನಡ್ಕ ಅತಿಥಿಗಳನ್ನು ಗೌರವಿಸಿದರು. ಶ್ರೇಯಾಂಸಕುಮಾರ್ ಶೆಟ್ಟಿಮೂಲೆ, ಗಿರೀಶ್ ಬೀಜತಡ್ಕ, ಮೋಹನ್‌ದಾಸ್ ರೈ, ಬಾಲಕೃಷ್ಣ ನಳಿಯಾರು, ಜನಾರ್ದನ ದೋಳ್ಪಾಡಿ, ಶಿವರಾಮ ರೈ ಪಿಜಕ್ಕಳ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾನ್ಯ ಇಡ್ಯಡ್ಕ ಪ್ರಾರ್ಥಿಸಿದರು. ಸಂಘದ ಸದಸ್ಯ ಶಿವರಾಮ ರೈ ಪಿಜಕ್ಕಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ವಂದಿಸಿದರು. ಪಂಜ ಲಯನ್ಸ್ ಕ್ಲಬ್‌ನ ಸದಸ್ಯ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
ಪುಣ್ಚತ್ತಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹರಿ ರಿಕ್ಷಾ ತಂಗುದಾಣಕ್ಕೆ ರೂ 1.70ಲಕ್ಷವನ್ನು ಕೊಡುಗೆಯಾಗಿ ನೀಡಿದ ಭಾಸ್ಕರ ಗೌಡ ಮುರುಳ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸಾಮಾಜಿಕ ಕಾರ್ಯಕರ್ತ, ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಪೈಕ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here