ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡುವವರ ಪೈಕಿ ತೀರಾ ಬಡವರಾಗಿದ್ದ 20 ಮಂದಿ ಡಯಾಲಿಸೀಸ್ ರೋಗಿಗಳಿಗೆ ಪ್ರತೀ ತಿಂಗಳು 1000/- ರೂಪಾಯಿಯ ಔಷಧಿ ಮತ್ತು ಡಯಾಲಿಸೀಸ್ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಸೇವಿಸಲು ತಿಂಗಳಿಗೆ 480/- ರೂಪಾಯಿಯ ಕೂಪನ್ ನೀಡುವ ಕಾರ್ಯಕ್ರಮವನ್ನು ಪುತ್ತೂರು ಬೊಳ್ವಾರಿನಲ್ಲಿರುವ ಹೆಲ್ತ್ ಪ್ಲಸ್ ಮೆಡಿಕಲ್‌ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಪ್ರಾರಂಭಿಸಲಾಗಿದ್ದು ಜು.15ರಂದು ಒಂದು ವರ್ಷದ ಉಚಿತ ಮೆಡಿಸಿನ್ ಕಾರ್ಡ್‌ನ್ನು ವಿತರಿಸಲಾಯಿತು. ಅನಿವಾಸಿ ಭಾರತೀಯ ಅಬ್ದುಲ್ ಸತ್ತಾರ್ ಮತ್ತು ತೌಸೀರ್ ಅಹಮದ್‌ರವರು ಇದಕ್ಕೆ ಸಹಕರಿಸಿದ್ದಾರೆ.
ಹೆಲ್ತ್ ಪ್ಲಸ್ ಮೆಡಿಕಲ್ಸ್‌ನ ಪಾಲುದಾರರಾದ ಆಸಿಫ್ ಮತ್ತು ಅಕ್ಬರ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯಿತಿಯಲ್ಲಿ ಔಷಧಿ ನೀಡುವ ಕುರಿತು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಜಯದೀಪ್ ಮಾತನಾಡಿ ಈಗಾಗಲೇ ರೋಟರಿ ಮೂಲಕ 6 ಡಯಾಲಿಸೀಸ್ ಮೆಶಿನ್ ಸರಕಾರಿ ಆಸ್ಪತ್ರೆಗೆ ಬಂದಿದ್ದು ಒಟ್ಟು 12 ಮೆಶಿನ್ ಕಾರ್ಯಚರಿಸುತ್ತಿದೆ. 94 ಜನ ರೋಗಿಗಳ ಪೈಕಿ ತೀರಾ ಬಡವರನ್ನ ಹುಡುಕಿ ಮಾಡುವ ಈ ಸೇವೆ ಅತೀ ಉತ್ತಮವಾದುದು ಆಗಿದೆ. ಸಂಘ ಸಂಸ್ತೆ ಮತ್ತು ಇನ್ನಿತರರಿಂದ ರೋಗಿಗಳಿಗೆ ಸಹಾಯ ಆದಾಗ ಅವರ ಕಷ್ಟ ತಕ್ಕ ಮಟ್ಟಿಗೆ ಪರಿಹಾರ ಆಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಫುದ್ದೀನ್ ತಂಙಳ್ ಮಾತನಾಡಿ ರೋಗಿಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯವಾಗಿದ್ದು ಕಷ್ಟದಲ್ಲಿದ್ದಾಗ ಸಹಾಯ ಮಾಡುವವರಿಗೆ, ಇದಕ್ಕೆ ಸಹಾಯ ಮಾಡಿದವರಿಗೆ ದೇವರು ಪ್ರತಿಫಲ ಕೊಡುತ್ತಾನೆ ಎಂದು ಹೇಳಿದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಹೆಲ್ತ್ ಪ್ಲಸ್ ಮೆಡಿಕಲ್ ಮೂಲಕ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ನವರು ಕೊಡಮಾಡುವ ಈ ದಾನದಲ್ಲಿ ಸರ್ವ ಧರ್ಮದವರು ಇದ್ದು ಇದು ಎಲ್ಲರ ಮನ ಗೆಲ್ಲುವ ಸಂಗತಿಯಾಗಿದೆ. ಸಮಾಜ ಸೇವೆಯಲ್ಲಿ ಅತೀ ಉತ್ತಮ ಸೇವೆ ಇದಾಗಿದ್ದು ಹೆಲ್ತ್ ಸೆಂಟರ್ ನವರ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ 20 ಜನ ರೋಗಿಗಳಿಗೆ ಹೆಲ್ತ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಿದ್ದು ಮುಂದಕ್ಕೆ ದಾನಿಗಳ ನೆರವಿನೊಂದಿಗೆ ಇನ್ನಷ್ಟು ರೋಗಿಗಳಿಗೆ ಸಹಾಯ ಒದಗಿಸಲು ಪ್ರಯತ್ನಿಸಲಾಗುವುದು.
ರಫೀಕ್ ದರ್ಬೆ, ಮಾಜಿ ಸದಸ್ಯರು ಆರೋಗ್ಯ ರಕ್ಷಾ ಸಮಿತಿ, ಸರಕಾರಿ ಆಸ್ಪತ್ರೆ ಪುತ್ತೂರು