ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯೆ ನೀಡಿದ್ದ ದೂರು ರದ್ದು-ಅಟ್ರಾಸಿಟಿ ಕಾಯ್ದೆಯ ದುರ್ಬಳಕೆ ಎಂದು ತೀರ್ಪು ನೀಡಿದ ಹೈಕೋರ್ಟ್

0
  • ಪುತ್ತೂರು: ಐಷಾರಾಮಿ ಫ್ಲ್ಯಾಟ್ ಬಾಡಿಗೆಗೆ ಪಡೆದಿದ್ದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯೆಯೊಬ್ಬರು ಬಾಡಿಗೆಯನ್ನೂ ಪಾವತಿಸಿದೆ ಮನೆಯನ್ನೂ ಖಾಲಿ ಮಾಡದೆ ಸತಾಯಿಸಿದ್ದಲ್ಲದೆ ಮಾಲೀಕರ ವಿರುದ್ಧವೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದಲ್ಲಿ ಖ್ಯಾತ ವಕೀಲ ಪಿ.ಪಿ. ಹೆಗ್ಡೆ ಅವರು ಅರ್ಜಿದಾರರ ಪರ ವಾದ ಮಂಡಿಸಿದ್ದರು. ಬೆಂಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯೆ ರೇಖಾ ಸಾಯಣ್ಣವರ್ ದೂರು ಅಧರಿಸಿ ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಜಯನಗರ ಠಾಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಕೋರಿ ವಿ. ಜಗದೀಶ್ ಬಥಿಜ ಮತ್ತವರ ಮಗಳು ಬೃಂದಾ ಬಥಿಜ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಮಹತ್ವದ ಆದೇಶ ಮಾಡಿದೆ.

ಪ್ರಕರಣದ ವಿವರ:
ಬೆಂಗಳೂರಿನ ಆರ್‌ಎಂವಿ 2ನೇ ಹಂತದ ಡಾಲರ್ಸ್ ಕಾಲನಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಬೃಂದಾ ಬಥಿಜ ಮಾಲೀಕತ್ವದ 4 ಬೆಡ್ ರೂಂಗಳ ಫ್ಲ್ಯಾಟ್ ಅನ್ನು ರೇಖಾ ಸಾಯಣ್ಣವರ್ ಬಾಡಿಗೆಗೆ ಪಡೆದಿದ್ದರು. ಈ ಸಂಬಂಧ 2018ರ ಜೂ.28ರಂದು ಬಾಡಿಗೆ ಕರಾರತ್ತು ಮಾಡಲಾಗಿತ್ತು. ಅದರ ಪ್ರಕಾರ, ಮಾಸಿಕ 1,08,539 ರೂ. ಬಾಡಿಗೆಯನ್ನು ಮಾಲೀಕರಿಗೆ ಹಾಗೂ 16,461 ರೂ. ನಿರ್ವಹಣಾ ಶುಲ್ಕವನ್ನು ಅಪಾರ್ಟ್‌ಮೆಂಟ್ ಮಾಲೀಕರ ಸಂಘಕ್ಕೆ ಪಾವತಿಸಬೇಕಿತ್ತು. ಆದರೆ ರೇಖಾ ಬಾಡಿಗೆ ಹಾಗೂ ನಿರ್ವಹಣಾ ಶುಲ್ಕವನ್ನು ಪಾವತಿಸಿರಲಿಲ್ಲ, ಒಪ್ಪಂದದ ಅವಧಿ ಮುಗಿಯುವ ಹೊತ್ತಿಗೆ 15,45,733 ರೂ. ಬಾಡಿಗೆ ಪಾವತಿಸಬೇಕಿತ್ತು. ಬಾಕಿ ಹಣ ಪಾವತಿಸಿ ಫ್ಯಾಟ್ ಖಾಲಿ ಮಾಡುವಂತೆ ಮಾಲೀಕರು ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರೇಖಾ ಮತ್ತವರ ಪತಿ ಗಿರೀಶ್ ವಿರುದ್ಧ ಬೃಂದಾ ತಂದೆ ಜಗದೀಶ್ ಬಥಿಜ ಅವರು ಸಿವಿಲ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿ ಬಾಡಿಗೆ ಹಣ ವಸೂಲಿ ಹಾಗೂ ಮನೆ ಖಾಲಿ ಮಾಡಿಸಿಕೊಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ 3 ತಿಂಗಳ ಒಳಗೆ ಮನೆ ಖಾಲಿ ಮಾಡಿ ಮಾಲೀಕರಿಗೆ ಹಸ್ತಾಂತರಿಸಬೇಕು ಹಾಗೂ ಬಾಕಿ ಬಾಡಿಗೆ ಮೊತ್ತ 15, 45, 733 ರೂಪಾಯಿಗಳನ್ನು ಪಾವತಿಸಬೇಕು ಎಂದು 2022ರ ಡಿ.1ರಂದು ಆದೇಶಿಸಿತ್ತು. ಈ ಆದೇಶವನ್ನೂ ಪಾಲನೆ ಮಾಡದ ಹಿನ್ನೆಲೆಯಲ್ಲಿ ಡಿ.1ರ ಆದೇಶ ಜಾರಿಗೆ ಕೋರಿ ಬೃಂದಾ ಎಕ್ಸಿಕ್ಯೂಷನ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಿರ್ದೇಶನದಂತೆ ಮಾ.29ರಂದು ಕೋರ್ಟ್ ಅಧಿಕಾರಿ ಹಾಗೂ ಪೊಲೀಸರು ಮನೆ ಖಾಲಿ ಮಾಡಿಸಲು ತೆರಳಿದ್ದರು. ಅದೇ ದಿನ ಸಂಜೆ ಮನೆ ಖಾಲಿ ಮಾಡಿಸಲಾಗಿತ್ತು. ಈ ಮಧ್ಯೆ, ಸಂಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದ ರೇಖಾ, ಮಾ.26ರಂದು ಮನೆಗೆ ಬಂದಿದ್ದ ಅರ್ಜಿದಾರರು ನನ್ನನ್ನು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಅರ್ಜಿದಾರರು ಖ್ಯಾತ ನ್ಯಾಯವಾದಿ ಪಿ.ಪಿ. ಹೆಗ್ಡೆ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಕ್ಕುಗಳ ಬಗ್ಗೆ ಇರಲಿ ಅರಿವು:
ಅಟ್ರಾಸಿಟಿ ಕಾಯ್ದೆಯ ಸೆಕ್ಷನ್ 3(1)(ಆರ್) ಪ್ರಕಾರ ಘಟನೆ ನಡೆದ ಜಾಗ ಸಾರ್ವಜನಿಕ ಪ್ರದೇಶವಾಗಿರಬೇಕು. ಸೆಕ್ಷನ್ 3(1)(ಎಸ್) ಪ್ರಕಾರ ಸಾರ್ವಜನಿಕರಿಗೆ ಕಾಣುವಂತಹ ಜಾಗವಿರಬೇಕು. ಆದರೆ, ಮನೆಯ ಒಳಗಡೆ ತಮ್ಮನ್ನು ನಿಂದಿಸಲಾಗಿದೆ ಎಂದು ದೂರುದಾರರು ಅರೋಪಿಸಿದ್ದು ಇದು ಸಾರ್ವಜನಿಕ ಪ್ರದೇಶ ಅಥವಾ ಸಾರ್ವಜನಿಕರಿಗೆ ಕಾಣುವ ಜಾಗವೂ ಅಲ್ಲ. ಮಾ.26ರಂದು ನಡೆದಿದೆ ಎನ್ನಲಾದ ಘಟನೆಯ ಬಗ್ಗೆ 3 ದಿನಗಳ ನಂತರ ದೂರು ನೀಡಲಾಗಿದೆ. ಒಂದು ವೇಳೆ ನಿಂದಿಸುವುದೇ ಆದರೆ, ಅದೇ ದಿನ ದೂರು ದಾಖಲಿಸಲು ದೂರುದಾರರಿಗೆ ಯಾವುದೇ ಅಡ್ಡಿ ಇರಲಿಲ್ಲ. ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯರಾಗಿರುವ ದೂರುದಾರರು ತಮ್ಮ ಹಕ್ಕುಗಳ ಕುರಿತು ಸಂಪೂರ್ಣ ಅರಿವು ಹೊಂದಿರುತ್ತಾರೆ. ಎಲ್ಲವನ್ನೂ ತಿಳಿದಿರುವ ಅವರು ದೂರು ದಾಖಲಿಸಲು 3 ದಿನ ಕಾಯುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಾಧೀಶೆ ಎಂದು ಪ್ರಭಾವ ಬೀರಲು ಯತ್ನಿಸಿದ್ದಾರೆ: ಹೈಕೋರ್ಟ್‌ನಲ್ಲಿ ಖ್ಯಾತ ನ್ಯಾಯವಾದಿ ಪಿಪಿ ಹೆಗ್ಡೆ ವಾದ
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಪುತ್ತೂರು ಮೂಲದ ಪಿ.ಪಿ.ಹೆಗ್ಡೆ ಅವರು ದೂರುದಾರರು ಗ್ರಾಹಕ ನ್ಯಾಯಲಯದ ಸದಸ್ಯರಾಗಿದ್ದು, ಕೋರ್ಟ್ ಆದೇಶಗಳಿಗೆ ಗೌರವ ಕೊಡುವುದು ಅದ್ಯ ಕರ್ತವ್ಯವಾಗಿರುತ್ತದೆ. ಆದರೆ, ನ್ಯಾಯಲಯದ ಆದೇಶವಿದ್ದರೂ ಬಾಡಿಗೆ ಪಾವತಿಸದೆ ಕೋರ್ಟ್‌ಗೆ ಅಗೌರವ ತೋರಿದ್ದಾರೆ. ತಾವೊಬ್ಬ ನ್ಯಾಯಾಧೀಶೆ ಎಂದು ಪ್ರಭಾವ ಬೀರಲು ಯತ್ನಿಸಿದ್ದಾರೆ. ಸಂಜೆಯ ವೇಳೆಗೆ ಮಾಲೀಕರ ವಿರುದ್ದವೇ ಅಟ್ರಾಸಿಟಿ ದೂರು ನೀಡಿದ್ದಾರೆ. ಜಡ್ಜ್ ಎಂಬ ಕಾರಣಕ್ಕೆ ಪೊಲೀಸರೂ ಪ್ರಾಥಮಿಕ ವಿಚಾರಣೆ ನಡೆಸದೆಯೇ ಎಫ್‌ಐಆರ್ ದಾಖಲಿಸಿದ್ದಾರೆ. ಆದ್ದರಿಂದ ದ್ವೇಷ ಕಾರಣದ ದೂರನ್ನು ರದ್ದುಪಡಿಸಬೇಕೆಂದು ಕೋರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ದೂರಿನಲ್ಲಿರುವ ನಿರೂಪಣೆ ತುಂಬಾ ವಿಚಿತ್ರವಾಗಿದೆ, ಅರ್ಜಿದಾರರು ಮಾ.26ರಂದು ದೂರುದಾರರ ಮನೆಗೆ ತೆರಳಿ ನಿಂದಿಸಿದ್ದಾರೆ ಎಂದು ಆರೋಪಿಸಿ ಮಾ.29ರಂದು ದೂರು ನೀಡಲಾಗಿದೆ. ಜಾಗವನ್ನು ಬಾಡಿಗೆಗೆ ಪಡೆದು ಬಾಡಿಗೆ ಪಾವತಿಸಲು ಇಚ್ಚಿಸದ, ನ್ಯಾಯಾಲಯದ ಆದೇಶವನ್ನು ಪಾಲಿಸದ ಅತೃಪ್ತ ಬಾಡಿಗೆದಾರರಿಂದ ಅಟ್ರಾಸಿಟಿ ಕಾಯ್ದೆಯ ನಿಬಂಧನೆಗಳು ದುರ್ಬಳಕೆಯಾಗಿರುವ ಪ್ರಕರಣ ಇದಾಗಿದೆ. ಮಾಲೀಕರ ಮೇಲಿನ ದ್ವೇಷದಿಂದ ಬಾಡಿಗೆದಾರರು ದೂರು ದಾಖಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಇಂತಹ ಪ್ರಕರಣಗಳಿಂದ ಕೆಲವೊಮ್ಮೆ ನಿಜಕ್ಕೂ ದೌರ್ಜನ್ಯಕ್ಕೊಳಗಾಗಿ ತೊಂದರೆ ಅನುಭವಿಸುವ ವ್ತಕ್ತಿಗಳು ಸಲ್ಲಿಸುವ ದೂರುಗಳೂ ಕಡೆಗಣಿಸಲ್ಪಡುತ್ತವೆ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ ಅರ್ಜಿದಾರರ ವಿರುದ್ಧದ ತನಿಖೆ ಮುಂದುವರಿಸಲು ಅವಕಾಶ ಕಲ್ಪಿಸಿದರೆ ಅದು ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್ ರದ್ದುಪಡಿಸಿದೆ.

LEAVE A REPLY

Please enter your comment!
Please enter your name here