ಎರಡು ಹಾಗೂ ಮೂರನೇ ಹಂತದ ಕಾಮಗಾರಿ ಬಾಕಿ-ಕೊಯಿಲ ಪಶುಸಂಗೋಪನಾ ಕಾಲೇಜು ಆರಂಭ ವಿಳಂಬ-ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್ ಪ್ರಶ್ನೆಗೆ ಸಚಿವರ ಲಿಖಿತ ಉತ್ತರ

0

ಕಡಬ: ತಾಲೂಕಿನ ಕೊಯಿಲದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿರುವ ಪಶುಸಂಗೋಪನಾ ಕಾಲೇಜುಗೆ ಸಂಬಂಧಿಸಿದ ಎರಡು ಹಾಗೂ ಮೂರನೇ ಹಂತದ ಕಾಮಗಾರಿಗಳು ಬಾಕಿ ಇರುವುದರಿಂದ ಪಶುಸಂಗೋಪನಾ ಕಾಲೇಜು ಆರಂಭ ವಿಳಂಬವಾಗುತ್ತಿದೆ ಎಂದು ರಾಜ್ಯದ ಪಶು ಸಂಗೋಪನ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ರವರು ಉತ್ತರಿಸಿದ್ದಾರೆ.


ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು, ಪರಿಷತ್ತಿನಲ್ಲಿ ಕೇಳಿದ ಲಿಖಿತ ಪ್ರಶ್ನೆಗೆ ಸಚಿವರು ಪಶುಸಂಗೋಪನಾ ಕಾಲೇಜು ಆರಂಭ ವಿಳಂಬಕ್ಕೆ ಕಾರಣಗಳನ್ನು ನೀಡಿದ್ದಾರೆ. ವಿದ್ಯಾಲಯನ್ನು ಸ್ಥಾಪಿಸಲು ಮಂಜೂರಾತಿ ದೊರಕಿದೆ. ಆದರೆ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡಿರುವುದಿಲ್ಲ. ಕಾಲೇಜಿನ ಮುಖ್ಯ ಕಟ್ಟಡ, ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ, ಅತಿಥಿ ಗೃಹ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಎರಡನೇ ಹಂತದ ಕಾಮಗಾರಿಗಳಾದ ಗ್ರಂಥಾಲಯ, ಕುರಿ, ಮೇಕೆ, ಹಸು, ಹಂದಿ ಮತ್ತು ಕೋಳಿ ಫಾರ್ಮಗಳು, ರಸ್ತೆಗಳು, ಕಂಪೌಂಡ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿಗೃಹಗಳು, ಸಭಾಂಗಣ, ನೀರಿನ ಸರಬರಾಜು, ಇತ್ಯಾದಿ ಕಾಮಗಾರಿಗಳಿಗೆ ಅನುಮೋದನೆ ದೊರತಿದೆ. ಆದರೆ ಇವೆಲ್ಲವನ್ನು ಪೂರ್ಣಗೊಳಿಸಲು ಹಣಕಾಸಿನ ಅವಶ್ಯವಿದೆ. ಆರ್ಥಿಕ ಇಲಾಖೆಯ ಸಹಮತಿ ಪಡೆದ ಅನಂತರವೇ ಕಾಮಗಾರಿಗಳು ಪ್ರಾರಂಭವಾಗಲಿವೆ. ಮೊದಲ ಹಾಗೂ ಎರಡನೇ ಹಂತದ ಕಾಮಗಾರಿಗಳ ಜೊತೆಗೆ ವಿವಿಧ ದರ್ಜೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವನೆ ಸ್ವೀಕೃತಗೊಂಡಿದ್ದು, ಆರ್ಥಿಕ ಇಲಾಖೆಯಿಂದ ನೇಮಕಾತಿ ಅನುಮತಿ ದೊರೆತ ಅನಂತರ ಸಿಬ್ಬಂದಿ ನೇಮಕಾತಿ ಕಾರ್ಯ ಪೂರ್ಣಗೊಂಡ ಮೇಲೆ ವಿವಿ ಪ್ರಾರಂಭಕ್ಕೆ ಅನುಮತಿ ಕೋರಬೇಕಾಗಿರುತ್ತದೆ. ಪರಿಷತ್ತಿನ ಅಧಿಕಾರಿಗಳ ಭೇಟಿ, ಪರಿವೀಕ್ಷಣೆ ಅನಂತರ ಅನುಮತಿಯೊಂದಿಗೆ ಕೊಯಿಲದ ಪಶುಸಂಗೋಪನಾ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲಾಗುವುದು. 2ನೇ ಹಂತದ ಕೆಲಸಗಳಿಗೆ ಅನುದಾನ ಬಿಡುಗಡೆ ಬಳಿಕ ಮತ್ತು ಸಿಬ್ಬಂದಿ ನೇಮಕಾತಿಯೊಂದಿಗೆ 1 ಮತ್ತು 2ನೇ ಪಶುವೈದ್ಯಕೀಯ ಸ್ನಾತಕ ಪದವಿಗೆ ಬೇಕಾಗಿರುವ ಕಟ್ಟಡ ಕಾಮಗಾರಿಗಳನ್ನು ಮತ್ತು ಸೌಲಭ್ಯಗಳನ್ನು ಪೂರ್ಣಗೊಳಿಸಿ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಅನುಮತಿಯೊಂದಿಗೆ 2024-25ನೇ ಶೈಕ್ಷಣಿಕ ವರ್ಷದ ಪ್ರಾರಂಭದ ವೇಳೆಗೆ ಬಾಕಿ ಉಳಿದಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.

LEAVE A REPLY

Please enter your comment!
Please enter your name here