ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ಅಮಾವಾಸ್ಯೆ ದಿನಾಚರಣೆ ಆಚರಿಸಲಾಯಿತು.
ಶಾಲಾ ಮುಖ್ಯಗುರು ಎ.ಲಕ್ಷ್ಮಣ ಗೌಡರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ದುಗ್ಗಪ್ಪ ಗೌಡ ಅಗರ್ತಿಮಾರುರವರು ಮಾತನಾಡಿ, ಆಟಿ ಎಂಬುವುದು ತುಳು ತಿಂಗಳಿನಲ್ಲಿ ಹೇಳುವ ಹೆಸರು. ಬೇಸಾಯ ಮುಗಿದ ನಂತರ ಬರುವ ಬಡತನದ ತಿಂಗಳು ಎಂಬುದು ಹಿಂದಿನವರ ನಂಬಿಕೆ. ಆಟಿ ಅಮಾವಾಸ್ಯೆಯಂದು ಎಲ್ಲಾ ಕಡೆ ಹರಿಯುವ ನೀರು ತೀರ್ಥಕ್ಕೆ ಸಮ. ಹಾಗಾಗಿ ಹಿರಿಯರು ಮತ್ತು ಮಕ್ಕಳು ಹರಿಯುವ ನೀರಿಗೆ ಪೂಜೆ ಮಾಡಿ ದಾನಾದಿಗಳನ್ನು ಬಿಟ್ಟು ತೀರ್ಥ ಸ್ಥಾನವೆಂದು ಮಾಡುತ್ತಿದ್ದರು. ನಂತರ ಮನೆಯಲ್ಲಿ ಮಾಡಿದ ಹಳೆಯ ಕಾಲದ ಬೇರೆ ಬೇರೆ ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದರು. ಇದರಿಂದ ಅನೇಕ ಪೋಷಕಾಂಶಗಳು ಸಿಗುತ್ತಿದ್ದವು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿದ್ದವು ಎಂಬುದು ಹಿರಿಯರ ನಂಬಿಕೆ. ಇದನ್ನು ಮುಂದಿನ ತಲೆಮಾರಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಮುಂದಿನ ಜನಾಂಗ ಇವುಗಳನ್ನು ಆಚರಿಸಿ ನಮ್ಮ ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಗುರು ಎ.ಲಕ್ಷ್ಮಣ ಗೌಡರವರು ಮಾತನಾಡಿ, ಆಟಿ ಅಮಾವಾಸ್ಯೆಯಂದು ಕುಡಿಯುವ ಕಷಾಯದಿಂದ ಅನೇಕ ಪ್ರಯೋಜನಗಳು ಸಿಗುತ್ತವೆ, ಆಟಿ ತಿಂಗಳು ಶುಭ ಸಮಾರಂಭಕ್ಕೆ ಯೋಗ್ಯವಲ್ಲ. ಏಕೆಂದರೆ ಇದು ಬಡತನದ ತಿಂಗಳು. ಮಳೆಗಾಲದಲ್ಲಿ ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುತ್ತವೆ. ಆ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ಪ್ರಕೃತಿಯಲ್ಲಿ ಸಿಗುವ ಔಷಧೀಯ ಆಹಾರಗಳನ್ನು ಸೇವಿಸಬೇಕು. ಆಟಿ ಅಮಾವಾಸ್ಯೆಯ ದಿನದಂದು ಕುಡಿಯುವ ಹಾಲೆಮರದ ವಿವರಣೆ ಮತ್ತು ತೊಗಟೆಯನ್ನು ಮಕ್ಕಳ ಎದುರು ಪ್ರದರ್ಶಿಸಿ, ಅದನ್ನು ಕೆತ್ತುವ ಕ್ರಮ, ಕುಡಿಯುವ ರೀತಿ ಮತ್ತು ಬದಲಿ ಮರದ ಕಷಾಯವನ್ನು ಕುಡಿದರೆ ಆಗುವ ಪರಿಣಾಮವನ್ನು ಹೇಳಿ ಮಕ್ಕಳಿಗೆ ಎಚ್ಚರಿಕೆಯನ್ನು ನೀಡಿದರು. ಶಾಲೆಯ ಹಿರಿಯ ಶಿಕ್ಷಕರಾದ ರಾಜಶೇಖರಪ್ಪ ಹಾಗೂ ವಾರಿಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಕ್ಷಕಿ ವಂದನಾ ಸ್ವಾಗತಿಸಿ, ಭಾಗ್ಯಲಕ್ಷ್ಮಿ ವಂದಿಸಿದರು. ಯಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.