ಪುತ್ತೂರು: ಕಾಂಗ್ರೆಸ್ ಮುಖಂಡರೊಬ್ಬರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಅವರಲ್ಲಿದ್ದ ನಗದು, ಚಿನ್ನದ ಉಂಗುರ ದೋಚಿದ ಘಟನೆ ಜು. 18ರಂದು ತಡ ರಾತ್ರಿ ಮಂಜಲ್ಪಡ್ಪು ಬೈಪಾಸ್ ರಸ್ತೆ ಬಳಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಬೆಂಗಳೂರು ಪಿಆರ್‌ಸಿಕ್ಸ್ ರಿಯಲ್‌ಎಸ್ಟೇಟ್ ಉದ್ಯಮಿ ಕೊಳ್ತಿಗೆ ನಿವಾಸಿ ಪ್ರದೀಪ್ ಕುಮಾರ್ ರೈ ಪಾಂಬಾರು (41ವ)ರವರು ಹಲ್ಲೆಗೊಳಗಾಗಿದ್ದು,ಜು.18ರಂದು ರಾತ್ರಿ ಸ್ನೇಹಿತ ಜೀವರಾಜ್ ಅವರೊಂದಿಗೆ ಕಾರಿನಲ್ಲಿ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರ ಭಾವನನ್ನು ನೋಡಲು ಬಂದು ಅವರಿಗೆ ಊಟ ಮತ್ತು ನೀರನ್ನು ತರಲು ಸಮೀಪದ ಮೆಟ್ರೋಡೈನ್ ಹೊಟೇಲ್‌ಗೆ ಹೋಗಿ ಅಲ್ಲಿಂದ ಕಾರನ್ನು ಹಿಂದಿರುಗಿಸುವ ವೇಳೆ ಕಾರಿನಿಂದ ಹಿಂಬದಿಯಿಂದ ಕೆಂಪು ಬಣ್ಣದ ಡೆಸ್ಟರ್ ಕಾರು ಬಂದು ಅಡ್ಡ ನಿಲ್ಲಿಸಿ ಅದರಲ್ಲಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂದರ್ಭ ನಮ್ಮ ತಪ್ಪಾಗಿದ್ದರೆ ಕ್ಷಮಿಸಿ ಎಂದು ಅವರಿಗೆ ಪ್ರದೀಪ್ ಕುಮಾರ್ ರೈ ಅವರು ಹೇಳಿದ್ದಾರೆ. ಅಲ್ಲಿಂದ ನಂತರ ಪ್ರದೀಪ್ ಕುಮಾರ್ ರೈ ಅವರು ಆಸ್ಪತ್ರೆಗೆ ಬಂದು ಜೀವರಾಜ್ ಅವರೊಂದಿಗೆ ಮನೆಯ ಕಡೆ ಹೋಗುವಾಗ ಮಂಜಲ್ಪಡ್ಪು ಬೈಪಾಸ್ ರಸ್ತೆಯ ಬಳಿ ಪೆಟ್ರೋಲ್ ಪಂಪ್‌ನಿಂದ ಅದೇ ಕೆಂಪು ಬಣ್ಣದ ಡಸ್ಟರ್ ಕಾರು ರಸ್ತೆಗೆ ಬಂದು ಪ್ರದೀಪ್ ಕುಮಾರ್ ರೈ ಅವರು ಹೋಗುತ್ತಿದ್ದ ಕಾರಿಗೆ ಅಡ್ಡವಾಗಿ ನಿಲ್ಲಿಸಿದಲ್ಲದೆ ಕಾರಿನಿಂದ ಇಳಿದ ವ್ಯಕ್ತಿಗಳು ಪ್ರದೀಪ್ ಕುಮಾರ್ ರೈ ಅವರಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್ ಕುಮಾರ್ ರೈ ಅವರ ಬಳಿ ಇದ್ದ ರೂ. 9ಸಾವಿರ ನಗದು, ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಗಾಯಗೊಂಡಿರುವ ಪ್ರದೀಪ್ ಕುಮಾರ್ ರೈ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.
ನನಗೆ ಹಲ್ಲೆ ನಡೆಸಿದ ಪರಾರಿಯಾಗಿದ್ದರು:
ಘಟನೆಗೆ ಸಂಬಂಧಿಸಿ ಕಲ್ಲಡ್ಕ ನಿವಾಸಿ ಅಭಿಷೇಕ್ ಎಂಬವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನೆಹರುನಗರದಿಂದ ಮುರಕ್ಕೆ ಸಂಚರಿಸುವ ಮಾರ್ಗ ಮಧ್ಯೆ ಇರುವ ಪುತ್ತೂರು ಟಿಂಬರ್ ಶಾಪ್ ಬಳಿ ನಾನು ನಿಂತಿದ್ದ ವೇಳೆ ಪ್ರದೀಪ್ ಕುಮಾರ್ ರೈ ಅವರು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಲ್ಲಿಸಿ ನನಗೆ ಅನಾವಾಶ್ಯಕವಾಗಿ ಬೈದು ಹಲ್ಲೆ ಮಾಡಿದ್ದಾರೆ. ನಮ್ಮದೆ ಸರಕಾರ ಇರೋದು, ಏನು ಬೇಕಾದ್ರೂ ಮಾಡ್ತೇವೆ, ನಿನ್ನನ್ನ ಸುಮ್ಮನೇ ಬಿಡೋದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭ ನಾನು ಸ್ನೇಹಿತಿರಿಗೆ ಕರೆ ಮಾಡುತ್ತಿರುವ ವಿಚಾರ ತಿಳಿದಂತೆ ಪ್ರದೀಪ್ ಕುಮಾರ್ ರೈ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕದ ಬೆಳವಣಿಗೆಯಲ್ಲಿ ನನ್ನ ಸ್ನೇಹಿತರು ಪ್ರದೀಪ್ ಕುಮಾರ್ ರೈ ಅವರನ್ನು ಬೊಳುವಾರು ಬೈಪಾಸ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ವೇಲೆ ಮಾತಿನ ಚಕಮಕಿ ನಡೆದಿದೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.