ಗ್ರಾಮ ಸಭೆಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು-ಸದಸ್ಯರ ಆಗ್ರಹ

0

ಕುದ್ಮಾರು ಜಂಕ್ಷನ್‌ನಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಲು ನಿರ್ಧಾರ

ಬೆಳಂದೂರು ಗ್ರಾ.ಪಂ.ಸಾಮಾನ್ಯ ಸಭೆ

ಕಾಣಿಯೂರು: ಬೆಳಂದೂರು ಗ್ರಾ.ಪಂ ಸಾಮಾನ್ಯ ಸಭೆಯು ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಅವರ ಅಧ್ಯಕ್ಷತೆಯಲ್ಲಿ ಗ್ರಾಪಂ.ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್ ವ್ಯಾಪ್ತಿಯ ಕುದ್ಮಾರು ಜಂಕ್ಷನ್‌ನಲ್ಲಿ ಬಸ್ಸು ನಿಲುಗಡೆಗೆ ತೊಂದರೆಯಾಗುವ ರೀತಿಯಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಬಾರದು. ಈ ಬಗ್ಗೆ ನೋ ಪಾರ್ಕಿಂಗ್ ಫಲಕ ಅಳವಡಿಸಲು ನಿರ್ಧರಿಸಲಾಯಿತು. ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಪ್ರತಿ ಗ್ರಾಮ ಸಭೆಗಳಿಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಬೇಕು ಎಂದು ಗ್ರಾ.ಪಂ ಸದಸ್ಯರು ಆಗ್ರಹಿಸಿದರು.ಕಳೆದ ಗ್ರಾಮ ಸಭೆಯಲ್ಲಿಯೂ ಅಗತ್ಯ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಸದಸ್ಯರು ತಿಳಿಸಿದರು. ಗ್ರಾಮ ಸಭೆಗೆ ಗೈರು ಹಾಜರಾಗುವವರ ಬಗ್ಗೆ ಸರಕಾರಕ್ಕೆ ಬರೆಯುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.


ಗ್ರಾ.ಪಂವ್ಯಾಪ್ತಿಯ ಅಂಗಡಿ ಕಟ್ಟಡಗಳಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಸಂಜೀವಿನಿ ಒಕ್ಕೂಟದವರಿಂದ ಸಂಗ್ರಹಿಸಿ ವಾರಕ್ಕೊಮ್ಮೆ ಪಂಚಾಯತ್‌ನ ತಾತ್ಕಾಲಿಕ ದಾಸ್ತಾನು ಕೊಠಡಿಯಲ್ಲಿ ಶೇಖರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಬೆಳಂದೂರು ಕಾಣಿಯೂರು ಮುಖ್ಯರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಹಲವು ಬಾರಿ ವಲಯ ಅರಣ್ಯಾಧಿಕಾರಿಯವರಿಗೆ ಬರೆದುಕೊಂಡಿದ್ದು, ಈವರೆಗೆ ಕ್ರಮಕೈಗೊಂಡಿಲ್ಲ. ತಕ್ಷಣ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಪುತ್ತೂರು ವಲಯ ಅರಣ್ಯಾಧಿಕಾರಿಯವರಿಗೆ ಬರೆದುಕೊಳ್ಳುವುವಂತೆ ತೀರ್ಮಾನಿಸಲಾಯಿತು. ಬರೆಪ್ಪಾಡಿಯಿಂದ ಕೆಲೆಂಬೀರಿಯವರೆಗೆ ರಸ್ತೆಯ ಬದಿಯಲ್ಲಿ ನೆಡೆಸಲಾದ ಸಸಿಯನ್ನು ಸಂರಕ್ಷಿಸುವಂತೆ ಬಂದ ಅರ್ಜಿಯ ಬಗ್ಗೆ ಚರ್ಚಿಸಿ, ಈ ಬಗ್ಗೆ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳನ್ನು ರಸ್ತೆ ಬದಿಗೆ ಬಿಡಬಾರದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಮೋಹನ್ ಅಗಳಿ, ರವಿಕುಮಾರ್ ಕೆಡೆಂಜಿ, ಜಯಂತ ಅಬೀರ, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಪಾರ್ವತಿ ಮರಕ್ಕಡ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ ಉಪಸ್ಥಿತರಿದ್ದರು. ಲೆಕ್ಕ ಸಹಾಯಕಿ ಸುನಂದರವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣರವರು ಸಭೆ ನಿರ್ವಹಿಸಿದರು. ಸಿಬ್ಬಂದಿಗಳಾದ ಗೀತಾ, ಮಮತಾ, ಹರ್ಷಿತ್ ಕೂರ, ಸಂತೋಷ್ ಸಹಕರಿಸಿದರು.

LEAVE A REPLY

Please enter your comment!
Please enter your name here