ಕ್ಯಾಂಪ್ಕೋ ಅಧ್ಯಕ್ಷರಿಂದ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ : ಪಕ್ಷದಿಂದ ನೂತನ ಅಧ್ಯಕ್ಷರಿಗೆ ಸನ್ಮಾನ

0

ಪುತ್ತೂರು: ಪ್ರತಿಷ್ಥಿತ ಅಂತರ್ ರಾಜ್ಯ ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೋದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಆರ್. ಸತೀಶ್ಚಂದ್ರ ಅವರು ಅಧಿಕಾರ ಸ್ವೀಕಸಿದ ಬಳಿಕ ಡಿ.3ರಂದು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು.


ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನ, ಕೆಮ್ಮಿಂಜೆ ದೇವಸ್ಥಾನ ಮತ್ತು ಕ್ಯಾಂಪ್ಕೋ ಭೇಟಿ ಬಳಿಕ ಬಿಜೆಪಿ ಕಚೇರಿಗೆ ಸಂಸ್ಥೆಯ ನಿರ್ದೆಶಕರಾದ ಮುರಳಿಕೃಷ್ಣ ಚಲ್ಲಂಗಾರು ಮತ್ತು ಗಣೇಶ್ ಅವರ ಜೊತೆ ಭೇಟಿ ನೀಡಿದರು. ಈ ಸಂದರ್ಭ ಬಿಜೆಪಿ ಪಕ್ಷದಿಂದ ನೂತನ ಅಧ್ಯಕ್ಷರನ್ನು ಮತ್ತು ನಿದೇರ್ಶಕರನ್ನು ಶಾಲು, ಹಾರ ಹಾಕಿ ಅಭಿನಂದಿಸಿ, ಸಿಹಿ ಹಂಚಲಾಯಿತು.

ಅಡಿಕೆ ಬೆಳೆಗಾರರಿಗೆ ಕ್ಯಾಂಪ್ಕೋದ ಮೂಲಕ ಮಾತ್ರ ನ್ಯಾಯ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕ್ಯಾಂಪ್ಕೋ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ದೊಡ್ಡ ಸಂಸ್ಥೆ ಕ್ಯಾಂಪ್ಕೋ. ಕರ್ನಾಟಕ ಮತ್ತು ಕೇರಳದ ಅಡಿಕೆಗಾರರ ಮತ್ತು ಕೋಕೊ ಬೆಳೆಗಾರರ ರಕ್ಷಣೆ ಮಾಡಿ ಪ್ರತಿಷ್ಠಿತ ಸಂಸ್ಥೆಯಾಗಿ ಮೂಡಿ ಬಂದಿದೆ. ಸುಮಾರು 1.50ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಕ್ಯಾಂಪ್ಕೋ ದೇಶದ ಪ್ರತಿಷ್ಠಿತ ಬಹರಾಜ್ಯ ಸಂಸ್ಥೆ. ಇವತ್ತು ಅದರ ಅಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ ಅವರು ಪ್ರತಿಷ್ಠಿತ ಸಂಸ್ಥೆಗೆ ಸೂಕ್ತ ಅಧ್ಯಕ್ಷನನ್ನು ನಮ್ಮ ಸಹಕಾರ ಭಾರತಿ ಆಯ್ಕೆ ಮಾಡಿದೆ. ಅವರು ಈ ಹಿಂದೆಯೂ ಅಧ್ಯಕ್ಷರಾಗಿದ್ದ ಸಂದರ್ಭ ಕ್ಯಾಂಪ್ಕೋ ಇನ್ನಷ್ಟು ಲಾಭದಾಯಕವಾಗಿ, ರೈತ ಸ್ನೇಹಿಯಾಗಿ ಬೆಳೆಯಲು ಅವರು ಅನುಕೂಲ ಮಾಡಿಕೊಟ್ಟಿದ್ದರು. ಕರ್ನಾಟಕದಲ್ಲಿ ಇವತ್ತು ಸೌಹಾರ್ದ ಸಹಕಾರಿ ಸಂಘ ಬರಬೇಕಾದರೆ ಅದರಲ್ಲಿ ದೊಡ್ಡ ಪಾಲು ಸತೀಶ್ಚಂದ್ರ ಅವರದ್ದು. ಇವತ್ತು ಅಡಿಕೆ ಬೆಳೆಗಾರರ ಬೇಡಿಕೆಗಳು ಇದೆ. ಎಲ್ಲರೂ ಕ್ಯಾಂಪ್ಕೋದ ಬಗ್ಗೆ ಬಹಳಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಕ್ಯಾಂಪ್ಕೋದ ಮೂಲಕ ಮಾತ್ರ ನಮಗೆ ನ್ಯಾಯ ಸಿಗಬಹದು. ಅಡಿಕೆ ಬೆಳೆಗಾರರ ಭವಿಷ್ಯ ಉಜ್ವಲವಾಗಬಹುದು ಎಂದು ಭಾವಿಸಿದ ಸಂದರ್ಭದಲ್ಲಿ ಅನೇಕ ಸವಾಲುಗಳಿವೆ. ಸವಾಲುಗಳ ಮಧ್ಯೆ ಇದನ್ನು ಮುನ್ನಡೆಸುವ ಚಾಕಚಕ್ಯತೆ ಅವರಿಗಿದೆ. ಪುತ್ತೂರಿನ ಎಲ್ಲಾ ಅಡಿಕೆ ಬೆಳೆಗಾರರು, ಬಿಜೆಪಿ ಅವರ ಜೊತೆಯಿದ್ದು ಅವರು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವ ಎಂದರು.


ಕ್ಯಾಂಪ್ಕೋ ಸಂಘಟಿತ ಕೆಲಸದಿಂದಾಗಿ ಬೆಳೆದಿದೆ:
ಕ್ಯಾಂಪ್ಕೋ ನೂತನ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆರಂಭದ ದಿನದಲ್ಲಿ ನಷ್ಟದಲ್ಲಿದ್ದ ಕ್ಯಾಂಪ್ಕೋ ಸಂಘಟಿತ ಕೆಲಸದಿಂದಾಗಿ ಬೆಳೆದಿದೆ. ಇವತ್ತು ಕ್ಯಾಂಪ್ಕೋ 3,600 ಕೋಟಿ ರೂಪಾಯಿ ಟರ್ನ್‌ಓವರ್ ಮಾಡಿ ಸತತವಾಗಿ ಲಾಭದಲ್ಲಿದೆ. ಇದರ ಜೊತೆಗೆ ಸಾಮಾಜಿಕವಾಗಿ 25 ವರ್ಷದ ಹಿಂದೆ ಪುತ್ತೂರಿನಲ್ಲಿ ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್, ಕೋವಿಡ್ ಸಂದರ್ಭ ಆಗಿನ ಶಾಸಕ ಸಂಜೀವ ಮಠಂದೂರು ಅವರ ಒಂದು ಪೋನ್ ಕರೆಗೆ ಆಗಿನ ಅಧ್ಯಕ್ಷರು ಪುತ್ತೂರು ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್, ಕುಂದಾಪುರದಲ್ಲಿ ಅಲ್ಟ್ರಾಸೌಂಟ್ ಅಳವಡಿಕೆ. ಸದಸ್ಯರಿಗೆ ಆರೋಗ್ಯ ಸಂಬಂಧಿಸಿ ನೆರವು ನೀಡಿದೆ. ಇವತ್ತು ಕ್ಯಾಂಪ್ಕೋ ಅದ್ಭುತವಾಗಿ ಬೆಳೆದಿದೆ. ಸಹಕಾರ ಕ್ಷೇತ್ರದಲ್ಲಿ ನಾವು ಮಾದರಿಯಾಗಿದ್ದೇವೆ. ಕ್ಯಾಂಪ್ಕೋಗೆ ಈ ಹಿಂದೆ ನಮ್ಮ ಅವಧಿಯಲ್ಲಿ 1ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಆದರೆ ಒಂದೇ ಒಂದು ಪೈಸೆ ತೆಗೆದುಕೊಳ್ಳಲಿಲ್ಲ. ಸರಸ್ವತಿಯಲ್ಲೂ 250 ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಅಲ್ಲೂ ಒಂದೇ ಒಂದು ಪೈಸೆ ಪಡೆಯಲಿಲ್ಲ. ಇದೊಂದು ಸಂಘದ ಸ್ವಯಂ ಸೇವಕನ ಕೆಲಸ ಎಂದು ಮಾಡಿದ್ದೇವೆ. ದೇಶವನ್ನು 47ನೇ ಇಸವಿಗೆ ಹೇಗೆ ಕೊಂಡೊ ಹೋಗಬೇಕೆಂಬ ಹಿರಿಯ ಕನಸು ಏನಿದೆಯೋ ಅದನ್ನು ಅಭಿವೃದ್ಧಿ ಪಡಿಸಲು ನಮಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ವಿಭಾಗ ಸಹಪ್ರಮುಖ್ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕ್ಯಾಂಪ್ಕೋ ಮಾಜಿ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಯುವರಾಜ್ ಪೆರಿಯತ್ತೋಡಿ, ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ವಿದ್ಯಾಧರ್ ಜೈನ್, ಸುರೇಶ್ ಆಳ್ವ, ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಬಲ್ನಾಡು, ವಿಶ್ವನಾಥ ಕುಲಾಲ್, ನಾಗೇಶ್ ಟಿ, ನಾಗೇಂದ್ರ ಬಾಳಿಗ, ನಿರಂಜನ್, ಮೋಹನ್ ಪಕ್ಕಳ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್, ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here