ಪುತ್ತೂರು: ನಡಾದ ಒಂಟಾರಿಯೊದ ವಿಂಡ್ಸರ್‌ನಲ್ಲಿ ಸೆ.12ರಿಂದ 17ರ ತನಕ ನಡೆಯಲಿರುವ ಕಾಮನ್‌ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್ 2023ರಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾಕ್ರಿ ಸೇವಾ ಕುಟುಂಬದ ಸದಸ್ಯ ತ್ರಿಶೂಲ್ ಗೌಡ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ತ್ರಿಶೂಲ್ ಗೌಡರವರು 2023ರ ಜೂನ್ 8ರಿಂದ 11ರವರೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲುರುವ ರೇ ಸೆಂಟರ್‌ನಲ್ಲಿ ನಡೆದ ೧೮ ನೇ ರಾಷ್ಟ್ರೀಯ ಪೂಲ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ 9ರಿಂದ 11 ಜುಲೈ 2023ರ ಶಿಬಿರದಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯ ಕಾಮನ್‌ವೆಲ್ತ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಈ ಪಂದ್ಯಾವಳಿಗಳಲ್ಲಿ ತ್ರಿಶೂಲ್ ಗೌಡರವರು ಎರಡು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ, ಅವರಿಗೆ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಪಾರ್ಥ ವಾರಣಾಶಿ, ರೋಹಿತ್ ಪ್ರಕಾಶ್ ಮತ್ತು ನಿರೂಪ್ ಜಿ ಆರ್, ಹಾಗೂ ವಿ ಸ್ವಿಮ್ ಅಕಾಡೆಮಿಯ ಸೀತಾರಾಮ ಗೌಡ ಇವರುಗಳು ತರಬೇತಿ ನೀಡಿರುತ್ತಾರೆ.
ಪುತ್ತೂರು ಜಾತ್ರೆಯಲ್ಲಿ ಗ್ಯಾಸ್‌ಲೈಟ್ ಸೇವೆಯಲ್ಲಿ ತ್ರಿಶೂಲ್ ಗೌಡ:
ತ್ರಿಶೂಲ್ ಗೌಡ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾಕ್ರಿ ಸೇವಾ ಕುಟುಂಬದ ಹಿರಿಯ ಸದಸ್ಯ ದಿ.ಶೀನಪ್ಪ ಗೌಡ ಅವರ ಮೊಮ್ಮಗ ಮತ್ತು ಶಿವ, ನಳಿನಿ ದಂಪತಿ ಪುತ್ರ. ಇವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಸಹಿತ ಇತರ ಉತ್ಸವದಲ್ಲಿ ದೇವರ ಉತ್ಸವ ಬಲಿಯೊಂದಿಗೆ ಗ್ಯಾಸ್‌ಲೈಟ್ ಸೇವೆ ನೀಡುತ್ತಾರೆ.