ಪುತ್ತೂರು: ಹಿರಿಯ ಸುನ್ನಿ ವಿದ್ವಾಂಸ , ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಖ್ಯಾತ ಸುನ್ನಿ ಉಲಮಾ ಹಾಫಿಝ್ ವಹೀದ್ ನಈಮಿಯವರ ತಂದೆ ಅಬ್ದುಲ್ ಕರೀಂ ಮುಸ್ಲಿಯಾರ್ (88) ರವರು ಅಲ್ಪಕಾಲದ ಅಸೌಖ್ಯದಿಂದ ಜು. 21 ರಂದು ಕೆ ಸಿ ರೋಡಿನಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನರಾದರು.
ಮದ್ರಸ ಗುರುಗಳಾಗಿ ತನ್ನ ವೃತ್ತಿ ಜೀವನ ಅರಂಭಿಸಿದ ಮೃತರು ಪ್ರಾರಂಭದಲ್ಲಿ ಕೇರಳದ ಮಸೀದಿಯಲ್ಲಿ ಗುರುಗಳಾಗಿದ್ದವರು. ಆ ಬಳಿಕ ಒಳಮೊಗ್ರು ಗ್ರಾಮದ ಶೇಕಮಲೆ ಮಸೀದಿಯಲ್ಲಿ ಸುದೀರ್ಘ ಅವಧಿಯಲ್ಲಿ ಮದ್ರಸ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಶೇಕಮಲೆ ಮದ್ರಸದಲ್ಲೇ ನಿವೃತ್ತರಾಗಿದ್ದ ಅವರು ಈ ಹಿಂದೆ ಕಟ್ಟತ್ತಾರಿನಲ್ಲಿ ವಾಸವಾಗಿದ್ದರು. ಮೃತರ ಇಬ್ಬರು ಪುತ್ರರಾದ ವಹೀದ್ ನಈಮಿ ಮತ್ತು ಅಬ್ದುಲ್ಲ ಅಹ್ಸನಿಯವರು ಕುರ್‌ಆನ್ ಕಂಠಪಾಠ ಮಾಡಿದವರು. ಬಹ್ರುಲ್ ಉಲೂಂ ಒ ಕೆ ಉಸ್ತಾದರ ಶಿಷ್ಯರಾಗಿದ್ದ ಇವರು ಸುಲ್ತಾನುಲ್ ಉಲಮಾ ಶೈಖುನಾ ಎ ಪಿ ಉಸ್ತಾದರ ಸಹಪಾಠಿಯಾಗಿದ್ದವರು. ಮೃತರು ನಾಲ್ಕು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯವು ಉಳ್ಳಾಲ ಮಸೀದಿ ವಠಾರದಲ್ಲಿ ನಡೆಯಲಿದೆ.