ಶ್ರೀಲಂಕಾದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಪುತ್ತೂರಿನ ಶಾಲಿನಿ ಆತ್ಮಭೂಷಣ್

0

ಜು.23ರಿಂದ ಜು.27ರವರೆಗೆ ನೃತ್ಯಗುರುವಿನ ತಂಡದ ಜತೆ ಶ್ರೀಲಂಕಾ ಪ್ರವಾಸ

ಪುತ್ತೂರು: ಶ್ರೀಲಂಕಾದ ಜಾಫ್ನಾದಲ್ಲಿ ನಡೆಯುವ `ಭರತನಾಟ್ಯ,ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ(ರಿ.)ಇದರ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಜು.23ರಂದು ಶ್ರೀಲಂಕಾಗೆ ತೆರಳಿದ್ದಾರೆ.


ಉಳ್ಳಾಲ ನಾಟ್ಯನಿಕೇತನದ ನೃತ್ಯಗುರು, ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್ ಸೇರಿದಂತೆ ಏಳು ಮಂದಿಯ
ಹಿರಿಯ ಕಲಾವಿದೆಯರ ತಂಡ ಜಾಫ್ನಾದಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದೆ. ಬಳಿಕ ಕಲಾವಿದರಿಗೆ ಗೌರವ ಪುರಸ್ಕಾರ ಕೂಡ ನೆರವೇರಲಿದೆ. ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ಶ್ರೀ ವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿದೆ. ಇವರು ಜು.23ರಿಂದ 27ರ ವರೆಗೆ ಐದು ದಿನಗಳ ಕಾಲ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.


ವಿದುಷಿ ಶಾಲಿನಿ ಆತ್ಮಭೂಷಣ್ ಅವರು ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ 2019ರಲ್ಲಿ ಮಲೇಷಿಯಾಕ್ಕೆ ತೆರಳಿ ಅಲ್ಲಿಯೂ ತಂಡದೊಂದಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದರು. ಈ ಹಿಂದೆ ಮುಂಬೈ, ಪೂನಾ, ಕೇರಳ, ತಮಿಳ್ನಾಡು ಮತ್ತಿತರ ಕಡೆಗಳಲ್ಲೂ ಇವರು ಭರತನಾಟ್ಯ ಪ್ರದರ್ಶಿಸಿದ್ದಾರೆ. ಅಲ್ಲದೆ ನೃತ್ಯೋಪಾಸನಾ ಕಲಾ ತಂಡದ ವಿದ್ಯಾರ್ಥಿಗಳು ಕೂಡ ರಾಜ್ಯ, ಹೊರ ರಾಜ್ಯಗಳಲ್ಲೂ ಭರತನಾಟ್ಯ, ಸಮೂಹನೃತ್ಯ, ನೃತ್ಯರೂಪಕಗಳನ್ನು ಪ್ರದರ್ಶಿಸಿ ಎಲ್ಲರಿಂದ ಸೈ ಎನಿಸಿಕೊಂಡಿದೆ.


ವಿದುಷಿ ಶಾಲಿನಿ ಆತ್ಮಭೂಷಣ್ ಅವರು ಪುತ್ತೂರು ಮಾತ್ರವಲ್ಲದೆ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ವಿಟ್ಲ ಹಾಗೂ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಭರತನಾಟ್ಯ ನೃತ್ಯ
ತರಗತಿ ನಡೆಸುತ್ತಿದ್ದಾರೆ. ಶಾಲಾ ಕಾಲೇಜು ಹಾಗೂ ಆನ್‌ಲೈನ್ ಮೂಲಕವೂ ನೃತ್ಯ ತರಗತಿ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here