ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಪ್ಪಿನಂಗಡಿಯಲ್ಲಿ ಪತ್ರಿಕಾ ದಿನಾಚರಣೆ

0

ಪತ್ರಕರ್ತರಿಗೆ ರಕ್ಷಣೆ ನೀಡುವ ಕೆಲಸವಾಗಬೇಕಿದೆ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುವವರು ಪತ್ರಕರ್ತರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಅಭದ್ರತೆಯ ನಡುವೆ ಬದುಕುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹೀಗಾಗಿ ಅವರಿಗೆ ರಕ್ಷಣೆ ನೀಡುವ ಅನಿವಾರ್ಯತೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ಇವತ್ತು ಎಲ್ಲ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಅದರ ನಿಯಂತ್ರಣ ನೂರಕ್ಕೆ ನೂರು ಅಸಾಧ್ಯ. ಆದರೆ ಪ್ರತಿಯೊಬ್ಬರು ಕೂಡ ನಾನು ಭ್ರಷ್ಟಾಚಾರ ಮಾಡಲಾರೆ ಎಂದು ನಿರ್ಧರಿಸಿದರೆ ಇದಕ್ಕೆ ಕಡಿವಾಣ ಹಾಕಬಹುದು. ಲಂಚ ಪಡೆಯದೇ ಇರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪತ್ರಿಕಾ ರಂಗ ಬೆಂಬಲ, ಸ್ಫೂರ್ತಿ ನೀಡುವ ಕೆಲಸ ಮಾಡಬೇಕು. ನಾನು ಆರಂಭದಿಂದಲೂ ಭ್ರಷ್ಟಾಚಾರದ ವಿರುದ್ಧವೇ ಇದ್ದೇನೆ. ಶಾಸಕನಾಗಿ ಆಯ್ಕೆಯಾದ ಮೊದಲ ದಿನದಿಂದಲೇ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ ಎಂದವರು ನುಡಿದರು.


ಶಾಸಕನಾಗಿ ಆಯ್ಕೆಯಾದ ಮೇಲೆ ವಿಧಾನಸಭೆಯಲ್ಲಿ 15 ದಿನಗಳಲ್ಲಿ 12 ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಇದಕ್ಕೆ ಮಾಧ್ಯಮಗಳ ಸಹಕಾರವೇ ಕಾರಣ ಎಂದು ಹೇಳಿದ ಅವರು, ಪುತ್ತೂರು ತಾಲೂಕಿನ ಪತ್ರಕರ್ತರು ತಮ್ಮ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಪತ್ರಕರ್ತರ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.
ಪ್ರಜಾಪ್ರಭುತ್ವದ ಪ್ರಮುಖ 3 ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು. ಇವು ಮೂರು ಕೂಡ ದಾರಿ ತಪ್ಪಿದರೆ ಅದನ್ನು ಸರಿ ಮಾಡುವ ಕೆಲಸವನ್ನು ನಾಲ್ಕನೇ ಅಂಗವಾದ ಪತ್ರಿಕಾರಂಗ ಮಾಡುತ್ತಾ ಬಂದಿದೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿ ಬೆಳೆದು ಬಂದಿದೆ. ಇವತ್ತು ಸೋಷಿಯಲ್ ಮೀಡಿಯಾ ಎಷ್ಟು ವಿಸ್ತಾರವಾಗಿ ಬೆಳೆದು ಬಂದಿದೆ ಎಂದರೆ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಬರೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೂ ಜನ ನಿಖರತೆ ಮತ್ತು ಸತ್ಯಕ್ಕಾಗಿ ಇವತ್ತಿಗೂ ಪತ್ರಿಕಾ ರಂಗವನ್ನೇ ಆಶ್ರಯಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಪತ್ರಿಕಾರಂಗ ಇಲ್ಲದೇ ಇರುತ್ತಿದ್ದರೆ ಇವತ್ತು ರಾಜಕಾರಣಿಗಳನ್ನು ನಿಯಂತ್ರಣ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಶಾಸಕರು ನುಡಿದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಸುಬ್ಬಪ್ಪ ಕೈಕಂಬ ಮಾತನಾಡಿ, ಪತ್ರಕರ್ತರು ಮಾಡುವ ಕೆಲಸ ದೇಶಸೇವೆಯ ಕೆಲಸವಾಗಿದೆ. ಒಂದು ಶ್ರೇಷ್ಠಮಟ್ಟದ ಕಾರ್ಯಕ್ರಮ ಪತ್ರಕರ್ತರ ಜತೆ ಸೇರಿ ನಮ್ಮ ಸಂಸ್ಥೆಯಲ್ಲಿ ನಡೆದಿರುವುದು ಹೆಮ್ಮಯ ಸಂಗತಿ ಎಂದರು.
ಉಪ್ಪಿನಂಗಡಿ ಠಾಣೆಯ ಎಸ್‌ಐ ಓಮನಾ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ವಿದ್ಯಾರ್ಥಿ ಹಂತದಿಂದಲೇ ಮಾದಕ ವಸ್ತುಗಳಿಂದ ರಕ್ಷಣೆ ಮಾಡಬೇಕಾದ ಕಾರ್ಯ ಸಮಾಜದ ಮೇಲಿದೆ. ಮಾಧ್ಯಮಗಳು ಕೂಡ ಜಾಗೃತಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು. ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಉಷಾಚಂದ್ರ ಮುಳಿಯ ಮಾತನಾಡಿ, ಖಡ್ಗಕ್ಕಿಂತಲೂ ಹರಿತವಾದುದು ಮಾಧ್ಯಮವಾಗಿದೆ. ಇದರ ಸದುಪಯೋಗ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪತ್ರಿಕಾರಂಗ ಇವತ್ತು ನಮ್ಮೆಲ್ಲರ ಜೀವನದ ಅವಿಚ್ಛಿನ ಅಂಗವಾಗಿದೆ. ಉತ್ತಮ ಮೌಲ್ಯಗಳನ್ನು ಪತ್ರಿಕೆಗಳು ಮತ್ತು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪತ್ರಿಕಾ ದಿನಾಚರಣೆ ಉಪನ್ಯಾಸ: ಮಂಗಳೂರಿನ ಹಿರಿಯ ಪತ್ರಕರ್ತೆ ಪ್ರಿಯಾ ನಾಯ್ಕ್ ಅವರು ಪತ್ರಿಕಾ ದಿನಾಚರಣೆಯ ವಿಶೇಷ ಉಪನ್ಯಾಸ ನೀಡಿ, ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಕ್ರಾಂತಿಯಾಗಿರುವ ಕಾರಣ ಇವತ್ತು ಎಲ್ಲರೂ ವರದಿಗಾರರೇ ಆಗಿದ್ದಾರೆ. ತಮಗೆ ಅನಿಸಿದ್ದನ್ನೆಲ್ಲ ಬರೆದು ಪ್ರಸಾರ ಮಾಡುವ ಅವಕಾಶ ಎಲ್ಲರಿಗೂ ಸಿಕ್ಕಿದೆ. ಆದರೆ ಇದನ್ನು ಜವಾಬ್ದಾರಿಯಿಂದ ನಿರ್ವಹಿಸಿಬೇಕು. ಸಮಾಜವನ್ನು ಹಾಳು ಮಾಡಲು, ತಪ್ಪು ಸಂದೇಶ ನೀಡಲು ಬಳಸಿಕೊಳ್ಳಬಾರದು ಎಂದರಲ್ಲದೆ, ಕಾರ್ಯನಿರತ ಪತ್ರಕರ್ತರಿಗೂ ಹಿಂದೆಂದಿಗಿಂತಲೂ ಇವತ್ತು ಹೆಚ್ಚಿನ ಸವಾಲುಗಳಿವೆ. ಮಾಹಿತಿಗಳ ಕ್ರಾಂತಿಯ ಮಧ್ಯೆ ಸತ್ಯ ಮತ್ತು ನಿಖರತೆಯನ್ನು ಜನರಿಗೆ ನೀಡುವ ದೊಡ್ಡ ಜವಾಬ್ದಾರಿ ಇದೆ ಎಂದು ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಕೋರಿದರು. ಸಂಘದ ವತಿಯಿಂದ ಸದಸ್ಯರಿಗೆ ನೀಡುವ ಹೆಲ್ತ್‌ಕಾರ್ಡ್‌ನ್ನು ಪುತ್ತೂರು ತಾಲೂಕಿನ ಸದಸ್ಯರಿಗೆ ಈ ಸಂದರ್ಭ ಸಾಂಕೇತಿಕವಾಗಿ ವಿತರಿಸಲಾಯಿತು.
ಉಪ್ಪಿನಂಗಡಿ ಮೂಲದ ಬೆಂಗಳೂರು ಉದ್ಯಮಿ ನಟೇಶ್ ಪೂಜಾರಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಚಂದಪ್ಪ ಮೂಲ್ಯ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ನಿಶ್ಮಿತಾ ಮತ್ತು ಬಳಗದವರು ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿದ್ದೀಕ್ ನೀರಾಜೆ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ಉಪಸ್ಥಿತರಿದ್ದರು. ಪತ್ರಕರ್ತ ಯು.ಎಲ್. ಉದಯಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಉಪನ್ಯಾಸಕಿ ವೀಣಾಪ್ರಸಾದ್ ಕಜೆ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಡಾ.ಬಸವರಾಜೇಶ್ವರಿ ದಿಡ್ಡಿಮನಿ ವಂದಿಸಿದರು.

ಸಾಧಕರಿಗೆ ಸನ್ಮಾನ
ಕಳೆದ 46 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಪತ್ರಿಕಾ ವಿತರಣೆ ಸ್ಟಾಲ್‌ನ್ನು ಮುನ್ನಡೆಸುತ್ತಿರುವ ಯು.ನಾಗರಾಜ್ ಭಟ್, ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐರಿನ್ ಲೋಬೋ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿರುವ ಉಪ್ಪಿನಂಗಡಿ ಸರಕಾರಿ ಪಿ ಯು ಕಾಲೇಜಿನ ವಿದ್ಯಾರ್ಥಿನಿ ರೆಹನಾಝ್ ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮದ ವೇದಿಕೆಗೆ ಆಗಮಿಸುವ ಮೊದಲೇ ಸೋರುತ್ತಿರುವ ಕಾಲೇಜು ಕಟ್ಟಡವೊಂಡು ಅವರ ಕಣ್ಣಿಗೆ ಬಿತ್ತು. ತಕ್ಷಣ ಈ ಬಗ್ಗೆ ಕಾಲೇಜಿನ ಪ್ರಾಚಾರ್ಯರನ್ನು ವಿಚಾರಿಸಿದರು. ಆಗ ಆ ಕಟ್ಟಡವನ್ನು ಕಟ್ಟಲು ಶುರು ಮಾಡಿ 7 ವರ್ಷವಾದರೂ, ಅದಿನ್ನೂ ಕಾಲೇಜಿಗೆ ಹಸ್ತಾಂತರವಾಗದಿರುವ ಕುರಿತು ಮಾಹಿತಿ ತಿಳಿದ ಅವರು ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗೆ ಕರೆ ಮಾಡಿ ವಿಚಾರಿಸಿದ್ದರಲ್ಲದೇ, ಈ ಕಟ್ಟಡದಲ್ಲಿ ಕಳಪೆ ಕಾಮಗಾರಿ ನಡೆದಿದೆ. ಗೋಡೆಗಳಲ್ಲಿ ನೀರು ಜಿನುಗುತ್ತಿದೆ. ಸೋಮವಾರವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನನಗೆ ವರದಿ ನೀಡಬೇಕು ಎಂದರಲ್ಲದೆ, ಕಾಲೇಜು ಕಟ್ಟಡವನ್ನು ಸಂಪೂರ್ಣಗೊಳಿಸಿ ಶೀಘ್ರವೇ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಿಮ್ಮ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here