ವಿಟ್ಲ: ಮಳೆ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದು ನೀರಿನಮಟ್ಟ ಏರಿಕೆಯಾಗಿದೆ, ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಮಂದಿ ನೀರು ನುಗ್ಗುವ ಭೀತಿಯನ್ನು ಎದುರಿಸುವಂತಾಗಿದೆ. ಈಗಾಗಲೇ ಕೆಲವೆಡೆ ನೀರುನುಗ್ಗಿದೆ.
ನೇತ್ರಾವತಿ ನದಿಯಲ್ಲಿ ನಿಧಾನವಾಗಿ ನೀರಿನ ಮಟ್ಟ ಏರಿಕೆ ಕಂಡು ಬಂದಿದ್ದು, 7.2ಮೀ ಎತ್ತರದಲ್ಲಿ ನೀರು ಹರಿಯುತ್ತಿದೆ. 8.5 ಮೀ ಅಪಾಯದ ಮಟ್ಟವಾಗಿದ್ದು, 7.5 ಮೀ ನಷ್ಟು ನೀರು ಬಂದರೆ ಬಂಟ್ವಾಳ ತಾಲೂಕಿನ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಆಲಡ್ಕ ದಲ್ಲಿರುವ ಸುಮಾರು 9 ಮನೆಗೆ ನೀರು ನುಗ್ಗಿದೆ. ಮತ್ತು ಶಾರದ ವಿದ್ಯಾಲಯದ ಮಕ್ಕಳ ಆಟದ ಅಂಗಳ ಹಾಗೂ ಅಲ್ಲೇ ಸಮೀಪವಿರುವ ಅಡಿಕೆ ಕೃಷಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಈಗಾಗಲೇ ಮನೆಯರಿಗೆ ಮನೆಖಾಲಿ ಮಾಡಲು ಇಲಾಖೆ ಸೂಚನೆ ನೀಡಿದೆ.ಹಾಗಾಗಿ ಮನೆ ಸಾಮಾಗ್ರಿ ಜೊತೆ ಮನೆಮಂದಿ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ಎಸ್.ಐ.ರಾಮಕೃಷ್ಣ ಸ್ಥಳೀಯ ಪುರಸಭಾ ಸದಸ್ಯ ಸಿದ್ದೀಕ್ ನಂದಾವರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ನೇತ್ರಾವತಿ ನದಿಯ ನೀರು ಏರಿಕೆಯಾಗಿ ಅಪಾಯದ ಮಟ್ಟ ಮೀರಿದಲ್ಲಿ ಪ್ರಥಮವಾಗಿ ಪಾಣೆಮಂಗಳೂರಿನ ಆಲಡ್ಕ ಮತ್ತು ಬಸ್ತಿಪಡ್ಪು ಎಂಬಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ. ಅಬಳಿಕ ತಾಲೂಕಿನ 11 ಗ್ರಾಮಗಳ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಂಭವವಿದೆ.
ಈ ಪೈಕಿ ಪಾಣೆಮಂಗಳೂರು ಹೋಬಳಿಯ ಸಜೀಪ ಮೂಡ ಗ್ರಾಮದ ಕಾರಾಜೆ ದಾಸಬೈಲು, ಸಜೀಪ ಮುನ್ನೂರು ಗ್ರಾಮದ ನಾಗನವಳಚ್ಚಿಲ್, ಕುರುವಾರಕೇರಿ, ನಂದಾವರ, ಗೌಡ್ರಹಿತ್ಲು, ಹಾಲಾಡಿ,ಪರಾರಿ, ಬಿ.ಮೂಡ ಗ್ರಾಮದ ಬಸ್ತಿಪಡ್ಪು,ಕಂಚಿಕಾರ ಪೇಟೆ,ತಲಪಾಡಿ,ಜುಮಾದಿಗುಡ್ಡೆ, ಪರಾರಿ,ನಂದರಬೆಟ್ಟು,ಭಂಡಾರಿಬೆಟ್ಟು. ಪಾಣೆಮಂಗಳೂರು ಗ್ರಾಮದ ಜೈನರಪೇಟೆ,ಆಲಡ್ಕ, ಬೋಗೊಡಿ, ಗುಡ್ಡೆಯಂಗಡಿ, ಆಲಡ್ಕ,ಬಂಗ್ಲೆಗುಡ್ಡೆ.ಕಡೇಶಿವಾಲಯ ಗ್ರಾಮದ ರಥಬೀದಿ. ಬರಿಮಾರು ಗ್ರಾಮದ ಕಡವಿನ ಬಳಿ. ನರಿಕೊಂಬು ಗ್ರಾಮದ ಪುತ್ರೋಟಿಬೈಲು,ಬೈಪಾಸೆ, ಕರ್ಬೆಟ್ಟು,ಕಲ್ಯಾರು. ಪುದು ಗ್ರಾಮದ ಪುಂಚಮೆ,ಫರಂಗಿಪೇಟೆ, ಅಮ್ಮೆಮಾರ್. ತುಂಬೆ ಗ್ರಾಮದ ವಳವೂರು, ಕೆಳಗಿನ ತುಂಬೆ,ಮಲ್ಲಿ, ತುಂಬೆ ಕುನಿಲ್ ಸ್ಕೂಲ್ ಬಳಿ. ಕರಿಯಂಗಳ ಗ್ರಾಮದ ಕರಿಯಂಗಳ,ಪೊಳಲಿ, ಪಲ್ಲಿಪಾಡಿ. ಅಮ್ಮುಂಜೆ ಗ್ರಾಮದ ಹೊಳೆಬದಿ ಮುಂತಾದ ಕಡೆಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ.