ನಿಡ್ಪಳ್ಳಿ-ಶೇ.87.14 ಮತದಾನ
ಆರ್ಯಾಪು-ಶೇ.80.73 ಮತದಾನ
ಪುತ್ತೂರು:ತಾಲೂಕಿನ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾ.ಪಂಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಜು.23ರಂದು ಉಪ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ನಿಡ್ಪಳ್ಳಿಯಲ್ಲಿ ಶೇ.87.14 ಹಾಗೂ ಆರ್ಯಾಪುನಲ್ಲಿ ಶೇ.80.73 ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು ಸಂಜೆ 5 ಗಂಟೆಯ ತನಕ ನಡೆಯಿತು. ನಿಡ್ಪಳ್ಳಿ ಗ್ರಾ.ಪಂನ ಉಪ ಚುನಾವಣೆಯಲ್ಲಿ ನಿಡ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆರ್ಯಾಪು ಗ್ರಾ.ಪಂನ ಉಪ ಚುನಾವಣೆಗೆ ಕುಂಜೂರು ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಿತು.
ಒಟ್ಟು 607 ಮತದಾರರನ್ನು ಹೊಂದಿರುವ ನಿಡ್ಪಳ್ಳಿ ವಾರ್ಡ್ 1ರ ಉಪ ಚುನಾವಣೆಯಲ್ಲಿ 254 ಪುರುಷರು ಹಾಗೂ 257 ಮಹಿಳೆಯರು ಸೇರಿದಂತೆ ಒಟ್ಟು 529 ಮಂದಿ ಮತ ಚಲಾಯಿಸಿದ್ದಾರೆ. ಆರ್ಯಾಪು ಗ್ರಾ.ಪಂನ ವಾರ್ಡ್ 2ರಲ್ಲಿ ಒಟ್ಟು 1237 ಮಂದಿ ಮತದಾರರನ್ನು ಹೊಂದಿದ್ದು ಇದರಲ್ಲಿ 515 ಪುರುಷರು ಹಾಗೂ 484 ಮಹಿಳೆಯರು ಸೇರಿದಂತೆ ಒಟ್ಟು 999 ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು ಮತದಾನ ಕೇಂದ್ರದ ಬಳಿ ಮೂರು ಪಕ್ಷಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮೂರು ಪಕ್ಷಗಳ ತೀವ್ರ ಪೈಪೋಟಿಯಿಂದಾಗಿ ಮೂರು ಪಕ್ಷಗಳೂ ಪ್ರತ್ಯೇಕ ಪ್ರತ್ಯೇಕ ಬೂತ್‌ಗಳನ್ನು ಅಳಡವಡಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಜಮಾಯಿಸಿರುವುದು ಹಾಗೂ ನಾಯಕರುಗಳ ವಾಹನಗಳು ರಸ್ತೆ ಬದಿ ಸಾಲುಗಟ್ಟಿ ನಿಂತಿರುವುದನ್ನು ಗಮನಿಸುವಾಗ ಇದೇನು ವಿಧಾನ ಸಭೆ, ಲೋಕ ಸಭೆ ಚುನಾವಣೆಯಂತೆ ಭಾಸವಾಗುತ್ತಿತ್ತು. ಪಂಚಾಯತ್ ಉಪ ಚುನಾವಣೆಯಂತೆ ಕಂಡು ಬರುತ್ತಿರಲಿಲ್ಲ. ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲಾ ಪಕ್ಷಗಳ ಮುಖಂಡರುಗಳು ಹಾಗೂ ಕಾರ್ಯಕರ್ತರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವೊಳಿಸುತ್ತಿರುವುದು, ವಾಹನಗಳಲ್ಲಿ ಕರೆ ತರುವುದು ಕಂಡು ಬರುತ್ತಿತ್ತು.
ನಿಡ್ಪಳ್ಳಿ ಗ್ರಾ.ಪಂ.ನ ನಿಡ್ಪಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ.ಚಂದ್ರಶೇಖರ ಪ್ರಭು ಗೋಳಿತ್ತಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಕಣದಲ್ಲಿದ್ದರು.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ ಭಂಡಾರಿ ಗೆಣಸಿನಕುಮೇರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಬ್ಬುಗದ್ದೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಕಣದಲ್ಲಿದ್ದರು.
ಜು.26 ಫಲಿತಾಂಶ:
ಉಪ ಚುನಾವಣೆಯ ಮತ ಎಣಿಕೆ ಕಾರ್ಯಗಳು ಜು.26ರಂದು ತಾಲೂಕು ಆಡಳಿತ ಕೇಂದ್ರದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದು ಫಲಿತಾಂಶ ಘೋಷಣೆಯಾಗಲಿದೆ.