ಪುತ್ತೂರು: ತುಳುನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ ಅದು ಆಟಿ ಕಳೆಂಜ. ಇದು ಆಟಿ ತಿಂಗಳಿನಲ್ಲಿ ನಡೆಸುವ ಒಂದು ವಿಶೇಷ ಕುಣಿತ. ಆಟಿ ಕಳೆಂಜನನ್ನು ಮಾರಿ ಅಂದರೆ ದುಷ್ಟ ಶಕ್ತಿಗಳನ್ನು, ರೋಗ ರುಜಿನಗಳನ್ನು ಓಡಿಸುವ ಮಾಂತ್ರಿಕ ಎಂದು ನಂಬಲಾಗಿದೆ. ಜನರಿಂದ ಹಿಡಿದು ಪ್ರಾಣಿ ಪಕ್ಷಿಗಳಿಗೂ ಆಟಿ ತಿಂಗಳಲ್ಲಿ ರೋಗ ರುಜಿನಗಳು ಅಂಟಿ ಕೊಳ್ಳುತ್ತವೆ. ಊರಿಗೆ ಬಂದಂತಹ ಮಾರಿಯನ್ನು ಅಂದರೆ ರೋಗವನ್ನು ಓಡಿಸುವ ಸಲುವಾಗಿ ದೇವರ ಪ್ರತಿನಿಧಿಯಾಗಿ ಆಟಿ ಕಳೆಂಜ ಊರಿಗೆ ಬರುತ್ತಾನೆ. ಇಂತಹ ಕಳೆಂಜ ವೇಷಧಾರಿಯ ತಂಡ ಜು.25 ರಂದು ಪೆರ್ಲಂಪಾಡಿಯ ಷಣ್ಮುಖದೇವ ಪ್ರೌಢ ಶಾಲೆಯ ಸಂಚಾಲಕರಾಗಿರುವ ಶಿವರಾಮ ಭಟ್ ಬೀರ್ಣಕಜೆಯವರ ಮನೆಗೆ ಭೇಟಿ ನೀಡಿದೆ. ಪೆರ್ಲಂಪಾಡಿಯ ಶೀನ ಮತ್ತು ಬಳಗದವರು ಈ ಕಳೆಂಜ ವೇಷವನ್ನು ಹಾಕುತ್ತಿದ್ದು, ಇವರು ಪ್ರತಿವರ್ಷ ಕಳೆಂಜ ಕುಣಿತವನ್ನು ಮಾಡುತ್ತಾ ಬಂದಿದ್ದಾರೆ. ಇವರ ತಂಡದಲ್ಲಿ ಶಾಲೆಗೆ ಹೋಗುವ ಮಕ್ಕಳೇ ವೇಷ ಹಾಕುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮನೆಗೆ ಬಂದ ಆಟಿ ಕಳೆಂಜನನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡ ಶಿವರಾಮ ಭಟ್‌ರವರು ಕಳೆಂಜನಿಗೆ ವಿಶೇಷ ಕಾಣಿಕೆಯನ್ನು ನೀಡಿ ಕಳುಹಿಸಿದ್ದಾರೆ. ತುಳುನಾಡಿನಲ್ಲಿ ಆಟಿ ತಿಂಗಳ ವಿಶೇಷ ಕುಣಿತವಾಗಿರುವ ಈ ಆಟಿ ಕಳೆಂಜ ಕುಣಿತ ಸಂಸ್ಕೃತಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ತಿಳಿಸುವ ಅಗತ್ಯತೆ ತುಂಬಾ ಇದೆ. ಇಂತಹ ತಂಡಕ್ಕೆ ಪ್ರೋತ್ಸಾಹ ನೀಡುವ ಮೂಲಕ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುತ್ತಾರೆ ಶಿವರಾಮ ಭಟ್ ಬೀರ್ಣಕಜೆ. ತುಳುನಾಡಿನಲ್ಲಿ ನಶಿಸಿ ಹೋಗುತ್ತಿರುವ ತುಳುವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವ ತಂಡಕ್ಕೊಂದು ಹ್ಯಾಟ್ಸಫ್ ಹೇಳಲೇಬೇಕಾಗಿದೆ.