ಪುತ್ತೂರು: ಇನ್ನೂ ಬದುಕಬೇಕಿದ್ದ ನನ್ನ ಮಗ , ನಮ್ಮ ಕುಟುಂಬಕ್ಕೆ ಆಧಾರವಾಗಬೇಕಿದ್ದವ, ವಿದಿಯ ಲೀಲೆಗೆ ಬಲಿಯಾದ ನನಗಿನ್ನು ಯಾರು ಗತಿ, ನನಗೆ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ, ಮನೆ ಬಿಟ್ರೆ ನಮಗೆ ಏನೂ ಇಲ್ಲ. ನನ್ನ ಮಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ನಮ್ಮ ಮನೆಗೆ ಆ ಪಕ್ಷದವರು, ಈ ಪಕ್ಷದವರೆಂದು ಹೇಳಿಕೊಂಡು ಒಂದಷ್ಟು ಜನ ಗುಂಪುಗುಂಪಾಗಿ ಬರುತ್ತಾರೆ, ನಮ್ಮ ಜೊತೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ, ಸಾಂತ್ವನ ಹೇಳಿ ಬಂದಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಆದರೆ ನಮ್ಮ ನೋವನ್ನು ಕೇಳುವವರು ಯಾರೂ ಇಲ್ಲ.. ನನ್ನ ಮಗ ಅಪಘಾತವಾಗಿ ರಸ್ತೆಯಲ್ಲಿ ಹೊರಳಾಡುತ್ತಿದ್ದರೂ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿಲ್ಲ, ಯಾರೂ ಸಹಾಯ ಮಾಡಿಲ್ಲ ಎಂದು ಕಳೆದ ಜು. 23 ರಂದು ಕೆಮ್ಮಾಯಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಚರಣ್ ಎಂಬ ಯುವಕನ ಕುಟುಂಬಸ್ಥರು ಶಾಸಕ ಅಶೋಕ್ ರೈ ಮುಂದೆ ತಮ್ಮ ಅಳಲು ತೋಡಿಕೊಂಡರು.
ಜು.24 ರಂದು ರಾತ್ರಿ ಮೃತರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ವಾಗ್ದಾನ ಮಾಡಿದರು.
ಶಾಸಕರನ್ನು ಕಂಡ ಕೂಡಲೇ ಕಣ್ಣೀರು ಹಾಕಿದ ಚರಣ್ ತಾಯಿ ಇರುವ ಒಬ್ಬ ಮಗನನ್ನು ಕಳೆದುಕೊಂಡೆ ತನ್ನ ಪತಿಯೂ ಇಲ್ಲ ಇನ್ನು ಹೇಗೆ ನಾನು ಜೀವನ ಮಾಡಲಿ ಎಂದು ಕಣ್ಣೀರು ಹಾಕಿದರು. ಪುತ್ರ ಶೋಕಂ ನಿರಂತರ ಎಂಬಂತೆ ತಾಯಿಯ ನೋವನ್ನು ಕಂಡು ಶಾಸಕರು ಗದ್ಗದಿತರಾದರು. ಕಷ್ಟವಾದರೆ ನನ್ನಲ್ಲಿ ಹೇಳಿ, ನಿಮ್ಮ ಮಗಳಿಗೆ ಒಳ್ಳೆಯ ವಿದ್ಯಾಬ್ಯಾಸ ಕೊಡಿಸಿ, ವಿಧಿಯಾಟ ಎನು ಮಾಡುವುದು. ನೀವು ಮನಸ್ಸು ಗಟ್ಟಿಮಾಡಿಕೊಳ್ಳಿ, ನಿಮ್ಮ ನೋವು ನಮಗೆ ಅರ್ಥವಾಗುತ್ತದೆ ಎಂದು ತಾಯಿಯನ್ನು ಸಮಾಧಾನ ಮಾಡಿದರು