ಜಿಲ್ಲಾಮಟ್ಟದ ಕಟ್ಟಡ ನಿರ್ಮಾಣಕ್ಕೆ ಸದಸ್ಯರೆಲ್ಲರ ಸಹಕಾರ ಅಗತ್ಯ – ಆನಂದ್ ಎನ್.ಜಿ
ಪುತ್ತೂರು: ಜಿಲ್ಲೆ ಬೇರೆಯಲ್ಲ, ವಲಯ ಬೇರೆಯಲ್ಲ. ಜಿಲ್ಲಾ ಮಟ್ಟದಲ್ಲಿ ರೂಪಿಸುವ ಯೋಜನೆ ಎಲ್ಲಾ ಸದಸ್ಯರಿಗೂ ಅನ್ವಯ ಆಗುತ್ತದೆ. ಸೌಲಭ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಒಂದು ಸ್ವಂತ ಜಮೀನನ್ನು ಈಗಾಗಲೇ ಖರೀದಿಸಿದ್ದೇವೆ ಮುಂದೆ ಕಟ್ಟಡ ನಿರ್ಮಾಣಕ್ಕೆ ಸದಸ್ಯರೆಲ್ಲರ ಸಹಕಾರ ಅಗತ್ಯ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಆನಂದ್ ಎನ್ ಅವರು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಪುತ್ತೂರು ವಲಯದಿಂದ ಜು.25ರಂದು ಸಂಜೆ ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆದ ವಾರ್ಷಿಕಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಂಘದ ಸದಸ್ಯರಿಗೆ ವಿವಿಧ ಸೌಲಭ್ಯ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ವಿದ್ಯಾನಿಧಿ, ಛಾಯಸುರಕ್ಷಾ ನಿಧಿ ಹೀಗೆ ಅನೇಕ ಕಾರ್ಯಕ್ರಮ ನಮ್ಮ ಮುಂದಿದೆ. ಈ ನಡುವೆ ಸಂಘಕ್ಕೆ ಸ್ವಂತ ಆಸ್ತಿ ಇರಬೇಕೆಂದು ಈಗಾಗಲೇ ಜಿಲ್ಲಾ ಕಟ್ಟಡ ಸಮಿತಿ ರಚನೆ ಮಾಡಿ ಜಾಗ ಖರೀಸಿದಿ ಆಗಿದೆ. ಮುಂದೆ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘದ ಸದಸ್ಯರ ಸಹಕಾರ ಬೇಕಾಗಿದ್ದು, ಜಿಲ್ಲಾ ಕಟ್ಟಡ ಸಮಿತಿಗೆ ಪುತ್ತೂರು ವಲಯ ಕಟ್ಟಡ ಸಮಿತಿ ರಚನೆ ಮಾಡಬೇಕಾಗಿದೆ ಎಂದರು.
ಎಲ್ಲರ ಸಹಕಾರದಿಂದ ಅವಧಿ ಪೂರ್ಣಗೊಳಿಸಿದ್ದೇನೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಲಯ ಸಮಿತಿ ಅಧ್ಯಕ್ಷ ನಾಗೇಶ್ ಟಿ.ಎಸ್ ಅವರು ಮಾತನಾಡಿ ಜಿಲ್ಲಾ ಸಂಘದ ಸಲಹೆ ಮಾರ್ಗದರ್ಶನದ ಮೂಲಕ ಪುತ್ತೂರು ವಲಯ ಸಮಿತಿಯಿಂದ ಸದಸ್ಯರ ಸಭೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ಕೋರಲಾಗಿತ್ತು. ಇದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯ ಮಾಡುವ ಸಂದರ್ಭದಲ್ಲಿ ಸಂಘದ ಸದಸ್ಯರ ಪೂರ್ಣ ಸಹಕಾರ ಲಭಿಸಿದೆ. ಈ ನಿಟ್ಟಿನಲ್ಲಿ ಸದಸ್ಯರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಂಘದ ಮೂಲಕ ಸಾಮಾಜಿಕ ಚಟುವಟಿಕೆ ನಡೆದಿದೆ:
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಅವರು ಸ್ವಾಗತಿಸಿ ಮಾತನಾಡಿ ಹಿರಿಯರ ಮಾರ್ಗದರ್ಶನದಲ್ಲಿ ಸಂಘ ಸ್ಥಾಪನೆಯಾಗಿ 30 ವರ್ಷ ಕಳೆದಿದೆ. ಇದೀಗ ಸಂಘ ಬಲಿಷ್ಠವಾಗಿದ್ದು, ಪ್ರತಿ ವರ್ಷ ರಕ್ತದಾನ, ಅನಾಥ ಆಶ್ರಮಕ್ಕೆ ದೇಣಿಗೆ, ಶೈಕ್ಷಣಿಕವಾಗಿ ಹೆಚ್ಚು ಒತ್ತುಕೊಟ್ಟು ಬಡ ವಿದ್ಯಾರ್ಥಿಯ ದತ್ತು ಸ್ವೀಕಾರ, ಸಂಘದ ಸದಸ್ಯರ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯ ಮೂಲಕ ಪ್ರತಿಭಾಪುರಸ್ಕಾರ ಹೀಗೆ ಹಲವು ಕಾರ್ಯಕ್ರಮ ನಿರಂತರ ಹಾಕಿಕೊಂಡು ಬರುತ್ತಿದ್ದೇವೆ. ಪ್ರಸ್ತುತ ಸಂಘದಲ್ಲಿ 300ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಮುಂದೆ ಸಂಘದ ಸ್ವಂತ ಕಟ್ಟಡಕ್ಕೆ ಸದಸ್ಯರ ಸಹಕಾರ ಬೇಕಾಗಿದೆ ಎಂದರು.
ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಕಾರ್ಕಳ, ಲೋಕೇಶ್ ಬಿ.ಎನ್ ಅವರು ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಸಾಲಿಯಾನ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಗಿರಿಧರ ಭಟ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸಂಘದ ಸದಸ್ಯರು ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಕಟ್ಟಡ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಿತ್ತೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ್ ರಾವ್ ಉಪಸ್ಥಿತರಿದ್ದರು.
ಸನ್ಮಾನ:
ಸಂಘದ ಉತ್ತಮ ಬೆಳವಣೆಗೆಗೆ ಶ್ರಮವಹಿಸಿದ ಹಿನ್ನಲೆಯಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದ.ಕ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಆನಂದ್ ಎನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಮತ್ತು ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಅವರನ್ನು ಪುತ್ತೂರು ವಲಯದಿಂದ ಸನ್ಮಾನಿಸಲಾಯಿತು. ಮುರಳಿರಾಯರ ಮನೆ ಸನ್ಮಾನ ಪತ್ರ ವಾಚಿಸಿದರು. ನಿಯೋಜಿತ ಅಧ್ಯಕ್ಷ ರಘು ಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಚಂದ್ರಶೇಖರ್, ಹರೀಶ್ ಎಲಿಯ, ವಸಂತ ಕಾಣಿಯೂರು, ವಿನಯ ರೈ, ಸಂತೋಷ್ ಬನ್ನೂರು, ಗಿರೀಶ್ ಉಪ್ಪಿನಂಗಡಿ, ಶುಶ್ರುತ್ ಉಪ್ಪಿನಂಗಡಿ, ಜಯಂತ್ ಗೌಡ ಅತಿಥಿಗಳನ್ನು ಗೌರವಿಸಿದರು. ಮುರಲಿ ರಾಯರಮನೆ ಪ್ರಾರ್ಥಿಸಿದರು. ನವೀನ್ ರೈ ಪಂಜಳ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ಷಣ್ಮುಖ ಉಪ್ಪಿನಂಡಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ನೂತನ ಸದಸ್ಯತನ ಮತ್ತು ಸದಸ್ಯತನ ನವೀಕರಣ ಕಾರ್ಯಕ್ರಮ ನಡೆಯಿತು.
ಪುತ್ತೂರ ವಲಯ ಸಮಿತಿಯಿಂದ ಉತ್ತಮ ಕಾರ್ಯ
ಪುತ್ತೂರು ವಲಯ ಸಮಿತಿ ಕಳೆದ ಬಾರಿ ಜಿಲ್ಲಾ ಅತ್ಯುತ್ತಮ ವಲಯ ಪ್ರಶಸ್ತಿ ಪಡೆದು ಕೊಂಡಿರುವುದು ಸಮಿತಿ ಕಾರ್ಯಸಾಧನೆಯನ್ನು ತೋರಿಸುತ್ತದೆ. ರಕ್ತದಾನ ಶಿಬಿರ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ಉತ್ತಮ ಕೆಲಸವನ್ನು ಪುತ್ತೂರು ವಲಯ ಸಮಿತಿ ಮಾಡಿದೆ ಎಂದು ಸೌತ್ ಕೆನರಾ ಪೊಟೋ ಗ್ರಾಫರ್ಸ್ ಅಸೋಸಿಯೇಶನ್ನ ಜಿಲ್ಲಾಧ್ಯಕ್ಷ ಆನಂದ್ ಎಸ್ ಹೇಳಿದರು.