ಕಡಬ: ಜಿ.ಪಂ., ತಾ.ಪಂ. ಸೀಮಾ ನಿರ್ಣಯ ಸಭೆ ಕೊಯಿಲದ ಬದಲು ನೆಲ್ಯಾಡಿ ಜಿ.ಪಂ. ಕ್ಷೇತ್ರವೆಂದು ಮರು ನಾಮಕರಣಕ್ಕೆ ದಾಖಲು

0

ಕಡಬ ತಾಲೂಕಿನ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರ ಹಾಗೂ 12 ತಾಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸುವ ಬಗ್ಗೆ ಚರ್ಚಿಸಲಾಯಿತು.

ಕಡಬ: ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸುವ ಕುರಿತು ವಿವಿಧ ರಾಜಕೀಯ ಮುಖಂಡರುಗಳ ಅಭಿಪ್ರಾಯ ಸಂಗ್ರಹಿಸುವ ಸಭೆಯು ಕಡಬ ಆಡಳಿತ ಸೌಧದಲ್ಲಿ ನಡೆಯಿತು.

ಕಡಬ ತಹಸೀಲ್ದಾರ್ ರಮೇಶ್ ಬಾಬು ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಡಬ ತಾಲೂಕಿನ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರ ಹಾಗೂ 12 ತಾಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕರ್ನಾಟಕ ಸೀಮಾ ನಿರ್ಣಯ ಆಯೋಗದ ಸೂಚನೆಯಂತೆ ಈ ಸಭೆ ನಡೆಸಲಾಗುತ್ತಿದೆ. ಸರಕಾರ ಈ ಹಿಂದಿನ ಕ್ಷೇತ್ರಗಳ ಸೀಮ ನಿರ್ಣಯವನ್ನು ಪುನರ್ ನಿಗದಿಪಡಿಸಲು ಕಾಲಾವಕಾಶವನ್ನು ನೀಡಿ ಆದೇಶಿಸಿದೆ, ಜಿಲ್ಲಾಧಿಕಾರಿಯವರು ಸೀಮಾ ಗಡಿ ನಿರ್ಣಯಿಸಲು ಕೂಲಂಕುಷವಾಗಿ ರಾಜಕೀಯ ಮುಖಂಡರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಆದೇಶಿರುತ್ತಾರೆ.

ಈ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ರಾಜಕೀಯ ಮುಖಂಡರು ಅಭಿಪ್ರಾಯ ತಿಳಿಸುವಂತೆ ಕೋರಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಿತರ ಪಕ್ಷಗಳ ಮುಖಂಡರು ಒಮ್ಮತದ ನಿರ್ಣಯಕ್ಕೆ ಬಂದು ಈಗಾಗಲೇ ನಿಗದಿಪಡಿಸಿರುವ ಕೊಯಿಲ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ನೆಲ್ಯಾಡಿಯಲ್ಲಿ ಐತಿಹಾಸಿಕ ಸ್ಥಳಗಳು ಹಾಗೂ ಶೈಕ್ಷಣಿಕ ಸ್ಥಳಗಳು ಇರುವ ಹಿನ್ನೆಲೆಯಲ್ಲಿ ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರವೆಂದು ಮರುನಾಮಕರಣ ಮಾಡುವಂತೆ ದಾಖಲಿಸಿಕೊಳ್ಳಲಾಯಿತು. ಈಗಿರುವ ಎಲ್ಲಾ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟರು.

ಕ್ಷೇತ್ರದ ಹೆಸರು ಬದಲಾವಣೆಗೆ ನಮ್ಮ ಆಕ್ಷೇಪವಿಲ್ಲ ಆದರೆ ಈಗಾಗಲೇ ಮಾಡಿರುವ ಕ್ಷೇತ್ರ ವಿಂಗಡಣೆಗೆ ನಮ್ಮ ಆಕ್ಷೇಪವಿದೆ. ಅವುಗಳ ಪುನರ್ ವಿಂಗಡಣೆ ಆಗಲೇಬೇಕು ಎಂದು ಅಗ್ರಹಿಸಿದರು. ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ರಮೇಶ್ ಬಾಬು ಹೇಳಿದರು. ಉಪತಹಸೀಲ್ದಾರ್ ಮನೋಹರ ಕೆ.ಟಿ , ಗ್ರಾಮ ಲೆಕ್ಕಿಗ ಸಂತೋಷ್ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಬಾಲಕೃಷ್ಣ ಸುವರ್ಣ ಬಾಣಜಾಲು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಮೇಲಿನಮನೆ, ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಕಡಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಾಬು ಮುಗೇರ, ಅಶ್ರಫ್ ಶೇಡಿಗುಂಡಿ, ಎ.ಪಿ.ಎಂ.ಸಿ ಮಾಜಿ ನಿರ್ದೆಶಕ ಎ.ಕುಶಾಲಪ್ಪ ಗೌಡ, ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ರವಿಪ್ರಸಾದ್ ಶೆಟ್ಟಿ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಸುಧಾಕರ ಜಿ, ಬಿಜೆಪಿ ಕಡಬ ಬೂತ್ ಸಮಿತಿ ಅಧ್ಯಕ್ಷ ಕಿಶನ್ ಕುಮಾರ್ ರೈ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here