ಪುತ್ತೂರಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡುವೆ -ಶಾಸಕ ಅಶೋಕ್ ಕುಮಾರ್ ರೈ ಭರವಸೆ
ಪುತ್ತೂರು: ಪುತ್ತೂರು ತಾಲೂಕಿನ ಶಾಲೆಗಳ 10ನೇ ತರಗತಿ ವ್ಯಾಸಂಗ ಮಾಡಿ ಕನ್ನಡವನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡದಲ್ಲಿ ಶೇ.100 ಅಂಕವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ `ಕನ್ನಡ ಪ್ರತಿಭೆ’ ಎಂಬ ನಾಮಾಂಕಿತದಿಂದ ಗೌರವಿಸಿ ಅಭಿನಂದಿಸುವ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಪುತ್ತೂರು ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಜು.29ರಂದು ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಸರಕಾರದಿಂದ ಮಂಜೂರಾಗಿರುವ ಜಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಾಸಕನ ನೆಲೆಯಲ್ಲೂ ಸಹಕಾರ ನೀಡುತ್ತೇನೆ ಅದರೊಂದಿಗೆ ಹೊರಗಿನಿಂದ ಫಂಡ್ ಕಲೆಕ್ಟ್ ಮಾಡುಸುವಲ್ಲಿ ಸಿ ಎಸ್ ಆರ್ ಫಂಡ್ ಮೂಲಕವೂ ಪ್ರಯತ್ನ ಮಾಡುತ್ತೇನೆ ಎಂದರು. ಭ್ರಷ್ಟಚಾರ ವಿರೋಧಿಸಿ ಪುತ್ತೂರಿನ ಅಭಿವೃದ್ಧಿಗೆ ಪಣ ತೊಡುವ ಕೆಲಸ ಮಾಡುತ್ತೇನೆ ಎಂದರು.
‘ಕೆನ್ನೆಡಿಗಳು, ಒಂದು ಕಥಾನಕ’ ಎಂಬ ಕೃತಿ ಬಿಡುಗಡೆ:
ಕನ್ನಡದ ಪ್ರಸಿದ್ಧ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರ ಸಹೋದರಿ ಶ್ರೀದೇವಿ ಹಾಗೂ ಪುತ್ತೂರಿನ ಖ್ಯಾತ ವಕೀಲರಾಗಿದ್ದ ದಿವಂಗತ ಸದಾಶಿವರಾಯರ ಪುತ್ರ ಎಂ ಶಾಂತರಾಮ್ ರಾವ್ ಅವರು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ‘ಕೆನ್ನೆಡಿಗಳು, ಒಂದು ಕಥಾನಕ’ ಎಂಬ ಕೃತಿಯನ್ನು ಹಿರಿಯ ಸಾಹಿತಿ ಡಾ| ತಾಳ್ತಜೆ ವಸಂತ ಕುಮಾರ ಲೋಕಾರ್ಪಣೆ ಮಾಡಿದರು.
ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ನ್ಯಾಯವಾದಿ ಮುರಳಿಕೃಷ್ಣ ಚಲ್ಲಂಗಾರು ಕೃತಿಕಾರರನ್ನು ಪರಿಚಯಿಸಿದರು. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಕೃತಿ ಪರಿಚಯನ್ನು ಮಾಡಿದರು. ಇದೆ ಸಂದರ್ಭದಲ್ಲಿ ಕೃತಿಗಾರ ಶಾಂತಾರಾಮ್ ರಾವ್ ದಂಪತಿಯನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ , ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾದ ಮಿತ್ರಂಪಾಡಿ ಜಯರಾಮ ರೈ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ:
ಐ.ಎ.ಎಸ್, ಐ.ಪಿ.ಎಸ್, ಕೆ ಎ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ವಿವೇಕಾನಂದ ಐ. ಎ.ಎಸ್ ಕೇಂದ್ರ- ಯಶಸ್ ಇದರ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿರುವ ದರ್ಶನ್ ಗರ್ತಿಕೆರೆ ನಡೆಸಿದರು.
ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ’ ಗೌರವ:
ಕನ್ನಡವನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡದಲ್ಲಿ ಶೇ.100 ಅಂಕವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ’ ಎಂಬ ನಾಮಾಂಕಿತದಿಂದ ಗೌರವಿಸಲಾಯಿತು. ಪುತ್ತೂರು ತಾಲೂಕಿನ ಒಟ್ಟು 31 ಶಾಲೆಯ ಸುಮಾರು 174 ವಿದ್ಯಾರ್ಥಿಗಳು ಈ ಕನ್ನಡ ಪ್ರತಿಭೆ ಪ್ರಶಸ್ತಿಗೆ ಭಾಜನರಾಗಿದ್ದು. ಅವರನ್ನು ಪರಿಷತ್ ವತಿಯಿಂದ ಅಭಿನಂದಿಸಲಾಯಿತು. ಪ್ರೊ. ವಿಜಯಕುಮಾರ್ ಮೊಳೆಯರ್ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು.
ಡಾ.ಹರ್ಷಾ ಕುಮಾರ್ ರೈ ಮಾಡಾವು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ಮುಖ್ಯಗುರು ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಕೆಯ್ಯೂರು ಶಾಲೆಯ ಬಾಬು ಮಾಸ್ಟರ್ ವಂದಿಸಿದರು.