ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಿ- ಕಾರ್ಯಕರ್ತರಿಗೆ ಶಾಸಕ ಅಶೋಕ್ ರೈ ಕರೆ

0

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ, ಈ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು ಜನ ಸರಕರದ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜು.29ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ತಿಂಗಳು ಪ್ರತೀ ಮನೆ ಯಜಮನಿಯ ಖಾತೆಗೆ 2 ಸಾವಿರ ಜಮೆಯಾಗಲಿದೆ, ವಿದ್ಯುತ್ ಉಚಿತವಾಗಲಿದೆ, 5 ಕೆ ಜಿ ಅಕ್ಕಿ ಮತ್ತು 5 ಕೆ ಜಿ ಅಕ್ಕಿಯ ಹಣ ಖಾತೆಗೆ ಜಮಾವಣೆಯಾಗಿದೆ. ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಬಡವರಿಗಾಗಿ ಮಾಡಿದ ಯೋಜನೆಗಳಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಒಳ್ಳೆಯ ಯೋಜನೆಗಳನ್ನು ಇನ್ನೂ ಜಾರಿ ಮಾಡಲಿದ್ದು, ಪ್ರತೀಯೊಬ್ಬ ಕಾರ್ಯಕರ್ತನೂ ಪಕ್ಷ ಕಟ್ಟುವಲ್ಲಿ ಮುತವರ್ಜಿವಹಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ನಾನು ಯಾಕೆ ಕಾರ್ಯಕ್ರಮಕ್ಕೆ ತಡವಾಗಿ ಬರುತ್ತೇನೆ ಗೊತ್ತುಂಟಾ?
ಶಾಸಕರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳಿಗೆ ಬರುತ್ತಿಲ್ಲ, ಒಂದು ಗಂಟೆ ಎರಡು ಗಂಟೆ ತಡವಾಗಿ ಬರುತ್ತಿದ್ದಾರೆ ಎಂದು ಕಾರ್ಯಕರ್ತರು ಶಾಸಕರಲ್ಲಿ ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕರು ನಾನು ಕಾರ್ಯಕ್ರಮಕ್ಕೆ ತಡವಾಗಿ ಬರುವುದು ಸತ್ಯ ಯಾಕೆಂದರೆ ನಾನು ಒಂದು ಕಾರ್ಯಕ್ರಮಕ್ಕೆ ಹೋದಾಗ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಒಂದಷ್ಟು ಮಂದಿ ನನ್ನ ಕ್ಷೇತ್ರದ ಮತದಾರರು ಅರ್ಜಿ ಹಿಡಿದುಕೊಂಡು ಅಥವಾ ತಮ್ಮ ಸಂಕಷ್ಟವನ್ನು ಹೇಳಲು ಕಾಯುತ್ತಿರುತ್ತಾರೆ. ಅವರನ್ನು ಬಿಟ್ಟು ಬರುವುದು ಹೇಗೆ? ನನಗೆ ಜನ ಮತ ಹಾಕಿದ್ದು ಅವರ ಸಂಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಲು, ನಾನು ಅವರ ನೋವಿಗೆ ಸ್ಪಂದಿಸದೇ ಇದ್ದರೆ ಅದು ನಾನು ಮಾಡುವ ದೊಡ್ಡ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು. ತನ್ನ ಕ್ಷೇತ್ರದ ಯಾವುದೇ ಒಬ್ಬ ವ್ಯಕ್ತಿ ನನ್ನನ್ನು ಹುಡುಕಿಕೊಂಡು ಸಂಕಷ್ಟ ಹೇಳಲು ಬಂದಲ್ಲಿ ನಾನು ಅವರಿಗೆ ಸಮಾಧಾನ ಹೇಳಿಯೇ ಬರುತ್ತೇನೆ ಅದು ನನ್ನ ಕರ್ತವ್ಯವಾಗಿದೆ. ತಡವಾಗಿ ಬಂದರೆ ಕ್ಷಮೆ ಇರಲಿ ನಾನು ಜನರಿಗೋಸ್ಕರ ಇರುವವನಾಗಿದ್ದೇನೆ, ಅವರಿಗೋಸ್ಕರ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಕಚೇರಿ ಆದ ಮೇಲೆ ಎಲ್ಲಾ ಸಮಸ್ಯೆ ಇತ್ಯರ್ಥ
ಶಾಸಕರ ನೂತನ ಕಚೇರಿ ಕೆಲಸ ಪ್ರಾರಂಭವಾಗಿದ್ದು ಕಚೇರಿ ಆದ ಮೇಲೆ ಎಲ್ಲವೂ ಪರಿಹಾರವಾಗಲಿದೆ. ಕಚೇರಿ ಆರಂಭವಾದ ಬಳಿಕ ವಿವಿಧ ಸೆಕ್ಷನ್‌ಗಳನ್ನು ತೆರೆಯುತ್ತೇನೆ. ಫಲಾನುಭವಿಗಳು ಕಚೇರಿಗೆ ತೆರಳಿ ಅಲ್ಲಿ ಅರ್ಜಿ ನೀಡಬಹುದಾಗಿದ್ದು, ನಿಮ್ಮ ಕೆಲವೊಂದು ಸಮಸ್ಯೆಗಳಿಗೆ ಕಚೇರಿಯಲ್ಲೇ ಪರಿಹಾರವೂ ದೊರೆಯಲಿದೆ ಎಂದು ಶಾಸಕರು ಹೇಳಿದರು. ಕಾಮಗಾರಿಗೆ ಸಂಬಂಧಪಟ್ಟ ಅರ್ಜಿಗಳನ್ನು ವಲಯ ಮತ್ತು ಬೂತ್ ಅಧ್ಯಕ್ಷರ ಮೂಲಕ ನನ್ನಲ್ಲಿ ನೀಡಬಹುದಾಗಿದೆ ಎಂದು ಹೇಳಿದರು.

ವಲಯ, ಬೂತ್ ಅಧ್ಯಕ್ಷರೇ ಮುಖ್ಯ
ಪ್ರತೀ ಗ್ರಾಮಮಟ್ಟದಲ್ಲಿ ವಲಯ ಮತ್ತು ಬೂತ್ ಅಧ್ಯಕ್ಷರಿದ್ದಾರೆ. ಕಟ್ಟಕಡೇಯ ಕಾರ್ಯಕರ್ತರ ಸಂಪರ್ಕ ಇರುವುದು ಅವರಿಗೆ ಯಾವುದೇ ಅರ್ಜಿಗಳನ್ನು ನೀಡುವಾಗ ವಲಯ ಮತ್ತು ಬೂತ್ ಅಧ್ಯಕ್ಷರನ್ನು ಸಂಪರ್ಕಿಸಿಯೇ ಬರಬೇಕು. ನೀವು ಅರ್ಜಿ ನೀಡಿ ಹೋದರೆ ಅದನ್ನು ಗ್ರಾಮದ ಅಧ್ಯಕ್ಷರುಗಳಿಗೆ ಮಾಹಿತಿ ನೀಡಲಾಗುತ್ತದೆ. ವಲಯ , ಬೂತ್ ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ಯಾವುದೇ ಕೆಲಸ ಕಾರ್ಯಗಳು ನಡೆಯವುದೇ ಇಲ್ಲ ಎಂದು ಶಾಸಕರು ಹೇಳಿದರು.

ಎರಡೇ ತಿಂಗಳಲ್ಲಿ 960 ಕೋಟಿ ತಂದಿದ್ದೇನೆ
ಶಾಸಕನಾಗಿ ಎರಡೇ ತಿಂಗಳಲ್ಲಿ 960 ಕೋಟಿ ತಂದಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಗೆ ಸರಕಾರದಿಂದ 960 ಕೋಟಿ ಮಂಜೂರು ಮಾಡಿಸಿದ್ದು, ಟೆಂಡರ್ ಕರೆದ ಬಳಿಕ ಕಾಮಗಾರಿ ಆರಂಭವಾಗಲಿದೆ. ಪುತ್ತೂರು ತಾಲೂಕು ಮತ್ತು ಸುಳ್ಯದ 30 ಗ್ರಾಮಗಳನ್ನು ಈ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಶಾಸಕರು ಹೇಳಿದರು.

14 ದಿನದ ಅಧಿವೇಶನದಲ್ಲಿ 11 ಪ್ರಶ್ನೆ ಹಾಕಿದ್ದೇನೆ
ಶಾಸಕನಾಗಿ ಚೊಚ್ಚಲ ಅಧಿವೇಶನದಲ್ಲಿ ಭಾಗವಹಿಸಿದ್ದೇನೆ. 14 ದಿನಗಳ ಅಧಿವೇಶನದಲ್ಲಿ 11 ಪ್ರಶ್ನೆಗಳನ್ನು ಕೇಳಿದ್ದೇನೆ. ಕರಾವಳಿಯ ಕೃಷಿಕರಿಗೆ, ಬಡವರಿಗೆ, ನಿರುದ್ಯೋಗಿಗಳಿಗೆ, ತುಳುಭಾಷೆಗೆ, ತುಳಿತಕ್ಕೊಳಗಾದವರ ಪರ ಮಾತನಾಡಿದ್ದೇನೆ. ಮುಂದೆಯೂ ಮತನಾಡುತ್ತೇನೆ. ತನ್ನ ಕ್ಷೇತ್ರದ ಜನರಿಗಾಗಿ ತಾನು ಸರಕಾರದ ಜೊತೆ ಗಲಾಟೆ ಮಾಡಿಯಾದರೂ ಅನುದಾನವನ್ನು ತರುತ್ತೇನೆ, ಕೊಟ್ಟ ಮಾತನ್ನು ಉಳಿಸಿಯೇ ಉಳಿಸುತ್ತೇನೆ.

ಮಲಗಿದ್ದಲ್ಲೇ ಇರುವವರಿಗೆ ಮಸಾಶನ ಕೊಡಿಸುವೆ
ಮರದಿಂದ ಬಿದ್ದು, ಪಾರ್ಶ್ವವಾಯು ಪೀಡಿತರಾಗಿ, ಅಪಘಾತದಿಂದ ಅಥವ ಇನ್ನಾವುದಾದರೂ ಕಾಯಿಲೆಯಿಂದ ಮನೆಯಲ್ಲೇ ಮಲಗಿದ ಸ್ಥಿತಿಯಲ್ಲಿ ಇರುವವರಿಗೆ ಸರಕಾರದಿಂದ ತಿಂಗಳಿಗೆ 5 ಸಾವಿರ ಮಾಸಾಶನ ನೀಡುವಂತೆ ಮನವಿ ಮಾಡಿದ್ದೇನೆ. ಅದನ್ನು ನೀಡುವವರೆಗೂ ನಾನು ಸುಮ್ಮನಿರುವುದಿಲ್ಲ ಹೋರಾಟ ಮಾಡಿಯಾದರೂ ತಂದೇ ತರುತ್ತೇನೆ. ಬಡವರ ಕಣ್ಣೀರೊರೆಸಲು ಶಾಸಕನಾಗಿದ್ದೇನೆ ಆ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಮಹಿಳಾ ತಂಡವನ್ನು ಕಟ್ಟಬೇಕಿದೆ
ಪಕ್ಷವನ್ನು ಕಟ್ಟಲು ಮಹಿಳೆಯರ ತಂಡವನ್ನು ಕಾರ್ಯಕರ್ತರು ಕಟ್ಟಬೇಕು. ಈಗಾಗಲೇ ಸರಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಪರವಾಗಿದ್ದು, ಇದನ್ನು ಬಳಸಿಕೊಂಡು ಪ್ರತೀ ಬೂತ್‌ನಲ್ಲಿ ಮಹಿಳೆಯರ ತಂಡವನ್ನು ಕಟ್ಟುವ ಮೂಲಕ ಪಕ್ಷದ ಪರ ಪ್ರಚಾರವನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ನಡೆಸಬೇಕಾಗಿದ್ದು, ಇದಕ್ಕಾಗಿ ಈಗಿಂದಲೇ ಎಲ್ಲರೂ ಸಜ್ಜಾಗಬೇಕು ಎಂದು ಶಾಸಕರು ಹೇಳಿದರು.

ಅಧ್ಯಕ್ಷರುಗಳಿಗೆ ಪವರ್ ಇದೆ
ಸಣ್ಣ ವಿಚಾರಗಳನ್ನು ತನ್ನ ಬಳಿ ಹೇಳಬೇಡಿ ಅದನ್ನು ಪಕ್ಷದ ವಿವಿಧ ವಲಯಗಳ ಅಧ್ಯಕ್ಷರುಗಳೇ ಪರಿಹರಿಸಬೇಕು. ನಿಮ್ಮಿಂದ ಪರಿಹಾರ ಮಾಡಲು ಸಾಧ್ಯವಾಗುವ ಜನರ ಸಮಸ್ಯೆಗಳನ್ನು ನೀವೇ ಪರಿಹಾರ ಮಾಡಬೇಕು. ಕಾಂಗ್ರೆಸ್ ಶಾಸಕ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ಅಧ್ಯಕ್ಷರುಗಳಿಗೆ ಪವರ್ ಇದೆ. ಅದನ್ನು ಪಕ್ಷಕ್ಕಾಗಿ, ಜನರಿಗಾಗಿ ಬಳಸಿಕೊಳ್ಳಿ. ನಿಮ್ಮಿಂದ ಸಾಧ್ಯವೇ ಇಲ್ಲವಾದರೆ ಮಾತ್ರ ನನ್ನ ಗಮನಕ್ಕೆ ತನ್ನಿ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.

ಮೂರು ತಿಂಗಳ ಬಳಿಕ ಹೊಸ ಪಡಿತರ ಕಾರ್ಡು
ಹೊಸ ಪಡಿತರ ಚೀಟಿ ಸಿಗುತ್ತಿಲ್ಲ ಎಂಬ ದೂರುಗಳಿವೆ ಎಂದು ಶಾಸಕರ ಗಮನಕ್ಕೆ ತಂದಾಗ ಹೊಸ ಪಡಿತರ ಚೀಟಿಯನ್ನು ಮೂರು ತಿಂಗಳ ಬಳಿಕ ನೀಡಲಾಗುತ್ತದೆ. ಸುಮಾರು 1 ಕೋಟಿ ಅರ್ಜಿಗಳು ಬಾಕಿ ಇದೆ. ಆರೋಗ್ಯ ಸಮಸ್ಯೆಗಳಿದ್ದವರು ಆಸ್ಪತ್ರೆಗೆ ಅಥವಾ ವಿಮೆ ಪಡೆದುಕೊಳ್ಳಲು ರೇಶನ್ ಕಾರ್ಡು ಬೇಕಾದಲ್ಲಿ ಅದನ್ನು ಸಂಬಂಧಿಸಿದವರ ಗಮನಕ್ಕೆ ತಂದರೆ ತುರ್ತು ಪರಿಗಣಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಜಿ.ಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಪಟ್ಟಣ ಪಂಚಾಯತ್ ಸದಸ್ಯ ವಿ ಕೆ ಎಂ ಅಶ್ರಫ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಕುದ್ದುಪದವು, ವಿಟ್ಲ ಬ್ಲಾಕ್ ಸಂಘಟನಾ ಕಾರ್ಯದರ್ಶಿ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪ್ರಹ್ಲಾದ್ ಉಪ್ಪಿನಂಗಡಿ, ಬ್ಲಾಕ್ ಉಪಾಧ್ಯಕ್ಷ ಜಯರಾಂ ಬಳ್ಳಾಲ್ ಬೀಡು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಶೀದ್ ವಿ ಎಂ, ಕಾರ್ಯದರ್ಶಿ ಸುನಿತಾ ಕೋಟ್ಯಾನ್, ಬ್ಲಾಕ್ ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ಯುನಿಕ್, ಎಸ್ ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಮಾಜಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಯೂತ್ ಬ್ಲಾಕ್ ಅಧ್ಯಕ್ಷ ಫಾರೂಕ್ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here