ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತ ಬಾಲಕಿಯೋರ್ವಳ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸಿದ ಗ್ಯಾಂಗ್ ರೇಪ್ ಘಟನೆಯನ್ನು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಗ್ಯಾಂಗ್ ರೇಪ್ ಮಾಡಿದ ಎಲ್ಲಾ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ. ಸಮಾಜದ ರಕ್ಷಣೆ ಮಾಡಬೇಕಾದ ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಯ ವ್ಯಕ್ತಿಗಳು ನೈತಿಕ ಗೂಂಡಾಗಿರಿ ಮಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ. ವಿಟ್ಲದಲ್ಲಿ ಆಗಿರುವ ಘಟನೆ ಸಮಾಜ ತಲೆತಗ್ಗಿಸುವ ಕೆಲಸವಾಗಿದೆ. ನೈತಿಕ ಪೊಲೀಸ್ ಗಿರಿಯ ಘಟನೆಯನ್ನು ಖಂಡಿಸುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಬಿಸಿರೋಡಿನಲ್ಲಿ ಪೊಲೀಸ್ ಪೇದೆಯೋರ್ವರು ಹೆಂಡತಿ ಜೊತೆ ನಡೆದುಕೊಂಡು ಹೋಗುವ ವೇಳೆ ನೈತಿಕ ಗೂಂಡಾಗಿರಿ ನಡೆದಿದೆ. ಇದರ ಜೊತೆಯಲ್ಲಿ ಮಾಧ್ಯಮದ ವ್ಯಕ್ತಿಯ ಮೇಲೂ ಮಂಗಳೂರಿನಲ್ಲಿ ನೈತಿಕ ಪೋಲೀಸ್ ಗಿರಿ ನಡೆದಿದ್ದು ಇಂತಹ ಘಟನೆಗಳು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಲು ಪ್ರೇರಣೆಯಾಗುತ್ತದೆ. ಹಾಗಾಗಿ ಇಂತಹ ಸಮಾಜಘಾತುಕ ಶಕ್ತಿಗಳ ಮೇಲೆ ಪೋಲೀಸರು ಬಲವಾದ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದರು.
ವಿಟ್ಲದ ಘಟನೆಯನ್ನು ಇಡೀ ಸಮಾಜ ಖಂಡಿಸುವ ಜೊತೆ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.
ಮಾದಕ ದ್ರವ್ಯ ವಸ್ತುಗಳ ಸೇವನೆ ಸಮಾಜದಲ್ಲಿ ಅಶಾಂತಿ ಕೆಡಸಿ, ಅಪರಾಧಗಳು ಹೆಚ್ಚಲು ಕಾರಣವಾಗಿದೆ, ಇದರ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಅಭಿಯಾನದ ರೀತಿಯಲ್ಲಿ ಕೆಲಸ ಮಾಡುವ ಯೋಚನೆ ಮಾಡಿದ್ದು, ಜಿಲ್ಲೆಯಲ್ಲಿ ಮಾದರಿಯಾಗುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಆಡಳಿತ ಯಂತ್ರಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾದ ಸುದೀಪ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಪ್ರಮುಖರಾದ ಮಹಮ್ಮದ್ ನವಾಜ್, ಸದಾಶಿವ ಬಂಗೇರ, ಸುರೇಶ್ ಜೋರಾ ಮೊದಲಾದವರು ಉಪಸ್ಥಿತರಿದ್ದರು.