ಶಾಸಕರ ತರಾಟೆಗೆ ಎಚ್ಚೆತ್ತ ಅಧಿಕಾರಿಗಳು-ಮೂರು ವರ್ಷದ ಬಳಿಕ ಉಪಯೋಗಕ್ಕೆ ಬಿದ್ದ ಟ್ಯಾಂಕ್

0

ನಿರಂತರ ನೀರಿನಿಂದ ಸಂತಸದಲ್ಲಿ ಕಜೆಕ್ಕಾರು ನಿವಾಸಿಗಳು

ಉಪ್ಪಿನಂಗಡಿ: ಕಳೆದ ಮೂರು ವರ್ಷಗಳಿಂದ ಟ್ಯಾಂಕ್ ನಿರ್ಮಾಣವಾಗಿದ್ದರೂ, ಅದಕ್ಕೆ ಬೇಕಾದ ಪೈಪ್‌ಲೈನ್‌ನ ವ್ಯವಸ್ಥೆಯಾಗದೇ ಸರಕಾರಿ ಅನುದಾನವನ್ನು ಉಪಯೋಗ ಶೂನ್ಯವಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಜಿ.ಪಂ. ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ನಿರ್ಮಾಣವಾಗಿದ್ದ ಟ್ಯಾಂಕ್‌ಗೆ ಪೈಪ್‌ಲೈನ್ ಮಾಡಿ ಅದರಲ್ಲಿ ನೀರು ಸಂಗ್ರಹಿಸಿ ಕಾಲನಿ ಜನರಿಗೆ ನೀರು ಸರಬರಾಜು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರು ಅಂಬೇಡ್ಕರ್ ಕಾಲನಿ ನಿವಾಸಿಗರ ಅನುಕೂಲತೆಗಾಗಿ ಕಾಲನಿಯಲ್ಲಿ ಮೂರು ವರ್ಷದ ಹಿಂದೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಿತ್ತು. ನಮಗಿನ್ನು ನೀರಿನ ಸಮಸ್ಯೆ ಉಂಟಾಗದು ಎಂಬ ನಿರೀಕ್ಷೆಯಲ್ಲಿದ್ದ ಕಾಲನಿ ನಿವಾಸಿಗರಿಗೆ ದಿನ ನಿತ್ಯ ಟ್ಯಾಂಕನ್ನು ಕಣ್ತುಂಬಿಕೊಳ್ಳುವ ಯೋಗ ದೊರಕಿತೇ ವಿನಹ ಪೈಪ್ ಲೈನ್ ಕಾಮಗಾರಿ ನಡೆಯದೇ ಟ್ಯಾಂಕ್ ನಲ್ಲಿ ತೊಟ್ಟು ನೀರು ಸಂಗ್ರಹಿಸಲಾಗಿರಲಿಲ್ಲ. ಇದಕ್ಕೆ ಸಂಬಂಧಿಸಿ ಸಂಬಂಧಿತ ಇಲಾಖೆ ಪಂಚಾಯತ್ ಆಡಳಿತವನ್ನು, ಪಂಚಾಯತ್ ಆಡಳಿತ ಸಂಬಂಧಿತ ಇಲಾಖೆಯನ್ನು ಹೊಣೆಗಾರರನ್ನಾಗಿಸುತ್ತಾ ವರ್ಷ ಕಳೆದು ಹೋಯಿತೇ ಹೊರತು ಈ ಟ್ಯಾಂಕ್ ಉಪಯೋಗಕ್ಕೆ ಬಂದಿರಲಿಲ್ಲ.


ಹತ್ತು ದಿನಗಳ ಹಿಂದೆ ಮಳೆ ಹಾನಿ ಘಟನೆಯನ್ನು ವೀಕ್ಷಿಸಲು ಕಾಲನಿಗೆ ಭೇಟಿ ನೀಡಿದ್ದ ಶಾಸಕ ಅಶೋಕ್ ಕುಮಾರ್ ರೈ ರವರಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪಯೋಗ ಶೂನ್ಯವಾಗಿರುವ ನೀರಿನ ಟ್ಯಾಂಕ್‌ನ ಬಗ್ಗೆ ವಿಷಯ ತಿಳಿಸಿದ್ದು, ಈ ಸಂದರ್ಭ ಆಕ್ರೋಶಗೊಂಡ ಶಾಸಕರು ತಕ್ಷಣವೇ ಎಂಜಿನಿಯರ್ ರವರನ್ನು ಸಂಪರ್ಕಿಸಿ, ಸರಕಾರಿ ಹಣವನ್ನು ಯಾರ ಹಿತಕ್ಕಾಗಿ ಖರ್ಚು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರಲ್ಲದೆ, ನಿರ್ಮಾಣವಾಗಿರುವ ಟ್ಯಾಂಕ್ ಅನ್ನು ತಕ್ಷಣವೇ ಬಳಕೆಗೆ ಯೋಗ್ಯವಾಗಿಸಿ ತನಗೆ ವರದಿ ಒಪ್ಪಿಸಬೇಕೆಂದು ತಾಕೀತು ಮಾಡಿದರು. ಶಾಸಕರ ಬಿರು ನುಡಿಗೆ ಅಧಿಕಾರಿಗಳಿಂದ ಸ್ಪಂದನೆ ವ್ಯಕ್ತವಾಗಿದ್ದು, ಒಡನೆಯೇ ಟ್ಯಾಂಕಿಗೆ ಪೈಪುಗಳನ್ನು ಜೋಡಿಸಿ ನೀರು ಸಂಗ್ರಹಿಸಿ ಕಾಲನಿ ಜನತೆಗೆ ನಿರಂತರ ನೀರು ಒದಗಿಸಲಾಯಿತು.


ಕಳೆದ ಮೂರು ವರ್ಷಗಳಿಂದ ಕಂಡ ಕಂಡವರನ್ನು ಅಂಗಲಾಚಿದರೂ ನಿರ್ಲಕ್ಷಿಸಲ್ಪಡುತ್ತಿದ್ದ ಈ ಟ್ಯಾಂಕ್ ಕ್ಷೇತ್ರದ ನೂತನ ಶಾಸಕರ ಸ್ಪಂದನದಿಂದ ಉಪಯೋಗಕ್ಕೆ ದೊರಕುವಂತಾಗಿದೆ. ಮತ್ತು ಪ್ರಕರಣವನ್ನು ಶಾಸಕರ ಗಮನಕ್ಕೆ ತರುವಲ್ಲಿ ಕಾರಣೀಕರ್ತರಾದ ಮಾಧ್ಯಮ ಪ್ರತಿನಿಧಿಗಳಿಗೆ ಕಾಲನಿ ನಿವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here