ಡಾ| ಶ್ರೀಧರ್ ಹೆಚ್.ಜಿ. ಸೇವೆಯನ್ನು ಸಂಸ್ಥೆ ಸದಾ ಕಾಲ ನೆನೆಯುತ್ತದೆ: ಮುರಳಿಕೃಷ್ಣ ಕೆ.ಎನ್
ಪುತ್ತೂರು: ಸಿಹಿ-ಕಹಿ ಜೀವನದ ಅಂಗ. ಇದು ಒಂದು ನಾಣ್ಯದ ಎರಡು ಮುಖ ಇದ್ದಂತೆ. ಇವೆರಡನ್ನು ಜೀವನದಲ್ಲಿ ಸಮನಾಗಿ ಸ್ವೀಕರಿಸುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಇರಬೇಕು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಡಾ| ಶ್ರೀಧರ್ ಹೆಚ್ ಜಿ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಅಧ್ಯಾಪಕರ ಸಂಘ, ಅಧ್ಯಾಪಕೇತರ ನೌಕರರ ಸಂಘ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಡಾ| ಶ್ರೀಧರ್ ಹೆಚ್ ಜಿ ಬೀಳ್ಕೊಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಡಾ| ಶ್ರೀಧರ್ ಹೆಚ್ ಜಿ ಅವರ ಸೇವೆಯನ್ನು ಸಂಸ್ಥೆ ಸದಾ ಕಾಲಕ್ಕೂ ನೆನಪಿಸುತ್ತದೆ. ಕಾಲೇಜಿಗೆ ಕಷ್ಟ ಬಂದಾಗ ಹೆಚ್ ಜಿ ಅವರ ಅನುಭವ ನೆರವಿಗೆ ಬಂದಿದೆ. ಉಪನ್ಯಾಸಕರಾಗಿ ಮಾತ್ರವಲ್ಲದೆ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿದ್ದಾಗ, ಕೆಲವೊಂದು ವಿದ್ಯಾರ್ಥಿನಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗ ಅವರಿಗೆ ಕೌನ್ಸಿಲಿಂಗ್ ಮಾಡಿ ನನ್ನದೆ ಮಕ್ಕಳು ಎಂದು ಸಲಹಿದವರು ಡಾ| ಶ್ರೀಧರ್ ಹೆಚ್ ಜಿ ಎಂದು ಮುರಳಿಕೃಷ್ಣ ಶ್ಲಾಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ|ಶ್ರೀಪತಿ ಕಲ್ಲೂರಾಯ ಮಾತನಾಡಿ, ಡಾ| ಶ್ರೀಧರ್‌ಹೆಚ್ ಜಿ ವಿದ್ಯಾರ್ಥಿಗಳಿಗೆ ಕಲಿಸುವುದರ ಜೊತೆಗೆ ಕಲಿಯುತ್ತಾರೆ. ಇವರು ಬರೆಯುವುದರ ಜೊತೆಗೆ ಓದುತ್ತಾರೆ. ಹಿರಿಯರನ್ನು ಗೌರವಿಸುತ್ತಾರೆ. ಯಾವುದೇ ಒಂದು ಶಿಕ್ಷಣ ಸಂಸ್ಥೆಗೆ ಪರೀಕ್ಷಾಂಗ ವಿಭಾಗ ಹೃದಯ ಇದ್ದಂತೆ. ಡಾ|ಶ್ರೀಧರ್‌ಹೆಚ್ ಜಿ ಇದಕ್ಕೆ ಯೋಗ್ಯ ವ್ಯಕ್ತಿ. ಯಾವ ಗೊಂದಲಗಳು ಇಲ್ಲದೆ ವಿದ್ಯಾರ್ಥಿ ಮಿತ್ರನಾಗಿ, ಸಹ ಶಿಕ್ಷಕರಿಗೆ ಮಿತ್ರನಾಗಿಕೊಟ್ಟ ಕೆಲಸವನ್ನು ಮಾಡಿ ಮುಗಿಸಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣುಗಣಪತಿ ಭಟ್ ಮಾತನಾಡಿ, ಡಾ.ಶ್ರೀಧರ್ ಹೆಚ್.ಜಿ. ಅವರಲ್ಲಿ ಸಂಶೋಧನ ಪ್ರವೃತ್ತಿ ಇರುವುದರಿಂದ ಅವರಲ್ಲಿ ಪ್ರಶ್ನಿಸುವ ಶಕ್ತಿ ಇದೆ. ೩೪ ವರ್ಷದಲ್ಲಿ ಡಾ.ಶ್ರೀಧರ್ ಹೆಚ್ ಜಿ ತಾನು ಬೆಳೆದು ತನ್ನವರನ್ನು ಬೆಳೆಸಿದ್ದಾರೆ. ಅವರು ಈ ಕಾಲೇಜಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂದರು.
ಡಾ| ಶ್ರೀಧರ್ ಹೆಚ್.ಜಿ. ಮಾತನಾಡಿ ವಿವೇಕಾನಂದ ಕಾಲೇಜು ಕ್ಯಾಂಪಸ್ ನನ್ನ ಮೊದಲ ಮನೆ ಇದ್ದಂತೆ. ಇಲ್ಲಿಯ ಮಣ್ಣು ನೀರು, ಗಾಳಿ ನನ್ನ ಜೀವನದ ಅವಿಭಾಜ್ಯ ಅಂಗ. ನನ್ನ ಸಂಪತ್ತೆ ವಿದ್ಯಾರ್ಥಿಗಳು. ಈ ಸಂಸ್ಥೆಗೆ ಬಂದ ಎಲ್ಲರನ್ನು ಪ್ರೀತಿಸಿದ್ದೇನೆ, ಗೌರವಿಸಿದ್ದೇನೆ. ನಮ್ಮ ಸಂಸ್ಥೆಗೆ ಬಂದ ಯಾರನ್ನು ಕೂಡ ಇವನ್ಯಾರವ ಎಂದು ಪರಿಗಣಿಸದೆ ಇವ ನಮ್ಮವ ಎಂದು ನೋಡಿದ ಸಾರ್ಥಕ ಮನೋಭಾವ ನನ್ನಲ್ಲಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರ ಸಂಘ ಮತ್ತು ಅಧ್ಯಾಪಕೇತರ ಸಂಘದ ವತಿಯಿಂದ ಡಾ| ಶ್ರೀಧರ್ ಹೆಚ್ ಜಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ನಿವೃತ್ತ ಪ್ರಾಂಶುಪಾಲರುಗಳು ಡಾ| ಶ್ರೀಧರ್‌ಹೆಚ್ ಜಿ ಅವರ ಸೇವಾ ನಿವೃತ್ತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ‘ವಿಕಾಸ’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಿಶೇಷ ಅಧಿಕಾರಿ ಡಾ|ಶ್ರೀಧರ್ ನಾಯಕ್, ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ ಎಸ್, ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು. ಅಧ್ಯಾಪಕರ ಸಂಘದ ಅಧ್ಯಕ್ಷ ಸೌಮಿತ್ರ ಕೆ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ವಂದಿಸಿದರು. ಉಪನ್ಯಾಸಕಿ ಸೌಜನ್ಯ ಪ್ರಾರ್ಥಿಸಿ, ಉಪನ್ಯಾಸಕ ಮನಮೋಹನ್. ಎಂ ಕಾರ್ಯಕ್ರಮ ನಿರೂಪಿಸಿದರು.