ಪತ್ರಕರ್ತರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯಾಗಾರದಲ್ಲಿ ಡಿಎಚ್ಒ ಡಾ.ಕಿಶೋರ್ ಕುಮಾರ್
ಮಂಗಳೂರು:ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸುವ ಹಲವಾರು ಯೋಜನೆಗಳು, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ ಸಾಕಷ್ಟು ಐಇಸಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ,ಆದರೂ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳ ಪಾತ್ರ ಅತ್ಯಂತ ಪರಿಣಾಮಕಾರಿಯಾದದ್ದು, ಪ್ರತಿ ವರ್ಷ ಆರೋಗ್ಯ ಇಲಾಖೆಗೆ 2-3 ಕಾರ್ಯಕ್ರಮಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ, ಅವುಗಳ ವಿವರ ಹಾಗೂ ಮಾಹಿತಿ ಮಾಧ್ಯಮದಿಂದ ವ್ಯಾಪಕವಾಗಿ ಪ್ರಸಾರವಾಗುವುದರಿಂದ ಸಾರ್ವಜನಿಕರಿಗೆ ನೂತನ ಕಾರ್ಯಕ್ರಮಗಳ ಪರಿಚಯವಾಗಿ, ಪ್ರಯೋಜನ ಪಡೆಯಲು ಸಹಕಾರಿಯಾಗಿದೆ ಎಂದವರು ಹೇಳಿದರು.
ಇದೇ ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿರುವ ತೀವ್ರತರವಾದ ಇಂದ್ರಧನುಷ್ ೦.5 ಕಾರ್ಯಕ್ರಮ ಕೂಡ ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರವಾದ ಕಾರಣ ಅಗತ್ಯ ಲಸಿಕೆಯಿಂದ ವಂಚಿತರಾದವರು ಲಸಿಕೆ ಪಡೆಯಲು ಅನುಕೂಲವಾಗಲಿದೆ ಎಂದ ಅವರು ಕೋವಿಡ್ ಎದುರಾದ ಸಂದರ್ಭದಲ್ಲಿ ಜಿಲ್ಲೆಯ ಮಾಧ್ಯಮಗಳು ಆರೋಗ್ಯ ಇಲಾಖೆಗೆ ನೀಡಿದ್ದ ನೆರವು ಸ್ಮರಣೀಯವಾಗಿದೆ ಎಂದರು.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಆರೋಗ್ಯ ಕಾರ್ಯಕ್ರಮಗಳು ಅನುಷ್ಟಾನಗೊಳ್ಳುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಳಮಟ್ಟದಲ್ಲಿ ಕೆಲಸ ಮಾಡಬೇಕಿರುತ್ತದೆ. ಈ ದಿಸೆಯಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಅದರೊಂದಿಗೆ ಹೊಸ ಯೋಜನೆಗಳ ಅನುಷ್ಟಾನದಲ್ಲಿ ಸಾಕಷ್ಟು ಸವಾಲುಗಳಿರುತ್ತವೆ ಎಂದು ಡಾ.ಕಿಶೋರ್ ಕುಮಾರ್ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಕಡಿಮೆಯಾಗುತ್ತಿದ್ದು, ಆರೋಗ್ಯ ಇಲಾಖೆ ಅಭಿಯಾನಗಳು ಸಾರ್ವಜನಿಕರಿಗೆ ಸಾಕಷ್ಟು ನೆರವು ನೀಡಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಜಿಲ್ಲೆಯ ಪತ್ರಕರ್ತರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸುದರ್ಶನ್ ಅವರು ಕುಷ್ಠರೋಗ, ಅಂದತ್ವ, ಮಾನಸಿಕ ಆರೋಗ್ಯ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮದ ಬಗ್ಗೆ, ಕೀಟ ಜನ್ಯ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ಕ್ಷಯ ರೋಗದ ಬಗ್ಗೆ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್ ಅವರು ಟಿಬಿ, ಎಚ್ಐವಿ ಹಾಗೂ ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, ಚುಚ್ಚುಮದ್ದು ಮತ್ತು ತಾಯಿ ಹಾಗೂ ಶಿಶು ಮರಣ, ಆಯುಷ್ಮಾನ್ ಕ್ಲಿನಿಕ್, ಹದಿಹರೆಯದ ಆರೋಗ್ಯ ಮತ್ತು ಇಲಾಖೆಯ ಪ್ರಮುಖ ಯೋಜನೆ ಬಗ್ಗೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪ ಪ್ರಭು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಪರಿಹಾರ ಮತ್ತು ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ ಮತ್ತು ಶ್ರವಣದೋಷ ನಿಯಂತ್ರಣ ಕಾಯ್ದೆ ಬಗ್ಗೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಬಗ್ಗೆ ಡಾ.ಯಶಸ್ವಿನಿ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಬಗ್ಗೆ ಪುಂಡಲಿಕಾ ಲಕೋಟಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ.ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.
ಇದೀಗ ಜಿಲ್ಲೆಯಲ್ಲಿ ವೈದ್ಯರ ಕೊರತೆ ಬಹುತೇಕ ಕಡಿಮೆಯಾಗುತ್ತಿದೆ. ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಹಾಗೂ ಕಳೆದ ಎರಡು ವರ್ಷಗಳಿಂದ ವೈದ್ಯರ ನೇಮಕಾತಿ ಆಗುತ್ತಿದೆ, ಆದರೆ 92 ರಿಂದ 95 ಪ್ರತಿಶತ ತಜ್ಞ ವೈದ್ಯರ ಕೊರತೆ ಇದೆ. ಇವುಗಳ ಮಧ್ಯೆ ಆರೋಗ್ಯ ಇಲಾಖೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಕಿಶೋರ್ ಕುಮಾರ್ ಹೇಳಿದರು.