ಪುತ್ತಿಲ ಮತ್ತು ತಂಡ ಬಿ.ಎಲ್.ಸಂತೋಷ್ ಭೇಟಿ ವೇಳೆ ಏನಾಯ್ತು? ನಡೆದ ಮಾತುಕತೆ ಏನು?

0

ಪುತ್ತೂರು:2023ರ ವಿಧಾನಸಭಾ ಚುನಾವಣೆ ಘೋಷಣೆಯಾದಂದಿನಿಂದಲೂ ಪುತ್ತೂರು ಕ್ಷೇತ್ರದ ರಾಜಕೀಯ ಬೆಳವಣಿಗೆಗಳು ಬಹಳಷ್ಟು ಕುತೂಹಲ ಕೆರಳಿಸುತ್ತಿವೆ. ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯ ಪರಿಣಾಮ ಬಿಜೆಪಿ ಒಡೆದಿದೆ. ಬಿಜೆಪಿಗೆ ಸಡ್ಡುಹೊಡೆದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪುತ್ತಿಲ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಅದಾದ ಬಳಿಕ ಮತ್ತೆ ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳಬೇಕು, ಸೂಕ್ತ ಸ್ಥಾನಮಾನ ನೀಡಬೇಕೆನ್ನುವ ಕೂಗು ಕೇಳಿಬರುತ್ತಿತ್ತು. ಇನ್ನೊಂದೆಡೆಯಿಂದ ಲೋಕಸಭಾ ಚುನಾವಣೆಯಲ್ಲೂ ಅರುಣ್ ಪುತ್ತಿಲ ಸ್ಪರ್ಧಿಸಬೇಕೆನ್ನುವ ನೆಲೆಯಲ್ಲಿ ಅಭಿಯಾನ ನಡೆಯುತ್ತಿದೆ. ಈ ನಡುವೆ ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲ ಮತ್ತು ಬಳಗವು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ ಫೊಟೋ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಮತ್ತೆ ಅರುಣ್ ಪುತ್ತಿಲ ಬಿಜೆಪಿಯೊಳಗೆ ಸೇರ್ಪಡೆಗೊಳ್ತಾರೆ ಎನ್ನುವ ಊಹಾಪೋಹಗಳು ಹರಿದಾಡಿದ್ದವು. ಇನ್ನೇನು ಎಲ್ಲವೂ ಸರಿಯಾಯ್ತು ಎನ್ನುವ ಮಾತುಗಳು ಕೇಳಿಬಂತು. ಆದರೆ ಇತ್ತೀಚೆಗೆ ನಡೆದ ಪುತ್ತೂರು ತಾಲೂಕಿನ ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಮಗಳ ತಲಾ ಒಂದು ವಾರ್ಡ್‌ಗಳ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜೊತೆಗೆ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳೂ ಕಣಕ್ಕೆ ಇಳಿದಿದ್ದರು.


ಈ ಪೈಕಿ ಆರ್ಯಾಪು ವಾರ್ಡ್‌ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಯಭೇರಿ ಬಾರಿಸಿದ್ದರೆ, ನಿಡ್ಪಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದು, ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಎರಡೂ ವಾರ್ಡ್‌ಗಳಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಪುತ್ತಿಲ ಬಣ ಮತ್ತು ಬಿಜೆಪಿ ನಡುವಿನ ಅಂತರ ಇನ್ನೂ ಸರಿಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ. ಹಾಗಿದ್ದಾಗ ಪುತ್ತಿಲರ ಟೀಮ್ ಮತ್ತು ಬಿ.ಎಲ್. ಸಂತೋಷ್ ಅವರ ಭೇಟಿಯ ಸಂದರ್ಭ ಏನೇನಾಯ್ತು? ಸಂತೋಷ್ ಅವರ ಸ್ಪಂದನೆ ಹೇಗಿತ್ತು? ಪುತ್ತಿಲ ಬೆಂಬಲಿಗರು ಇಟ್ಟ ಬೇಡಿಕೆ ಏನು? ಅಲ್ಲಿಂದ ಸಿಕ್ಕ ಉತ್ತರ ಏನು ಎನ್ನುವ ಬಗ್ಗೆ ಪುತ್ತಿಲ ಆಪ್ತ ಬೆಂಬಲಿಗರ ಬಳಗದಲ್ಲಿ ಗುರುತಿಸಿಕೊಂಡಿರುವ, ನರಿಮೊಗ್ರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು `ಸುದ್ದಿ’ ಜೊತೆಗೆ ಮಾತನಾಡಿದ್ದಾರೆ. ಅದರ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.
ಬಿ.ಎಲ್. ಸಂತೋಷ್ ಅವರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ ಆಚಾರ್ಯ ಹಿಂದಾರು ಅವರು, ನಾವು ಯಾವುದೇ ಕೆಲಸ ಮಾಡುವುದಿದ್ದರೂ ದೇಶಾಭಿಮಾನದ ಬಗ್ಗೆ ಚಿಂತನೆ ಮಾಡಿ ಹೋಗುವವರು. ಪುತ್ತಿಲ ಓಟಿಗೆ ನಿಂತು ಅಷ್ಟು ಮತ ಪಡೆಯಬೇಕಿದ್ದರೆ ಅದು ಒಂದೆರಡು ದಿನದ ಕೆಲಸ ಅಲ್ಲ. ಸುಮಾರು ವರ್ಷಗಳಿಂದ ಸಂಘಟನೆಯಲ್ಲಿ ಇರುವ ಗೊಂದಲಗಳು ಇದಕ್ಕೆ ಕಾರಣ ಎಂದು ಹಿರಿಯರು ಹೇಳಿದ್ದರು. ಯಾರಿಗೂ ನೋವಾಗದಂತೆ ಸಂಘಟನೆಯನ್ನು ಬೆಳೆಸಿಕೊಂಡು ಹೋಗಬೇಕಾದುದು ಮುಖ್ಯ. ಬಿಜೆಪಿಯಲ್ಲಿ ಎಲ್ಲಾ ನಾಯಕರು ಸರಿ ಎಂದು ಹೇಳಲಾಗುವುದಿಲ್ಲ. ಅನೇಕ ವರ್ಷಗಳ ನೋವಿನಿಂದಾಗಿ ಇಂತಹ ಘಟನೆಗಳು ಮರುಕಳಿಸಿತು. ಕಪಿಮುಷ್ಠಿಯಲ್ಲಿ ಇದ್ದಹಾಗೆ ಸಂಘಟನೆ ಇರಬಾರದು,100ಕ್ಕೆ 75 ಶೇ. ಆದರೂ ಓಪನ್ ಆಗಿದ್ದುಕೊಂಡು ಕಾರ್ಯಕರ್ತರಿಗೆ ನೋವಾಗದಂತೆ ಬೆಳೆಯಬೇಕು ಎಂದು ಅರುಣ್ ಪುತ್ತಿಲ ಸ್ಪರ್ಧಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ನಾನು ಜನಸಂಘದ ಕಾಲದಿಂದಲೂ ಪಕ್ಷದಲ್ಲಿ ತೊಡಗಿಸಿಕೊಂಡವನು. ದಾರಿಯಲ್ಲಿ ದೀಪದ ಚಿತ್ರ ಬಿಡಿಸಿದ ನೆನಪು ನನಗೆ ಇದೆ. ಈ ನಿಟ್ಟಿನಲ್ಲಿ ಎರಡು ಬಾರಿ ಸಂತೋಷ್ ಅವರ ಜೊತೆ ಮಾತನಾಡಿದೆವು. ಮೊದಲಿಗೆ ಅರುಣ್ ಪುತ್ತಿಲ ಅವರು ಹೋಗಿರಲಿಲ್ಲ. ನಾವು ನಾಲ್ಕೈದು ಜನ ಹೋಗಿದ್ದೆವು. ಆದರೆ ಅವರು ಬೇರೆ ಬೇರೆ ಕಾರ್ಯಕ್ರಮದಲ್ಲಿ ಇದ್ದ ಕಾರಣ ದೆಹಲಿಗೆ ಹೋಗಿ ಮಾತನಾಡಿಕೊಂಡು ಬಂದಿದ್ದೇವೆ. ಅವರು ಎಲ್ಲವನ್ನೂ ಕೇಳಿದ್ದಾರೆ. ಅವರಿಗೆ ಸಿಗುವಂತಹ, ಅವರು ವಿಶ್ವಾಸಕ್ಕೆ ಇಟ್ಟಂತಹ ಜನರು ನೀಡಿರುವ ಮಾಹಿತಿಗಳ ತಪ್ಪಿನಿಂದಾಗಿ ಇಂತಹುದು ನಡೆದಿರಬೇಕು ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೆಲವೊಂದು ಗೊತ್ತಿರಲಿಲ್ಲ. ಈಗ ಪೂರ್ತಿ ಮನವರಿಕೆ ಆಗಿದೆ. ಆದಷ್ಟು ಬೇಗ ಸರಿಪಡಿಸುತ್ತಾರೆನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಇದು ಇಂದು ನಾಳೆಗೆ ಆಗುವ ವಿಚಾರ ಅಲ್ಲ. ಯಾಕೆಂದರೆ ದೇಶದ ಮಟ್ಟಿನಲ್ಲಿ ನೋಡಿದ್ರೆ ಪುತ್ತೂರು ಒಂದು ಬರೀ ಪಾಯಿಂಟ್. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಿಗೆ ಬೇರೆ ಬೇರೆ ಜವಾಬ್ದಾರಿ ಇರುವಾಗ ಈ ಕೆಲಸವೂ ಬೇಗ ಆಗುತ್ತದೆ. ಅವರಿಗೆ ಎಲ್ಲವೂ ಮನವರಿಕೆ ಆಗಿದೆ. ಪುತ್ತೂರಿನ ಮಟ್ಟಿನಲ್ಲಿ ನೋಡುವುದಿದ್ದರೆ ಹೀಗೆ ಇದ್ದರೇನೇ ಅವರಿಗೆ ಲಾಭ ಎಂದಿದೆ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಎನ್ನುವ ಗಾದೆಯಂತೆ ಆಗಿದೆ. ಅಂತಹ ಕೆಲವು ನಾಯಕರು ಇರುವ ಕಾರಣ ಇಂತಹ ಗೊಂದಲ ಆಗಿದೆ. ಇನ್ನು ಮುಂದಕ್ಕೆ ಅದು ಆಗಲಿಕ್ಕಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾಕೆ ಸ್ಪರ್ಧೆ ಮಾಡಿದ್ದು ಎಂದರೆ 15 ವರ್ಷಗಳಿಂದ ಸ್ಥಳೀಯ ನಾಯಕರು ಅರುಣ್ ಪುತ್ತಿಲ ಅವರಿಗೆ ಚುನಾವಣೆ ಬಂದಾಗ, ಚೀಪಲು ಸಿಹಿ ನೀಡಿದ ಹಾಗೆ ನಿಮಗೆ ಅದು ಕೊಡ್ತೇವೆ, ಇದು ಕೊಡ್ತೇವೆ ಎಂದು ಹೇಳಿ, ಫಲಿತಾಂಶ ಬಂದ ಬಳಿಕ ಸುಮ್ಮನೇ ಕುಳಿತಿದ್ದಾರೆ. ಇದು ಮಾತುಕತೆಯಲ್ಲಿ ಇರುವಾಗ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಎಲುಬಿಲ್ಲದ ನಾಲಗೆಗಳು ಇದು ಏನೂ ಲೆಕ್ಕಕ್ಕಿಲ್ಲ ಎಂದು ಹೇಳುವಂತಹ ದಿನಗಳು ಬರುವುದು ಬೇಡ, ಲೆಕ್ಕದಲ್ಲಿ ಇದ್ದಾರೆ ಎನ್ನುವುದನ್ನು ತೋರಿಸುವ ಸಲುವಾಗಿ ಹೊರತು ಬಿಜೆಪಿಗೆ ಸಡ್ಡುಹೊಡೆವ ಕೆಲಸ ಇದಲ್ಲ. ಇದು ಒಂದು ದಿನದ ಆಟವಲ್ಲ, ಎಲೆಕ್ಷನ್‌ನಲ್ಲಿ ನಿಂತ ಕಾರಣ ಕಾರ್ಯಕರ್ತರಿಗೆ ಇನ್ನೂ ನೋವಿದೆ ಎಂಬ ಮುದ್ರೆ ಒತ್ತುವ ದೃಷ್ಟಿಯಿಂದ ಹೊರತು ಬೇರೇನಲ್ಲ. ಇಲ್ಲಿನ ಕೆಲ ನಾಯಕರಿಗೆ ಅವರವರು ಮಾಡಿದ್ದು ಸರಿ ಎಂದು ಅನಿಸುತ್ತದಾದರೂ, ಎಲ್ಲಿ ತಪ್ಪಿದ್ದಾರೆಂದು ಯೋಚನೆ ಮಾಡಬೇಕು ಎನ್ನುವುದು ನಮ್ಮ ಆಶಯ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲರ ಸ್ಪರ್ಧೆ ಈವರೆಗಿನ ಚಿಂತನೆಯಲ್ಲಿ ಇಲ್ಲ. ಬಿಜೆಪಿಯವರು ಅರುಣ್ ಕುಮಾರ್ ಪುತ್ತಿಲರಿಗೆ ಟಿಕೆಟ್ ಕೊಡ್ತಾರೆ ಎಂದಾದ್ರೆ ಮತ್ತೆ ಯೋಚನೆ ಮಾಡಬೇಕು. ವಿಧಾನಸಭೆಯಲ್ಲಿ ಆದಂತಹ ಸಂದರ್ಭಗಳು ಆಗುವ ಲಕ್ಷಣಗಳಿಲ್ಲ. ಲೋಕಸಭಾ ಚುನಾವಣೆಗೆ ನಿಲ್ಲಬಹುದು ಎನ್ನುವುದು ಬರೀ ಊಹನೆಗಳು. ಇದರ ಆಧಾರದಲ್ಲಿ ಯಾವುದೂ ನಡೆಯುವುದಿಲ್ಲ. ಕಾರ್ಯಕರ್ತರ ಮನೋಭಾವನೆ ಇರುವುದು ಜೀವನಪರ್ಯಂತ ಗೊಂದಲ ಇರಬೇಕೆಂದಲ್ಲ. ಕೆಸರು ನೀರಿನಲ್ಲೇ ಹೊರಳಾಡ್ತಾ ಇರಬೇಕೆಂದು ಯಾರಿಗೂ ಯೋಚನೆ ಇಲ್ಲ ಎಂದು ಭಾಸ್ಕರ ಆಚಾರ್ ಹಿಂದಾರು ಹೇಳಿದರು.

ಅರುಣ್ ಕುಮಾರ್ ಪುತ್ತಿಲರಿಗೆ ಸಂಘಟನೆಯಲ್ಲಿ ಜವಾಬ್ದಾರಿ ಸಿಗಬೇಕು. ಕಾರ್ಯಕರ್ತರ ನೋವನ್ನು ಅರುಣ್ ಕುಮಾರ್ ಪುತ್ತಿಲ ನಿಭಾಯಿಸುತ್ತಾರೆ ಎಂದು ವಿಶ್ವಾಸವಿಟ್ಟು ಬಂದ ಎಷ್ಟೋ ಜನ ಕಾರ್ಯಕರ್ತರಿದ್ದಾರೆ. ಅವರಿಗೆಲ್ಲ ಸಮಾಧಾನ ಆಗಿ ಉತ್ತಮ ಕೆಲಸ ಮಾಡಬೇಕೆಂದಾದರೆ ಸರಿಯಾದ ಹುದ್ದೆ ಬೇಕು. ಅದನ್ನು ನಾಯಕರು ಕೊಟ್ಟೇ ಕೊಡ್ತಾರೆ. ಈಗಾಗಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಹುದ್ದೆಯ ಅವಧಿ ಕಳೆದಿದೆ. ಇನ್ನೊಂದೆರಡು ತಿಂಗಳಲ್ಲಿ ಎಲ್ಲಾ ಆಗುತ್ತದೆ. ಹೀಗಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here