ತಿಂಗಳಾಡಿ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿಯ ಮಹಾಸಭೆ – ನಿವ್ವಳ ಲಾಭ ರೂ.942441, ಶೇ.8 ಡಿವಿಡೆಂಟ್ ಘೋಷಣೆ

0

ಪುತ್ತೂರು: ತಿಂಗಳಾಡಿಯ ಶ್ರೀ ಲಕ್ಷ್ಮೀ ಸಂಕೀರ್ಣದಲ್ಲಿ ಕೇಂದ್ರ ಕಛೇರಿ ಹೊಂದಿರುವ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿಯ ಮಹಾಸಭೆಯು ಜು.31ರಂದು ಸಂಘದ ಅಧ್ಯಕ್ಷ ಹರೀಶ ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಛೇರಿಯ ಆವರಣದಲ್ಲಿ ನಡೆಯಿತು. ಜಯಲಕ್ಷ್ಮೀ ಟಿ.ಕೆರವರ ಗಣಪತಿ ಸ್ತುತಿಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಸಂಘದ ಅಧ್ಯಕ್ಷ ಹರೀಶ ಪುತ್ತೂರಾಯರವರು ಸ್ವಾಗತಿಸಿ, ಸಂಸ್ಥೆಯ ಬೆಳವಣಿಗೆಯ ಬಗ್ಗೆ ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಭಟ್‌ರವರು ಮಹಾಸಭೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ವರದಿ ಸಾಲಿನಲ್ಲಿ ಸಹಕಾರಿಯಲ್ಲಿ ನಡೆದ ಚಟುವಟಿಕೆಗಳು ಮತ್ತು ವ್ಯವಹಾರಗಳ ಬಗ್ಗೆ ಸದಸ್ಯರ ಜೊತೆ ಮಾತುಕತೆಗಳನ್ನು ನಡೆಸಲಾಯಿತು. ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರಾದ ಹರೀಶ ಪುತ್ತೂರಾಯರು ಸೂಕ್ತ ಮತ್ತು ಸಮಂಜಸವಾದ ಉತ್ತರಗಳನ್ನು ನೀಡಿದರು. ಸದಸ್ಯರ ಸಲಹೆ ಸೂಚನೆಗಳನ್ನು ಆಲಿಸಲಾಯಿತು. ಸಹಕಾರಿಯ ಬೆಳವಣಿಗೆಗೆ ಸೂಕ್ತ ಎಂದು ಎಂದು ಕಂಡುಬಂದ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ನೀಡಿದರು.2022-23ನೇ ಸಾಲಿನ ವಾರ್ಷಿಕ ವರದಿಯನ್ನು ಲೆಕ್ಕ ಪರಿಶೋಧನಾ ವರದಿಯ ಬಗ್ಗೆ ಚರ್ಚಿಸಲಾಯಿತು.


ಸಹಕಾರಿಯು ರೂ. 3,92,73,754 ದುಡಿಯುವ ಪಾಲು ಬಂಡವಾಳ ಹೊಂದಿದ್ದು ವರದಿ ಸಾಲಿನಲ್ಲಿ ರೂ.942441 ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.8 ಡಿವಿಡೆಂಟ್ ನೀಡುವುದಾಗಿ ಘೋಷಿಸಲಾಯಿತು. ಆರ್ಥಿಕ ವ್ಯವಹಾರಗಳಲ್ಲಿ ಪ್ರಥಮ ಪ್ರಾಶಸ್ತ್ಯವಾಗಿ ಸಹಕಾರಿಯನ್ನು ತೆಗೆದುಕೊಳ್ಳುವಂತೆ ಸದಸ್ಯರನ್ನು ಕೋರಿದರು ಅಲ್ಲದೆ ತ್ವರಿತ ಸೇವೆಗೆ ಹೆಚ್ಚು ಒತ್ತು ನೀಡುವುದಾಗಿ ಅಧ್ಯಕ್ಷ ಹರೀಶ ಪುತ್ತೂರಾಯ ತಿಳಿಸಿದರು. 2023-24ನೇ ಸಾಲಿನ ಕ್ರಿಯಾ ಯೋಜನೆಯಂತೆ ಸದಸ್ಯರ ಸಂಸ್ಥೆಯ ವೃದ್ಧಿ, ಪಾಲು ಬಂಡವಾಳದ ವೃದ್ಧಿ, ಠೇವಣಿ ಮೊತ್ತವನ್ನು ವೃದ್ಧಿಸುವುದು, ಸಾಲದ ವಿತರಣೆಯ ವೃದ್ಧಿ, ಶಾಖಾ ವಿಸ್ತರಣೆಯ ಅಡಿಯಲ್ಲಿ ಸುಳ್ಯ ಮತ್ತು ವಿಟ್ಲ ಅಥವಾ ಕಡಬದಲ್ಲಿ ನೂತನ ಶಾಖೆಗಳ ಸ್ಥಾಪನೆಗೆ ಅನುಮತಿಯನ್ನು ಪಡೆಯಲಾಯಿತು.
ಸನ್ಮಾನ, ಅಭಿನಂದನೆ
ಎರಡನೇ ಅವಧಿಯಲ್ಲಿ ಒಂದೂವರೆ ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಆನಂದ ಉಡುಪರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಆನಂದ ಉಡುಪರವರು ಮಾತನಾಡಿ, ಓರ್ವ ಸದಸ್ಯನಾಗಿ ಸದಾ ಸಂಸ್ಥೆಯ ಜೊತೆ ಇರುತ್ತೇನೆ ಎಂದು ಹೇಳಿ ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿದರು.ವಿಶೇಷ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಅವರ ಸಾಧನೆಗೋಸ್ಕರ ಅಭಿನಂದಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ ಪುತ್ತೂರಾಯ, ಉಪಾಧ್ಯಕ್ಷರಾಗ ಆಯ್ಕೆಯಾದ ಜಯರಾಮ ಕೆದಿಲಾಯ ಇವರುಗಳನ್ನು ಡಾ.ಸುರೇಶ ಪುತ್ತೂರಾಯರವರು ಹಾರ ಹಾಕುವ ಮೂಲಕ ಅಭಿನಂದಿಸಿದರು.
ಸಹಕಾರಿಯ ದಶಮಾನೋತ್ಸವ ಸಂಭ್ರಮ
2015 ರಲ್ಲಿ ಆರಂಭವಾದ ಸಹಕಾರಿಗೆ 2025ನೇ ಇಸವಿಗೆ 10 ವರ್ಷ ತುಂಬುವುದರಿಂದ ಸಹಕಾರಿಯ ದಶಮಾನೋತ್ಸವವನ್ನು ಆಚರಿಸುವ ಬಗ್ಗೆ ಸದಸ್ಯರೆಲ್ಲರೂ ಈಗಿನಿಂದಲೇ ತಯಾರಾಗುವಂತೆ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡುವಂತೆ ಅಧ್ಯಕ್ಷ ಹರೀಶ ಪುತ್ತೂರಾಯ ಕೇಳಿಕೊಂಡರು.
ಸಂಸ್ಥೆಯ ಸದಸ್ಯರಾಗಿದ್ದು ನಿಧನ ಹೊಂದಿದ ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಸದಸ್ಯ ಅನಂತ ಕೃಷ್ಣ ಪಡ್ಪಿಲ್ಲಾಯರ ಪುತ್ರ ಸುಬ್ರಹ್ಮಣ್ಯರಿಗೆ ಆತ್ಮಕ್ಕೆ ಮೋಕ್ಷ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಗೋಪಾಲಕೃಷ್ಣ ಶಗ್ರಿತ್ತಾಯರ ಕುಟುಂಬಕ್ಕೆ ಸದಸ್ಯರ ಕ್ಷೇಮನಿಧಿಯಿಂದ 4 ಸಾವಿರ ರೂಪಾಯಿಗಳನ್ನು ನೀಡಿರುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದರು ಮತ್ತು ಈ ಕ್ರಮವನ್ನು ಮುಂದುವರಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಜಯರಾಮ ಕೆದಿಲಾಯ, ನಿರ್ದೇಶಕರುಗಳಾದ ವತ್ಸಲಾ ರಾಜ್ಞಿ, ಶ್ರೀಧರ ಬೈಪಡಿತ್ತಾಯ, ಡಾ.ಸುರೇಶ್ ಪುತ್ತೂರಾಯ, ರಾಜೇಂದ್ರ ಪ್ರಸಾದ್, ಯಂ.ವಿಷ್ಣುಮೂರ್ತಿ ಹಾಗೂ ನೂತನವಾಗಿ ಆಯ್ಕೆಯಾದ ಮನೋರಮಾ ಎಸ್.ಕೆ, ಕೃಷ್ಣ ಪ್ರಸಾದ್ ಕೆದಿಲಾಯ, ಸುಧೀರ್ ಕೃಷ್ಣ ಎಂ.ಪಿ ಉಪಸ್ಥಿತರಿದ್ದರು. ವತ್ಸಲಾ ರಾಜ್ಞಿ ವಂದಿಸಿದರು. ಸಿಬ್ಬಂದಿಗಳಾದ ಪುತ್ತೂರು ಶಾಖಾ ವ್ಯವಸ್ಥಾಪಕಿ ಪೃಥ್ವಿ ಎಂ, ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ಅಕ್ಷಯ್, ಕಛೇರಿ ಸಹಾಯಕರುಗಳಾದ ಅಶ್ವಿನಿ ಟಿ, ಸತ್ಯಶ್ರೀ ಎಸ್.ಭಟ್ ಸಹಕರಿಸಿದ್ದರು. ಬೆಳಿಗ್ಗೆ ಮಹಾಸಭೆಯ ಮೊದಲು ಗಣಹೋಮ ಹಾಗೂ ಸಂಜೆ ವೇ.ಮೂ.ಸುರೇಶ ನಕ್ಷಿತ್ರಿತ್ತಾಯರವರಿಂದ ಲಕ್ಷ್ಮೀಪೂಜೆ ನಡೆಯಿತು.

LEAVE A REPLY

Please enter your comment!
Please enter your name here