ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಉಜಿರೆಯಲ್ಲಿ ಬೃಹತ್ ಸಮಾವೇಶ-ಹಕ್ಕೊತ್ತಾಯ ಮಂಡನೆ

0

ಸೌಜನ್ಯಳಿಗೆ ನ್ಯಾಯ ಸಿಗಬೇಕು-ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಲೇಬೇಕು
ಧರ್ಮಸ್ಥಳ, ಧರ್ಮಾಧಿಕಾರಿಗಳ ಅವಹೇಳನ,ಅಪಪ್ರಚಾರ ಮಾಡುವವರಿಗೂ ಶಿಕ್ಷೆಯಾಗಬೇಕು

ಪುತ್ತೂರು:2012ರಲ್ಲಿ ಧರ್ಮಸ್ಥಳದ ಮಣ್ಣಸಂಕದ ಬಳಿ ನಡೆದಿರುವ ಕು| ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೆಂದು ಗೊತ್ತಾಗಬೇಕು, ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು, ವಿನಾಕಾರಣ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಮಾತನಾಡುವವರು ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ, ಅವಹೇಳನಕಾರಿಯಾಗಿ ಮಾತನಾಡುವವರಿಗೂ ಶಿಕ್ಷೆಯಾಗಬೇಕು ಎಂದು ಉಜಿರೆಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ವತಿಯಿಂದ ಆ.4ರಂದು ಬೃಹತ್ ಸಮಾವೇಶ ನಡೆಸಿ ಹಕ್ಕೊತ್ತಾಯ ಮಂಡಿಸಲಾಗಿದೆ.ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತವೃಂದ ಕ್ಷೇತ್ರದ ಪರವಾಗಿ ಧ್ವನಿಯೆತ್ತಿದರು. ಪುತ್ತೂರು,ಕಡಬದಿಂದಲೂ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.


ಸೌಜನ್ಯ ಪ್ರಕರಣದ ಸಿಬಿಐ ತನಿಖೆ ಪೂರ್ಣಗೊಂಡು ತೀರ್ಪು ಹೊರಬಿದ್ದು, ಆರೋಪಿಯಾಗಿದ್ದ ಸಂತೋಷ್ ರಾವ್ ದೋಷಮುಕ್ತಿಗೊಂಡ ಮೇಲೆ ಧರ್ಮಸ್ಥಳ ಕ್ಷೇತ್ರ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ವ್ಯಾಪಕ ಅಪಪ್ರಚಾರ,ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದರು.ಕುಮಾರಿ ಸೌಜನ್ಯಳ ಸಾವಿಗೆ ನ್ಯಾಯ ಸಿಗಲೇ ಬೇಕು.ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು.ಆದರೆ ಸೌಜನ್ಯ ಕೇಸ್‌ನ ನೆಪ ಮಾಡಿಕೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ,ಅವಹೇಳನಕಾರಿ ಹೇಳಿಕೆ ನೀಡುವವರಿಗೂ ತಕ್ಕ ಶಿಕ್ಷೆಯಾಗಬೇಕೆಂದು ಸಮಾವೇಶದಲ್ಲಿ ಆಗ್ರಹಿಸಿದರು.


ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಸಮಾವೇಶ ನಡೆಯಿತು.ಬಳಿಕ ದೇವಸ್ಥಾನದ ಬಳಿಯಿಂದ ಎಸ್‌ಡಿಎಂ ಕಾಲೇಜು ತನಕ ಜಾಥಾ ನಡೆದು ಎಸ್‌ಡಿಎಂ ಕಾಲೇಜು ಮುಂಭಾಗ ಹಕ್ಕೊತ್ತಾಯ ಮಂಡನೆ ನಡೆಯಿತು.ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದ ವಠಾರದಲ್ಲಿ ಮಂಜುನಾಥೇಶ್ವರ ಭಕ್ತವೃಂದದವರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.ಇಲ್ಲಿ ನಡೆದ ಸಮಾವೇಶವನ್ನು ಉದ್ಧೇಶಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್,ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಅಜಿಲ ಸೀಮೆಯ ಅರಸರಾದ ಡಾ|ಪದ್ಮಪ್ರಸಾದ್ ಅಜಿಲ ಮುಂತಾದವರು ಮಾತನಾಡಿ,ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಪವಿತ್ರವಾಗಿದ್ದಾರೆ.ಅವಹೇಳನಕಾರಿ, ಅಪಪ್ರಚಾರದ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ.ಸೌಜನ್ಯಳಿಗೆ ನ್ಯಾಯ ಸಿಗಲೇ ಬೇಕು,ಇದರ ಜೊತೆ ಕ್ಷೇತ್ರದ ವಿರುದ್ಧದ ಅಪಪ್ರಚಾರ, ಧರ್ಮಾಧಿಕಾರಿಗಳ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾರೆವು.ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟಕ್ಕೂ ಸಿದ್ಧ ಎಂದರು.ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ,ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ನಿಕಟಪೂರ್ವ ಅಧ್ಯಕ್ಷೆ ಶಾರದಾ ರೈ, ಇಚ್ಚಿಲ ಸುಂದರ ಗೌಡ, ಜಯರಾಜ್ ಹೊಸಕೋಟೆ,ಕೃಷ್ಣಕುಮಾರ್ ಪೂಂಜ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಭಜನಾ ಪರಿಷತ್ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು, ಕ್ಷೇತ್ರದ ಸಿಬ್ಬಂದಿಗಳು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಸೇರಿದ್ದರು.


ಜಾಥಾ-ಹಕ್ಕೊತ್ತಾಯ ಮಂಡನೆ:
ಜನಾರ್ದನ ಸ್ವಾಮಿ ದೇವಸ್ಥಾನದಿಂದ ಜಾಥಾದ ಮೂಲಕ ಸಾಗಿದ ಸಹಸ್ರಾರು ಭಕ್ತರ ದಂಡು, ಉಜಿರೆಯ ಎಸ್‌ಡಿಎಂ ಕಾಲೇಜಿನ ತನಕ ಸಾಗಿದರು.ಅಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ ಮಾಡಿದರು.ಧರ್ಮಸ್ಥಳದ ಸುಬ್ರಹ್ಮಣ್ಯ ಪ್ರಸಾದ್ ಹಕ್ಕೊತ್ತಾಯ ಪತ್ರವನ್ನು ವಾಚಿಸಿದರು.ನಂತರ,ಈ ಹಕ್ಕೊತ್ತಾಯ ಪತ್ರವನ್ನು ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್‌ರವರಿಗೆ ನೀಡಿದರು.ಇದನ್ನು ಸರ್ಕಾರ ಮತ್ತು ಮುಖ್ಯಮಂತ್ರಿಯವರ ಗಮನಕ್ಕೆ ತಂದು,ಶೀಘ್ರ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುವುದಾಗಿ ಶಾಸಕರಾದ ಹರೀಶ್ ಪೂಂಜ ಮತ್ತು ಪ್ರತಾಪಸಿಂಹ ನಾಯಕ್ ತಿಳಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲೂಕು ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ವಳತ್ತಡ್ಕ ಮಹಾಬಲ ರೈ, ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸ್ವಸಹಾಯ, ಪ್ರಗತಿ ಬಂಧು ಗುಂಪುಗಳ ಸದಸ್ಯರು ಸೇರಿದಂತೆ ಪುತ್ತೂರು,ವಿಟ್ಲ,ಕಡಬದಿಂದಲೂ ಸಾವಿರಾರು ಮಂದಿ ಈ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಸ್ಥಳಕ್ಕೆ ಬಂದ ಸೌಜನ್ಯ ಕುಟುಂಬ-ಗೊಂದಲ
ಎಸ್‌ಡಿಎಂ ಕಾಲೇಜು ಮುಂಭಾಗದ ವೇದಿಕೆಯಲ್ಲಿ ಹಕ್ಕೊತ್ತಾಯ ಮಂಡನೆ ನಡೆಯುತ್ತಿರುವ ಸಂದರ್ಭ ಮೃತ ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ಅವರ ಪುತ್ರ, ಪುತ್ರಿಯರೂ `ಜಸ್ಟಿಸ್ ಫಾರ್ ಸೌಜನ್ಯ’ ಫಲಕ ಹಿಡಿದುಕೊಂಡು ಆಗಮಿಸಿದರು.ಇವರು ವೇದಿಕೆಯೇರಲು ಪೊಲೀಸರು ಅವಕಾಶ ನೀಡಲಿಲ್ಲ.ಈ ವೇಳೆ ಸಣ್ಣಮಟ್ಟಿನ ಗೊಂದಲಗಳು ಏರ್ಪಟ್ಟು,ಅಲ್ಲಿದ್ದ ಕೆಲವರ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು.ನಂತರ, ಪೊಲೀಸರ ಬಂದೋಬಸ್ತ್‌ನಲ್ಲಿ ಸೌಜನ್ಯ ಕುಟುಂಬದವರು ವಾಪಸಾದರು.ತಮಗೆ ವೇದಿಕೆಯೇರಲು ಬಿಡಲಿಲ್ಲ ಅನ್ನುವ ಕಾರಣಕ್ಕೆ ಮಾಧ್ಯಮಗಳ ಮುಂದೆ ಅವರು ತಮ್ಮ ಅಸಮಾಧಾನ ತೋಡಿಕೊಂಡರು. ಬಳಿಕ ಘಟನೆ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಶಾಂತಿಯ ವಾತಾವರಣಕ್ಕೆ ಬಿಡುವುದಿಲ್ಲ
ಈ ಘಟನೆ ನಡೆದ ಸಂದರ್ಭದಿಂದಲೂ ಇಡೀ ಸಮಾಜವು ನ್ಯಾಯಕ್ಕಾಗಿ ಆಗ್ರಹವನ್ನು ಇಟ್ಟುಕೊಂಡು ಬಂದಿದೆ. ಸೌಜನ್ಯ ಪ್ರಕರಣ ನಡೆದಾಗ, ಪಂಚಾಯತ್ ಸದಸ್ಯರಾಗಿದ್ದ ಸೌಜನ್ಯರ ಅಜ್ಜ ಮೊದಲು ನೇರವಾಗಿ ಹೋಗಿದ್ದು ಹೆಗ್ಗಡೆಯವರ ಬಳಿಗೆ. ಹೆಗ್ಗಡೆಯವರು ನಮ್ಮ ಸಮಕ್ಷಮದಲ್ಲೇ ಆಗಿನ ಗೃಹಮಂತ್ರಿಗಳಿಗೆ ಕರೆಮಾಡಿ ಇದು ನಮ್ಮ ಕ್ಷೇತ್ರದ ಒಂದು ಹುಡುಗಿಯ ಹತ್ಯೆಯ ಪ್ರಶ್ನೆ. ಇದರ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಹೇಳಿದ ಮೊದಲ ವ್ಯಕ್ತಿ ಹೆಗ್ಗಡೆಯವರು.ನಂತರದ ದಿನಗಳಲ್ಲಿ ವೈಯಕ್ತಿಕ ದ್ವೇಷಸಾಧನೆಗಾಗಿ ಅವರ ಭಾವನೆಗಳ ಜೊತೆಗೆ ಆಟವಾಡಿ ಆ ಕುಟುಂಬವನ್ನು ದಾರಿತಪ್ಪಿಸುವ ಕೆಲಸ ಆಯ್ತು.ಬಳಿಕ ತನಿಖೆಯನ್ನು ಸಿಒಡಿ, ಬಳಿಕ ಸಿಬಿಐಗೆ ಒಪ್ಪಿಸಲಾಯ್ತು.ಇದರ ಹಿಂದೆ ಖಾವಂದರ ಒತ್ತಾಯವೂ ಇತ್ತು. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕೆನ್ನುವ ಬಗ್ಗೆ ಖಾವಂದರಿಂದ ಹಿಡಿದು ತಾಲೂಕಿನ, ಜಿಲ್ಲೆಯ, ರಾಜ್ಯದ ಜನರಲ್ಲಿ ಯಾವುದೇ ವ್ಯತ್ಯಾಸ ಇಲ್ಲ.ಆದರೆ ವ್ಯತ್ಯಾಸ ಇರುವುದು ಎಲ್ಲಿ ಎಂದರೆ ಈ ಭಾವನೆಯ ಜೊತೆಗೆ ಆಟವಾಡುತ್ತಾ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತಿದೆ.ಕೋಟಿ ಕೋಟಿ ಜನರಿಗೆ ಹೆಗ್ಗಡೆಯವರ ಮಾತಿನ ಮೇಲೆ ನಂಬಿಕೆ ಇದೆ. ಅದಕ್ಕಾಗೇ ಅವರನ್ನು ಮಾತನಾಡುವ ಮಂಜುನಾಥ ಎಂದು ಕರೆಯುವುದು. ಸೌಜನ್ಯಗೆ ನ್ಯಾಯ ಸಿಗಬೇಕೆನ್ನುವುದು ನಮ್ಮ ಬೇಡಿಕೆಯೇ.ಆದರೆ ಇದನ್ನು ನೆಪವಾಗಿಟ್ಟುಕೊಂಡು ನಮ್ಮ ನಂಬಿಕೆಯ ಶ್ರದ್ಧಾಕೇಂದ್ರಕ್ಕೆ ಎಂತೆಂತಹ ಮಾತುಗಳನ್ನು ಮಾತನಾಡಿದರು.ನಿಮ್ಮಲ್ಲಿ ಬೇಕಾದ ದಾಖಲೆಗಳು, ಸಾಕ್ಷಿಗಳು ಇದ್ದರೆ ಪೊಲೀಸರು, ಸಿಒಡಿಗೆ ಸಿಬಿಐಗೆ ನೀಡಬಹುದಿತ್ತು. ಆದರೆ ತನಿಖೆಯಲ್ಲಿ ಚಾರ್ಜ್‌ಶೀಟ್ ಹಾಕಿರುವುದು ಸಂತೋಷ್ ರಾವ್ ಮೇಲೆ. ತನಿಖೆ ಮಾಡಿ ತೀರ್ಪು ನೀಡಿರುವುದು ನ್ಯಾಯಾಲಯ.ಎಲ್ಲವೂ ಒಂದು ವ್ಯವಸ್ಥೆಯ ಮೇಲೆ ನಡೆದುಕೊಂಡು ಹೋಗ್ತಿರುವಾಗ ನೀವು ಯಾಕೆ ಧರ್ಮಸ್ಥಳವನ್ನು ಗುರಿ ಮಾಡ್ತೀರಿ? ನಿಮ್ಮ ಉದ್ದೇಶ ಏನು? ಏನು ಮಾತನಾಡಿದ್ರೂ ನಡೆಯುತ್ತದೆ ಎನ್ನುವವರಿಗೆ ಈ ಸಭೆ ಉತ್ತರ ಕೊಟ್ಟಿದೆ. ಸಾತ್ವಿಕ ಸಮಾಜ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತಾಳ್ಮೆಗೆ ಒಂದು ಮಿತಿಯಿದೆ. ಅಶಾಂತಿಯ ವಾತಾವರಣ ತಾಲೂಕಿನಲ್ಲಿ ಆಗುವುದಕ್ಕೆ ಬಿಡುವುದಿಲ್ಲ-
ಪ್ರತಾಪಸಿಂಹ ನಾಯಕ್, ವಿಧಾನಪರಿಷತ್ ಸದಸ್ಯರು

ಖಾವಂದರು ಪವಿತ್ರವಾಗಿದ್ದಾರೆ
ಈ ದೇಶದಲ್ಲಿ ಸತ್ಯಕ್ಕೆ ಜಯ.ಧರ್ಮ,ಜಾತಿಯನ್ನು ಎತ್ತಿಕಟ್ಟುವ ಕೆಲಸ ಸಾಧ್ಯವಿಲ್ಲ.ಇದು ಸರ್ವಜನಾಂಗದ ಶಾಂತಿಯ ತೋಟ.ಅನಾವಶ್ಯಕ ದೂರುವ ವ್ಯವಸ್ಥೆಗೆ ಕೊನೆ ಹಾಡಬೇಕೆಂದು ಎಲ್ಲರೂ ಸೇರಿದ್ದೇವೆ. ಸೌಜನ್ಯ ಪ್ರಕರಣದಲ್ಲಿ ಪೊಲೀಸ್, ಸಿಒಡಿ ಮತ್ತು ಸಿಬಿಐ ತನಿಖೆ ಕೂಡ ನಡೆಯುತ್ತದೆ.ಆರೋಪಿತರಾದವರನ್ನು ಬಿಡುಗಡೆ ಮಾಡಬೇಕೆನ್ನುವ ತೀರ್ಪು ನೀಡಿ ಪ್ರಕರಣವನ್ನು ಅಂತ್ಯಗೊಳಿಸುತ್ತದೆ. ಇದಾದ ಬಳಿಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೊಂದಷ್ಟು ವಿಚಾರಗಳನ್ನು ನೋಡ್ತಿದ್ದೇವೆ.ಇದರಲ್ಲಿ ಏನು ತರ್ಕ ಎನ್ನುವುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಪೂರ್ಣ ತನಿಖೆಯಾಗಬೇಕೆಂದು ಖಾವಂದರು ಹೇಳಿದ್ದರು. ಎಲ್ಲರೂ ತನಿಖೆ ಆಗಬೇಕೆಂದು ಹೇಳುತ್ತಿರುವಾಗ ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು, ಪೂಜ್ಯ ಖಾವಂದರನ್ನು ಗುರಿಯಾಗಿಟ್ಟುಕೊಂಡು ಆಪಾದನೆ ಮಾಡುವುದು ದ್ರೋಹ.ಈ ಗೊಂದಲ ನಿವಾರಣೆಯಾಗಬೇಕು. ಖಾವಂದರು ಪವಿತ್ರವಾಗಿದ್ದಾರೆ. ಮತ್ತೆ ಈ ಕ್ಷೇತ್ರದಿಂದ ಹೋರಾಟ ಪ್ರಾರಂಭಿಸಿದ್ದೇವೆ. ಇದು ಮರುಕಳಿಸಿದ್ರೆ ಇಡೀ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧರಾಗಿದ್ದೇವೆ-
ಕೆ.ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯರು

ಖಾವಂದರ ಜೊತೆ ಅಣ್ಣಪ್ಪ,ಮಂಜುನಾಥರಿದ್ದಾರೆ
ಹಕ್ಕೊತ್ತಾಯ ಸಭೆಯ ಮನವಿ ಸ್ವೀಕರಿಸಿದ್ದೇನೆ.ಸಿಬಿಐ ನ್ಯಾಯಾಲಯದ ಆದೇಶದ ನಂತರ ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವ ಆಗ್ರಹವನ್ನು ಪ್ರತಾಪ್‌ಸಿಂಹ ನಾಯಕ್ ಮತ್ತು ನಾನು ಮುಖ್ಯಮಂತ್ರಿಗಳಿಗೆ ಮಾಡಿದ್ದೇವೆ.ಸೌಜನ್ಯಳಿಗೆ ನ್ಯಾಯ ಹನ್ನೊಂದು ವರ್ಷಗಳ ಕಾಲ ವಿಳಂಬವಾದ ರೀತಿಯಲ್ಲಿ ಅಲ್ಲ, ಒಂದೆರಡು ತಿಂಗಳುಗಳ ಒಳಗಾಗಿ ನೈಜ ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸುತ್ತಿದ್ದೇನೆ.ಅಮಾಯಕ ಬಾಲಕಿಯ ಹತ್ಯೆ ಮಾಡಿರುವ ಆರೋಪಿ ಯಾರೇ ಇದ್ದರೂ, ಆ ಆರೋಪಿಗೆ ಯಾವುದೇ ರಾಜಕಾರಣಿ ಸಹಕಾರ ನೀಡಿದ್ದರೂ, ಯಾವುದೇ ವ್ಯಕ್ತಿ ಅಂತಹ ಹತ್ಯೆ ಮಾಡಿರುವ ವ್ಯಕ್ತಿಗಳಿಗೆ ಸಹಕಾರ ನೀಡಿದ್ದರೂ,ಧರ್ಮಸ್ಥಳದ ಮಂಜುನಾಥ ದೇವರು, ಅಣ್ಣಪ್ಪನ ಆಶೀರ್ವಾದದ ಮೂಲಕ ಅಂತಹ ವ್ಯಕ್ತಿಗಳು ನಮ್ಮ ಕಣ್ಣಮುಂದೆ ಮುಂದಿನ ದಿನಗಳಲ್ಲಿ, ಸಮಾಜದ ಮುಂದೆ ಹುಚ್ಚರ ರೀತಿ ತಿರುಗುವಂತಾಗುತ್ತದೆ.ಸೌಜನ್ಯ ಎನ್ನುವ ಬಾಲಕಿಗೆ ನ್ಯಾಯ ಸಿಗಬೇಕು ಅನ್ನುವ ಹಕ್ಕೊತ್ತಾಯ ಮಾಡಿzವೆ.ನನಗೆ ಪೂರ್ಣ ವಿಶ್ವಾಸ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಯ ಮೇಲಿದೆ.ಈ ಒಂದು ಪ್ರಕರಣವನ್ನೇ ಇಟ್ಟುಕೊಂಡು ಕೆಲವು ಎಡಬಿಡಂಗಿಗಳು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಇವತ್ತು ಮಾಡ್ತಿರುವುದು, ಹಿಂದೂ ಸಮಾಜದ ಶ್ರದ್ಧಾಕೇಂದ್ರ ಧರ್ಮಸ್ಥಳದ ಮಂಜುನಾಥ, ಅಣ್ಣಪ್ಪನ ಅಸ್ತಿತ್ವವನ್ನು ಪ್ರಶ್ನೆ ಮಾಡುವ ಮೂಲಕ ಅಪಮಾನ ಮಾಡುವವರನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲ.ಖಾವಂದರ ಜೊತೆ ಮಂಜುನಾಥ ಮತ್ತು ಅಣ್ಣಪ್ಪನಿದ್ದಾರೆ.ಖಾವಂದರು, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವುದನ್ನು ಸಹಿಸುವುದಿಲ್ಲ-
ಹರೀಶ್ ಪೂಂಜ, ಶಾಸಕರು,ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

ನಾವು ಸೌಜನ್ಯ ಪರ ನೂರಕ್ಕೆ ನೂರರಷ್ಟು,
ಹೆಗ್ಗಡೆಯವರ ಪರ ನೂರಕ್ಕೆ ನೂರಹತ್ತರಷ್ಟು ಇದ್ದೇವೆ

ಇದು ದಶಕಗಳಿಂದ ನೋವು ಅನುಭವಿಸುತ್ತಿರುವವರ ಕಾರ್ಯಕ್ರಮ.ವೃಥಾ ಆರೋಪ ಮಾಡುವವರನ್ನು ಪ್ರಶ್ನಿಸುವ ಕಾರ್ಯಕ್ರಮ.ನಮ್ಮ ಸಹನೆಯ ಕಟ್ಟೆ ಮೀರಿದೆ.ಈ ಘಟನೆಯನ್ನು ಖಂಡಿಸದವರು ಮಾನವ ಸಮಾಜಕ್ಕೆ ಸೇರಿದವರು ಅಲ್ಲ.ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕೆ ಅನೇಕ ಪ್ರಯತ್ನಗಳನ್ನು ಮಾಡಿದವರು ನಾವು.ನಮಗೆ ನ್ಯಾಯ ಬೇಕಿದೆ.ಈ ಪ್ರಕರಣದಲ್ಲಿ ಯಾರ ಮೇಲೆ ಆರೋಪ ಹೊರಿಸಿದ್ದರೋ ಅವರು ಖುಲಾಸೆಯಾದದ್ದು ಸರಿಯೋ? ಖುಲಾಸೆಯಾದವರು ಮಾಡಿಲ್ಲ ಅಂತಾದ್ರೆ ಮತ್ತೆ ಯಾರು ಮಾಡಿದ್ದಾರೆ? ಅವರು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ವ್ಯಕ್ತಿ.ಹಲವು ದಿನಗಳಿಂದ ಆ ಭಾಗದಲ್ಲಿ ಓಡಾಡುತ್ತಿದ್ದ.ಮಂಪರು ಪರೀಕ್ಷೆಗೆ ಆತ ಒಪ್ಪಿಲ್ಲ.ಆತ ಮಾನಸಿಕ ಅಸ್ವಸ್ಥ ಎನ್ನುತ್ತಾರೆ.ಆದರೆ ಆತ ಐಟಿಐ, ಡಿಪ್ಲೊಮಾ ಮಾಡಿದ್ದಾರೆ.ಕರಾಟೆ ಟೀಚರ್ ಆಗಿದ್ದರು.ಸರ್ಕಾರ ತೀರ್ಮಾನಿಸುವಾಗ ಈ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು.ಇಡೀ ಪ್ರಕರಣವನ್ನು ಸರಕಾರ ಸರಿಯಾಗಿ ಗಮನಿಸಬೇಕು ಎನ್ನುವುದು ನಮ್ಮ ಬೇಡಿಕೆ.ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು 2012ರಿಂದ ಧರ್ಮಸ್ಥಳದ ಡಾ|ವೀರೇಂದ್ರ ಹೆಗ್ಗಡೆಯವರ ಮೇಲೆ ಪುಂಖಾನುಪುಂಖ ಆರೋಪ ಮಾಡ್ತಿದ್ದಾರೆ.ಹೆಗ್ಗಡೆಯವರಿಗೆ ಗೌರವ ನೀಡಬೇಕೆಂದು ನಿಮಗೆ ಅನಿಸುವುದಿಲ್ಲವೇ? ಸಮಾಜದ ಏಳಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಹೆಗ್ಗಡೆಯವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯೇ? ಅವರ ಜೊತೆ 30 ವರ್ಷಗಳಿಂದ ಕೆಲಸ ಮಾಡ್ತಿದ್ದೇನೆ, ಅವರ ನೋವು ನಲಿವು ನೋಡಿದ್ದೇನೆ. ಹೆಗ್ಗಡೆಯವರು ಹೊಸ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರಿಗೆ ಗುಣಗಾನ ಮಾಡ್ತಾರೆ ಎಂದು ಆರೋಪ ಮಾಡ್ತಾರೆ.ಹೊಸ ಸಂಸತ್ ಭವನ ಉದ್ಘಾಟನೆಯಾದಾಗ ಪ್ರಧಾನಿ ಮೋದಿಯವರು ಹೆಗ್ಗಡೆಯವರಿಗೆ ಪತ್ರ ಬರೆದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದ್ದರು. ಆದರೆ ಹೆಗ್ಗಡೆಯವರು ಬರುವುದಿಲ್ಲ ಎಂದಿದ್ದರು.ನೂತನ ಸರಕಾರದ ಶಾಸಕರಿಗೆ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಸೌಖ್ಯವನದಲ್ಲಿ ಏರ್ಪಡಿಸಿದ್ದರು.ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವ ಭಾವನೆ ಇದ್ದಿದ್ದರೆ ಹೆಗ್ಗಡೆಯವರು ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.ಆದರೆ ಪೂಜ್ಯರು ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ.ಓಲೈಸಬೇಕೆಂದಿದ್ದರೆ ಹೆಗ್ಗಡೆಯವರು ಈ ಕಾರ್ಯಕ್ರಮಕ್ಕೆ ಹೋಗದೇ ಇರುತ್ತಿದ್ದರೇ? ಹೆಗ್ಗಡೆಯವರು ನಿಷ್ಠುರವಾದಿ. ಸೌಜನ್ಯ ಪ್ರಕರಣ ಆದ ಮರುಘಳಿಗೆಯೇ ಗೃಹಸಚಿವರಿಗೆ ಕರೆಮಾಡಿ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುವಂತೆ ಮನವಿ ನೀಡಿದ್ದರು.ಸಿಒಡಿ, ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದರು.ನಮಗೆ ಹೆಗ್ಗಡೆಯವರ ಮೇಲೆ ನಂಬಿಕೆಯಿದೆ.ಹೀಗಿದ್ದರೂ ಹೆಗ್ಗಡೆಯವರನ್ನು ಅವಮಾನಿಸುವ, ನಿಂದಿಸುವ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿವೆ.ನಾವು ನೂರಕ್ಕೆ ನೂರು ಸೌಜನ್ಯ ಪರವಾಗಿದ್ದೇವೆ. ಹೆಗ್ಗಡೆಯವರ ಪರವಾಗಿ ನೂರಕ್ಕೆ ನೂರ ಹತ್ತು ಇದ್ದೇವೆ.ನಿಮ್ಮ ಬಳಿ ಸಾಕ್ಷಿ ಇದ್ದರೆ ಸಾಕ್ಷಿ ಕೊಡಿ.ಇಲ್ಲದಿದ್ದರೆ ಸುಮ್ಮನಿರಿ. ಸಮೂಹ ಮಾಧ್ಯಮಗಳಲ್ಲಿ ಹೆಗ್ಗಡೆಯವರನ್ನು ನಿಂದಿಸುವ ವೀಡಿಯೋಗಳಿಗೆ ಸಾಕ್ಷಿ ಕೇಳುವಂತೆ ನಿಮ್ಮ ಮಕ್ಕಳಿಗೆ ಹೇಳಿ.ಸತ್ಯವನ್ನು ಅರ್ಥಮಾಡಿಕೊಳ್ಳಿ. ಸುಳ್ಳಿನ ಕೋಟೆಯಲ್ಲಿ ನಿಂತು ಸತ್ಯವನ್ನು ಹುಡುಕುವ ಕೆಲಸವನ್ನು ಹೋರಾಟಗಾರರು ಮಾಡುತ್ತಿದ್ದಾರೆ.ಸುಳ್ಳಿನಿಂದ ಹೊರಗಡೆ ಬಂದು ಒಮ್ಮೆ ಯೋಚಿಸಿ ನೋಡಿ ಸತ್ಯ ಗೊತ್ತಾಗುತ್ತದೆ.ಹೋರಾಟಗಾರರಲ್ಲಿ ಸತ್ಯ ಇರೋದೇ ಹೌದಾಗಿದ್ರೆ ಈ ಸಮಾವೇಶ ನಿಲ್ಲಿಸುವುದಕ್ಕೆ ಯಾಕೆ ಪ್ರಯತ್ನಿಸಿದ್ದೀರಿ? ನಿಮ್ಮಲ್ಲಿ ಸಾಕ್ಷಿ, ಹೇಳುವ ತಾಕತ್ತು ಇದ್ದರೆ ಜನರನ್ನು ಕರೆದು ಹೇಳಿ, ಸರಕಾರಕ್ಕೆ ಮನವಿ ಕೊಡಿ.ಜನರ ಪ್ರಾಮಾಣಿಕ ಹಕ್ಕೊತ್ತಾಯವನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೀರಿ. ಜನರನ್ನು ತಪ್ಪು ದಾರಿಗೆಳೆಯುತ್ತಿದ್ದೀರಿ. ಹಂದಿ ಹೊಡೆಯುವುದನ್ನು ಉಪಮೆಯಾಗಿ ಬಳಸಿಕೊಂಡು ಈ ಹೋರಾಟ ಮಾಡೋಣ ಎಂದು ಒಬ್ಬ ಪುಣ್ಯಾತ್ಮ ಹೇಳಿದ್ದಾನೆ.ಹಾಗಿದ್ರೆ ಇವರು ಯಾರನ್ನು ಬೇಟೆಯಾಡ್ತಿದ್ದಾರೆ? ಇದು ಸುಳ್ಳಿನ ವಿರುದ್ಧ ಸತ್ಯದ ಹೋರಾಟ ಇದನ್ನು ಅರ್ಥಮಾಡಿಕೊಳ್ಳಬೇಕಿದೆ.ನಮಗೆ ಯಾರ ಮೇಲೂ ದ್ವೇಷ ಇಲ್ಲ. ಯೂಟ್ಯೂಬ್‌ನಲ್ಲಿ ಅವಮಾನಕರ ವೀಡಿಯೋಗಳನ್ನು ನೋಡಿಯೂ ನೀವು ಸುಮ್ಮ ನಿದ್ದೀರಲ್ಲ, ನನ್ನ ಅಸಮಾಧಾನ ಇರುವುದು ನಿಮ್ಮ ಮೇಲೆ.ಹೆಗ್ಗಡೆಯವರು ಸಮಾಜಕ್ಕೆ
ಏನು ಮಾಡಿದ್ದಾರೆ ಎಂದರೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ.ಇದು ಜಾತಿ, ಮತ ಧರ್ಮವನ್ನು ಮೀರಿನಿಂತ ಕ್ಷೇತ್ರ-
ಡಾ|ಎಲ್.ಹೆಚ್.ಮಂಜುನಾಥ್,
ಕಾರ್ಯನಿರ್ವಾಹಕ ನಿರ್ದೇಶಕರು, ಎಸ್‌ಕೆಡಿಆರ್‌ಡಿಪಿ

LEAVE A REPLY

Please enter your comment!
Please enter your name here