ತನ್ನ, ಮೈಗೆ ಕೈಹಾಕಿ ಮಾನಕ್ಕೆ ಕುಂದು, ಹಲ್ಲೆಗೆ ಯತ್ನ ಆರೋಪ-ಸೌಜನ್ಯ ತಾಯಿ ಕುಸುಮಾವತಿಯವರಿಂದ ದೂರು

0

ಪುತ್ತೂರು:ಉಜಿರೆಯಲ್ಲಿ ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತವೃಂದ ಆಯೋಜಿಸಿದ್ದ ಬೃಹತ್ ಸಮಾವೇಶದ ವೇಳೆ ಆಗಮಿಸಿದ್ದ ಮೃತ ಸೌಜನ್ಯ ಅವರ ತಾಯಿ ಕುಸುಮಾವತಿಯವರಿಗೆ ವೇದಿಕೆಯೇರಲು ಅವಕಾಶ ನೀಡಿರಲಿಲ್ಲ.ಈ ಘಟನೆಯ ನಂತರ ಕುಸುಮಾವತಿಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ, ಅಪರಿಚಿತ ವ್ಯಕ್ತಿಗಳು ತನ್ನ ಮೈಗೆ ಕೈಹಾಕಿ, ಚೂಡಿದಾರದ ಶಾಲನ್ನು ಎಳೆದು ಮಾನಕ್ಕೆ ಕುಂದುಂಟು ಮಾಡಿರುವುದಲ್ಲದೆ ತನಗೆ ಮತ್ತು ತನ್ನ ಮಗನಿಗೆ ಹಲ್ಲೆಗೆ ಮುಂದಾಗಿದ್ದರೆಂದು ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?:
ತನ್ನ ಮಗಳು ಕುಮಾರಿ ಸೌಜನ್ಯ ಸುಮಾರು 11 ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದು, ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ಹೋರಾಟ ನಡೆಸುತ್ತಿದ್ದು, ಅದೇ ಉದ್ದೇಶದಿಂದ 4-8-2023ರರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿರುವುದನ್ನು ತಿಳಿದು ನ್ಯಾಯಕ್ಕಾಗಿ ಆಗ್ರಹಿಸಿ,ಸದ್ರಿ ಸಭೆಗೆ ತನ್ನ ಕುಟುಂಬದೊಂದಿಗೆ ಬಂದಿದ್ದೆ.ಆಗ ವ್ಯಕ್ತಿಯೊಬ್ಬ ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ, ತಾನು ಧರಿಸಿದ ಚೂಡಿದಾರದ ಶಾಲನ್ನು ಹಿಡಿದೆಳೆದು ತನ್ನ ಮಾನಕ್ಕೆ ಕುಂದುಂಟು ಮಾಡಿದ್ದಲ್ಲದೇ ತನ್ನ ಮಗ ಜಯರಾಮನಿಗೂ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಕುಸುಮಾವತಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಲಂ 341, 354, 323, ೩೪ರಡಿ ಅಪರಿಚಿತ ವ್ಯಕ್ತಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here