ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು,ವಕೀಲರ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಘಟಕ, ಸಂತ ಫಿಲೊಮಿನಾ ಕಾಲೇಜು ಇವರ ಸಹಯೋಗದೊಂದಿಗೆ “ಮಾನವ ಕಳ್ಳ ಸಾಗಾಣಿಕೆತಡೆ ದಿನಾಚರಣೆ – 2023” ಅಂಗವಾಗಿ ಕಳೆದ 5 ದಿನಗಳಿಂದ ನಿರಂತರ ನಡೆಯುತ್ತಿರುವ ಸರಣಿ ಮಾಹಿತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಆ.5ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಕೊಂಬೆಟ್ಟು ಶ್ರೀ ಸುಂದರರಾಮ್ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಣ್ಣ ಎಚ್.ಆರ್ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಾಯೋಗಿಕವಾಗಿ ಕೆಲವೊಂದು ಘಟನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾನವ ಕಳ್ಳ ಸಾಗಾಣಿಕೆಯನ್ನು ಹೇಗೆ ತಡೆಯಬಹುದು ಎಂಬ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ ನ್ಯಾಯಾಂಗ ವ್ಯವಸ್ಥೆಯ ಅಡಿಯಲ್ಲಿ ಪೊಲೀಸರು, ವಕೀಲರು, ನ್ಯಾಯಾಧೀಶರು ಇದ್ದರೂ ಮಾನ ಕಳ್ಳ ಸಾಗಣಿಕೆಯನ್ನು ತಡೆಯುವಲ್ಲಿ ಸಾರ್ವಜನಿಕರ ಪ್ರಯತ್ನ ಅಗತ್ಯ ಎಂದರು.
ಶಿಕ್ಷೆ ಆಗುವ ಭರವಸೆ ಇದ್ದಾಗ ಮಾನವ ಕಳ್ಳ ಸಾಗಾಣಿಕೆ ತಡೆ:
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಮನೋಹರ್ ಎ ಅವರು ಮಾತನಾಡಿ ಬಡತನದಲ್ಲಿರುವ ವ್ಯಕ್ತಿಗಳು ಗುಲಾಮಗಿರಿಯಾಗುವುದು ಹಿಂದಿನ ಕಾಲದ ವ್ಯವಸ್ಥೆಯಾದರೂ ಅದು ಪ್ರಸ್ತುತ ಪರಿವರ್ತನೆ ಆಗಿದೆ. ಆದರೂ ಗುಲಾಮಗಿರಿಯಿಂದ ಆಧುನಿಕ ಗುಲಾಮಗಿರಿಯಾಗಿದೆ. ಬಹಳ ಹಿಂದಿನ ಕಾಲದಲ್ಲಿನ ವ್ಯವಸ್ಥೆಗೆ ಪೂರಕವಾಗಿ ಬೆಳೆದ ಅನಾಗರಿಕ ವ್ಯವಸ್ಥೆಯಾಗಿ ಇವತ್ತು ವೈಶ್ಯವಾಟಿಕೆ, ಬಾಂಡೆಡ್ ಲೇಬರ್ ಕಂಡು ಬರುತ್ತಿದೆ. ಇದು ಮಾನವ ಕಳ್ಳಸಾಗಾಣಿಕೆಯಾಗಿದ್ದು, ಮತ್ತೊಂದು ಕಡೆ ಮಾನವ ಕಳ್ಳ ಸಾಗಾಣಿಕೆ ಕದ್ದು ಕರೆದು ಕೊಂಡು ಬರುವುದಕ್ಕೆ ಮಾತ್ರವಲ್ಲ ಆಮಿಷವೊಡ್ಡಿ ಕರೆದೊಯ್ಯುವುದು ಕೂಡಾ ಮಾನವ ಕಳ್ಳಸಾಗಾಣಿಕೆಯಾಗುತ್ತದೆ. ಈ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ಬಂದಾಗ ತಡೆ ನೀಡಲು ಸಾಧ್ಯ. ಇವೆಲ್ಲಕ್ಕೂ ಪ್ರಮುಖವಾಗಿ ನ್ಯಾಯಾಂಗ ವ್ಯವಸ್ಥೆಯ ಉತ್ತರದಾಯಿತ್ವ ಬಹಳದೊಡ್ಡದು. ಶಿಕ್ಷ ಆಗುತ್ತದೆ ಎಂಬ ಭರವಸೆ ಇದ್ದಾಗ ಮತ್ತು ಆರೋಪಿಗೆ ಬಹಳ ಸುಲಭವಾಗಿ ಜಾಮೀನು ಸಿಗದಂತೆ ವ್ಯವಸ್ಥೆ ಆದಾಗ ಯಾರು ಕೂಡಾ ಮಾನವ ಕಳ್ಳಸಾಗಾಣಿಕೆಗೆ ಪ್ರಕರಣ ನಡೆಸುವುದಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಂಗ ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಅವರು ತಿಳಿಸಿದರು.
ಪ್ರತಿಜ್ಞಾ ವಿಧಿ ಬೋಧನೆ:
ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕಿ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ಘಟಕದ ಸಂಯೋಜಕರು ಭಾರತಿ ಎಸ್ ರೈ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್, ಅನಿಕೇತನ ಎಜುಕೇಶನಲ್‌ಟ್ರಸ್ಟ್‌ನ ಆಡಳಿತ ಟ್ರಸ್ಟಿಯಾಗಿರುವ ವಕೀಲ ಕೃಷ್ಣಪ್ರಸಾದ್ ನಡ್ಸಾರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಎಂ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್, ಪ್ಯಾನೆಲ್ ವಕೀಲರಾದ ಮನೋಜ್, ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಫಿಲೊಮಿನಾ ಪದವಿ ಕಾಲೇಜಿನ ಉಪಪ್ರಾಂಶುಪಾಲ ಗಣೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಗಾಯತ್ರಿ ಮತ್ತು ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು.