ಪುತ್ತೂರು: ಮಂಜಲ್ಪಡ್ಪುವಿನಲ್ಲಿ ಜು.18ರಂದು ರಾತ್ರಿ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ನಗದು, ಚಿನ್ನದ ಉಂಗುರ ದೋಚಿದ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆರೋಪಕ್ಕೆ ಗುರಿಯಾದವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿಗೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಕಾಂಗ್ರೆಸ್ ಮುಖಂಡರೊಬ್ಬರ ವಿರುದ್ಧವೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಅಮ್ಟೂರು ಗ್ರಾಮದ ಜೊಗೊಟ್ಟು ನಿವಾಸಿ ಅಭಿಷೆಕ್ ಅವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಜು.18ರಂದು ನಾನು ಕೆಲಸ ಮುಗಿಸಿ ರಾತ್ರಿ ನನ್ನ ತಂದೆಯ ಮೂಲ ಮನೆಯಾದ ಪುತ್ತೂರಿನ ಮುಕ್ವೆಗೆ ಹೋಗಲು ರಾತ್ರಿ ಪುತ್ತೂರಿನ ನಗರ ಬಳಿಯ ಫಾಸ್ಟ್ ಫುಡ್ ತಳ್ಳು ಗಾಡಿಯ ಬಳಿ ಹೋಗಲು ಬಲಬದಿಯ ಇಂಡಿಕೇಟರ್ ಹಾಕಿ ಮೋಟಾರ್ ಸೈಕಲ್ನ್ನು ತಿರುಗಿಸುವಷ್ಟರಲ್ಲಿ ಹಿಂದಿನಿಂದ ಒಂದು ಬಿಳಿ ಬಣ್ಣದ ಬ್ರಿಝ ಕಾರನ್ನು ಅದರ ಚಾಲಕ ನನ್ನ ಬೈಕ್ನ ಹಿಂಬದಿಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದರು. ಈ ಕುರಿತು ನಾನು ಕಾರು ಚಾಲಕರನ್ನು ಪ್ರಶ್ನಿಸಿದ್ದೆ. ಆ ವೇಳೆ ಕಾರಿನಿಂದ ಇಳಿದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದಾಗ ನಾನು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದೆ. ಅದಕ್ಕೆ ಕಾರು ಚಾಲಕ ಈಗ ನಮ್ಮದೇ ಸರಕಾರ ಇರುವುದು ಹೇಳಿ ಕಾರಿನ ಒಳಗೆ ಹೋಗಿ ಕುಳಿತು ಅಲ್ಲಿಂದ ಹೋಗಿದ್ದರು. ಘಟನೆ ಕುರಿತು ನನ್ನ ಕಲ್ಲೇಗದ ಸ್ನೇಹಿತರಿಗೆ ಈ ಕುರಿತು ಮಾಹಿತಿ ನೀಡಿದಾಗ ಕಾರು ಚಾಲಕ ಪ್ರದೀಪ್ ಕುಮಾರ್ ರೈ ಪಾಂಬಾರು ಎಂದು ತಿಳಿದಿದ್ದು. ಜು.19ರಂದು ನನಗೆ ಹಲ್ಲೆ ನಡೆಸಿದ ನೋವು ಉಲ್ಬಣಗೊಂಡಿದ್ದು, ನಾನು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆಯುವಂತೆ ತಿಳಿಸಿದ್ದರು. ಅದರಂತೆ ಅಭಿಷೆಕ್ ಅವರು ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯವು ಘಟನೆಯ ಕುರಿತು ಪ್ರಕರಣ ದಾಖಲಿಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದಂತೆ ಪೊಲೀಸರು ಕಲಂ: 323, 506, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ದರೋಡೆ ಪ್ರಕರಣ ದಾಖಲಾಗಿತ್ತು:
ಜು.18ರಂದು ಕಾಂಗ್ರೆಸ್ ಮುಖಂಡ ಬೆಂಗಳೂರು ಪಿಆರ್ಸಿಕ್ಸ್ ರಿಯಲ್ ಎಸ್ಟೇಟ್ ಉದ್ಯಮಿ ಕೊಳ್ತಿಗೆ ನಿವಾಸಿ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ಮನೆಯ ಕಡೆ ಕಾರಿನಲ್ಲಿ ಹೋಗುವಾಗ ಮಂಜಲ್ಪಡ್ಪು ಬೈಪಾಸ್ ರಸ್ತೆಯ ಬಳಿ ಪೆಟ್ರೋಲ್ ಪಂಪ್ನಿಂದ ಕೆಂಪು ಬಣ್ಣದ ಡಸ್ಟರ್ ಕಾರು ರಸ್ತೆಗೆ ಬಂದು ಪ್ರದೀಪ್ ಕುಮಾರ್ ರೈ ಅವರು ಹೋಗುತ್ತಿದ್ದ ಕಾರಿಗೆ ಅಡ್ಡವಾಗಿ ನಿಲ್ಲಿಸಿದಲ್ಲದೆ ಕಾರಿನಿಂದ ಇಳಿದ ವ್ಯಕ್ತಿಗಳು ಪ್ರದೀಪ್ ಕುಮಾರ್ ರೈ ಅವರಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್ ಕುಮಾರ್ ರೈ ಅವರ ಬಳಿ ಇದ್ದ ರೂ.9ಸಾವಿರ ನಗದು, ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಗಾಯಗೊಂಡಿರುವ ಪ್ರದೀಪ್ ಕುಮಾರ್ ರೈ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ಮತ್ತು ದರೋಡೆ ಪ್ರಕರಣ ದಾಖಲಿಸಿದ್ದರು.