ಬನ್ನೂರು ಅಡೆಂಚಿಲಡ್ಕದಲ್ಲಿ ಶ್ವಾನಗಳ ಮಾರಣ ಹೋಮ

0

ರಸ್ತೆ ಬದಿಯಲ್ಲಿ ಸುಮಾರು 10ಕ್ಕೂ ಅಧಿಕ ಶ್ವಾನಗಳ ಶವ ಪತ್ತೆ
ವಿಷವುಣಿಸಿ, ಕಾಲುಗಳನ್ನು ಕಟ್ಟಿ, ಗೋಣಿಯಲ್ಲಿ ತುಂಬಿಸಿ ಹಿಂಸಾತ್ಮಕ ರೀತಿಯಲ್ಲಿ ನಾಯಿಗಳ ಹತ್ಯೆ ಶಂಕೆ !

ಪುತ್ತೂರು:ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೋಗುವ ಅಡೆಂಚಿಲಡ್ಕ ರಸ್ತೆ ಬದಿಯಲ್ಲಿ ಸುಮಾರು 10ಕ್ಕೂ ಅಧಿಕ ಶ್ವಾನಗಳ ಕೊಳೆತ ಶವಗಳು ಗೋಣಿಯಲ್ಲಿ ಮತ್ತು ಕೈಕಾಲು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು,ದುಷ್ಕರ್ಮಿಗಳು ಶ್ವಾನಗಳಿಗೆ ವಿಷವುಣಿಸಿ ಹಿಂಸಾತ್ಮಕ ರೀತಿಯಲ್ಲಿ ಮಾರಣ ಹೋಮ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಸುಮಾರು 20ಕ್ಕೂ ಅಧಿಕ ಸಾಕು ಶ್ವಾನಗಳು ನಾಪತ್ತೆಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಬನ್ನೂರು ಗ್ರಾಮದ ಅಡೆಂಚಿಲಡ್ಕದಲ್ಲಿ ಬೀದಿ ಶ್ವಾನಗಳು ಕಡಿಮೆ.ಸಾಕು ಶ್ವಾನಗಳೇ ಹೆಚ್ಚಾಗಿದ್ದರೂ ಅವೆಲ್ಲ ಪರಿಸರದಲ್ಲಿ ಸುತ್ತಾಡುತ್ತಿರುತ್ತವೆ.ಆದರೆ ಇದೀಗ ಶ್ವಾನಗಳ ಶವಗಳು ರಸ್ತೆ ಬದಿಯ ಪೊದೆಗಳಲ್ಲಿ ಪತ್ತೆಯಾಗಿದೆ.ಶ್ವಾನಗಳ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿದ್ದುದರಿಂದ ನಾಯಿಗಳ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಶ್ವಾನಗಳಿಗೆ ರೋಗ ಬಾಧೆ ಇದೆಯೆಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಶ್ವಾನಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಪರಿಸರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಕುರಿತು ಸ್ಥಳೀಯವಾಗಿ ಆಂತಕ ವ್ಯಕ್ತವಾಗಿದೆ.ಅಡೆಂಚಿಲಡ್ಕದ ಅಣ್ಣು, ಯಮುನಾ ಸೇರಿದಂತೆ ಸದಾಶಿವ ಕಾಲೋನಿಯ ಹಲವರ ಸಾಕು ನಾಯಿಗಳ ಶವಗಳು ರಸ್ತೆ ಬದಿಯ ಪೊದೆಗಳಲ್ಲಿ ಪತ್ತೆಯಾಗಿದೆ.ಆ.6ರಂದು ರಸ್ತೆ ಬದಿಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಶೋಧ ನಡೆಸಿದಾಗ ಪೊದೆಗಳ ಬಳಿ ಶ್ವಾನಗಳ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಘಟನೆಯ ಕುರಿತು ಗ್ರಾಮಸ್ಥರು ಬನ್ನೂರು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ.ಪಂಚಾಯತ್‌ನಿಂದ ಅಧ್ಯಕ್ಷರು, ಸದಸ್ಯರುಗಳು ಮತ್ತು ಪಿಡಿಒ ಸ್ಥಳಕ್ಕೆ ಆಗಮಿಸಿ ಪಶು ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ್ ಅವರು ಪರಿಶೀಲನೆ ನಡೆಸಿದ್ದಾರೆ.ಸದ್ಯ ಶ್ವಾನಗಳ ಶವಗಳನ್ನು ಗ್ರಾಮಸ್ಥರೇ ಸೇರಿಕೊಂಡು ಹೊಂಡದಲ್ಲಿ ಹಾಕಿ ಮಣ್ಣು ಮುಚ್ಚಿದ್ದಾರೆ.

ಶ್ವಾನಗಳ ಮಾರಣಹೋಮ ಎಂಬ ಮಾಹಿತಿ ಆಧಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲೆಂದು ಸ್ಥಳಕ್ಕೆ ತೆರಳಿದ್ದೆ.ಆದರೆ ಶ್ವಾನಗಳ ಶವಗಳು ಕೊಳೆತಿರುವುದರಿಂದ ಮರಣೋತ್ತರ ಪರೀಕ್ಷೆ ಅಸಾಧ್ಯವಾಗಿದೆ.ಗ್ರಾ.ಪಂ ಮತ್ತು ಗ್ರಾಮಸ್ಥರಿಂದ ಲಿಖಿತವಾಗಿ ದೂರು ನೀಡುವಂತೆ ತಿಳಿಸಿದ್ದೇನೆ
ಡಾ.ಧರ್ಮಪಾಲ್,
ಸಹಾಯಕ ನಿರ್ದೇಶಕ ಪಶು ಇಲಾಖೆ

ಗ್ರಾ.ಪಂ, ಪಶು ಇಲಾಖೆಗೆ ದೂರು ನೀಡಿದೆ
ಪರಿಸರದಲ್ಲಿ ಏಕಾಏಕಿ ಶ್ವಾನಗಳ ಶವಗಳು ಪತ್ತೆಯಾಗಿರುವುದು ಆತಂಕ ವ್ಯಕ್ತವಾಗಿದೆ.ರೋಗ ಬಾಧೆಯೋ ಅಥವಾ ವಿಷವುಣಿಸಿದ್ದಾರೋ ಸ್ಪಷ್ಟವಾಗಿಲ್ಲ.ಈ ಕುರಿತು ಗ್ರಾಮಸ್ಥರು ಪಂಚಾಯತ್‌ಗೆ ಮತ್ತು ಪಶು ಇಲಾಖೆಗೆ ದೂರು ನೀಡಿದ್ದಾರೆ.ಈ ಕುರಿತು ಸಮಗ್ರ ತನಿಖೆ ನಡೆಸಬೇಕು-
ರತ್ನಾಕರ ಪ್ರಭು,
ಬನ್ನೂರು ಗ್ರಾ.ಪಂ ಮಾಜಿ ಸದಸ್ಯ

ಶ್ವಾನಗಳಿಗೂ ಬದುಕಲು ಹಕ್ಕಿದೆ
ಭೂಮಿಯಲ್ಲಿ ಮನುಷ್ಯರಂತೆ ಎಲ್ಲಾ ಪ್ರಾಣಿಗಳಿಗೂ ಬದುಕಲು ಹಕ್ಕಿದೆ.ಶ್ವಾನಗಳಿಗೂ ಬದುಕಿನ ಹಕ್ಕಿದೆ.ಆದರೆ ಅವುಗಳಿಗೆ ವಿಷವುಣಿಸಿ ಕೊಲ್ಲುವುದು ಅಕ್ಷಮ್ಯ ಅಪರಾಧ.ಈ ಕುರಿತು ಹಂತಕರನ್ನು ಪತ್ತೆ ಮಾಡಿ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಶ್ವಾನ ಪ್ರಿಯ ರಾಜೇಶ್ ಬನ್ನೂರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here