ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೋಗುವ ರಸ್ತೆಯಾಗಿರುವ ಅಡೆಂಚಿಲಡ್ಕ ಮತ್ತು ಸದಾಶಿವ ಕಾಲೋನಿ ಪರಿಸರ ರಸ್ತೆ ಬದಿಯಲ್ಲಿ ಶ್ವಾನಗಳ ಆಕಸ್ಮಿಕ ಸಾವುಗಳ ಕುರಿತು ಶಂಕೆ ವ್ಯಕ್ತಪಡಿಸಿದ ಪ್ರಾಣಿ ಪ್ರಿಯ ರಾಜೇಶ್ ಬನ್ನೂರು ಮತ್ತು ಶಶಿಧರ್ ವಿ.ಎನ್ ಅವರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ದುರಾಚರ ನಡೆಸಿರುವ ಪಾತಕಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೋಗುವ ರಸ್ತೆಯಾಗಿರುವ ಅಡೆಂಚಿಲಡ್ಕ ಮತ್ತು ಸದಾಶಿವ ಕಾಲೋನಿ ಪರಿಸರ ರಸ್ತೆ ಬದಿಯಲ್ಲಿ ಸುಮಾರು 10ಕ್ಕೂ ಅಧಿಕ ಶ್ವಾನಗಳ ಕೊಳೆತ ಶವಗಳು ಗೋಣಿಯಲ್ಲಿ ಮತ್ತು ಕೈಕಾಲು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು, ದುಷ್ಕಮಿಗಳು ಶ್ವಾನಗಳಿಗೆ ವಿಷವುಣಿಸಿ ಹಿಂಸಾತ್ಮಕ ರೀತಿಯಲ್ಲಿ ಕೊಂದಿರುವ ಶಂಕೆ ವ್ಯಕ್ತವಾಗಿರುವ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಕುರಿತು ಶ್ವಾನ ಪ್ರೀಯ ರಾಜೇಶ್ ಬನ್ನೂರು ಮತ್ತು ಶಶಿಧರ್ ವಿ.ಎನ್ ಅವರು ಸಾರ್ವಜನಿಕ ಸ್ಥಳದಲ್ಲಿ ಅಮಾಯಕ ಸಾಕುನಾಯಿ, ಬೀದಿ ನಾಯಿಗಳನ್ನು ಹತ್ಯೆಗೈಯುವುದು ಕೊಲ್ಲುವುದು 1960 ಸಾಕುಪ್ರಾಣಿಗಳ ಸಂರಕ್ಷಣಾ ಕಾಯಿದೆಯಡಿ ಶಿಕ್ಷಾರ್ಹ ಮತ್ತು ದಂಡನಾರ್ಹ ಅಪರಾಧವಾಗಿರುತ್ತದೆ. ಈ ನಿಟ್ಟಿನಲ್ಲಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಾಕುಪ್ರಾಣಿಗಳ ಸಾಮೂಹಿಕ ಹತ್ಯೆಯಲ್ಲಿ ಒಳಗೊಂಡ ಸಮಾಜ ಘಾತುಕ ವ್ಯಕ್ತಿಗಳನ್ನು ಪತ್ತೆ ಮಾಡಿ ದಂಡಿಸಬೇಕು ಮತ್ತು ಈಗಾಗಲೇ ಅಲ್ಲಿ ಮೃತಪಟ್ಟ ನಾಯಿಗಳ ಮರಣೋತ್ತರ ಶವಪರೀಕ್ಷೆ ವರದಿ ಪಡೆದು ಸಾವಿಗೆ ಕಾರಣವಾದ ಅಂಶಗಳ ತನಿಖೆ, ಪರಿಶೀಲನೆ, ಸಂಶೋಧನೆಗಳನ್ನು ನಡೆಸಿ, ಸಾರ್ವಜನಿಕರಲ್ಲಿ ಮೂಡಿರವ ಭಯ ಆತಂಕಗಳ ನಿವರಣೆಗಾಗಿ ಮತ್ತು ಇಂತಹ ಘಾತುಕತನ ಮುಂದುವರಿಯದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿಬಂಧನಾತ್ಮಕ ಕ್ರಮಕ್ಕೆ ಕೋರಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.