ಕೊಣಾಲು: ರಸ್ತೆ ಸಂಪರ್ಕ ಬಂದ್-ತಾ.ಪಂ.ಇಒ ಭೇಟಿ, ಪರಿಶೀಲನೆ

0

ರಸ್ತೆ ಹಾನಿಗೊಳಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು- ನವೀನ್ ಭಂಡಾರಿ

ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಿಂದ ಕಡೆಂಬಿಲ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಬಂದ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರ ಸೂಚನೆ ಮೇರೆಗೆ ಆ.8ರಂದು ಬೆಳಿಗ್ಗೆ ತಾ.ಪಂ.ಇಒ ನವೀನ್ ಭಂಡಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ನವೀನ್ ಭಂಡಾರಿಯವರು ರಸ್ತೆಹಾನಿಗೊಳಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.


ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಸುಮಾರು 80 ವರ್ಷಗಳಿಂದ ಬಳಕೆಯಲ್ಲಿದ್ದು, ಇದೀಗ ಸದ್ರಿ ರಸ್ತೆ ಪಕ್ಕದ ಜಾಗವನ್ನು ಕೇರಳ ಮೂಲದ ಸೆಬಾಸ್ಟಿನ್ ಎಂಬವರು ಖರೀದಿಸಿದ್ದು, ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿಗಿಂತಲೂ ಎತ್ತರವಾಗಿ ಮಣ್ಣು ತುಂಬಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಬಳಕೆ ಮಾಡುತ್ತಿದ್ದ ರಸ್ತೆ ಮುಚ್ಚಿ ಹೋಗಿದ್ದು, ಈ ರಸ್ತೆಯ ಸುಮಾರು 200 ಮೀ.ಗೆ ಜಿ.ಪಂ.ಅನುದಾನದಿಂದ ಮಾಡಲಾಗಿದ್ದ ಕಾಂಕ್ರಿಟೀಕರಣವನ್ನೂ ಅಗೆದು ಹಾಕಲಾಗಿದೆ. ಸುಮಾರು 80 ವರ್ಷ ಊರ್ಜಿತದಲ್ಲಿದ್ದ ಸಂಪರ್ಕ ರಸ್ತೆ ಬಂದ್ ಮಾಡಿರುವುದರಿಂದ ತಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದರು. ಸಾರ್ವಜನಿಕ ರಸ್ತೆ ಮುಚ್ಚಿದ್ದರೂ ಸೆಬಾಸ್ಟಿನ್‌ರವರು ತಮ್ಮ ಪಟ್ಟಾ ಜಾಗದ ಮೂಲಕ ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ನೇರವಾಗಿ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದರು. ಆದರೆ ಇದಕ್ಕೆ ರಸ್ತೆ ಬಳಕೆದಾರರು ಆಕ್ಷೇಪ ಸೂಚಿಸಿ, ಈ ಹಿಂದೆ ಊರ್ಜಿತದಲ್ಲಿದ್ದ ಕೋಲ್ಪೆ-ಕಡೆಂಬಿಲ 20 ಅಡಿ ಅಗಲದ ಪಂಚಾಯತ್ ರಸ್ತೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್‌ರವರು ಆ.4ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬಳಕೆದಾರರ ಬೇಡಿಕೆ ಆಲಿಸಿದರು. ಬಳಿಕ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು, ಸಾರ್ವಜನಿಕ ರಸ್ತೆ ಮುಚ್ಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಗ್ರಾಮ ಪಂಚಾಯತ್ ರಸ್ತೆ ಆಗಿರುವುದರಿಂದ ಅಳತೆ ಮಾಡಿ ಸದ್ರಿ ರಸ್ತೆ ಊರ್ಜಿತದಲ್ಲಿಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ತಾ.ಪಂ.ಇಒ ನವೀನ್ ಭಂಡಾರಿಯವರಿಗೆ ಸೂಚನೆ ನೀಡಲಾಗುವುದು. ರಸ್ತೆ ಅಗೆದಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಹಾಯಕ ಆಯುಕ್ತರ ಸೂಚನೆ ಮೇರೆಗೆ ಆ.8ರಂದು ಸ್ಥಳಕ್ಕೆ ಭೇಟಿ ನೀಡಿದ್ದ ತಾ.ಪಂ.ಇಒ ನವೀನ್ ಭಂಡಾರಿಯವರು ಪರಿಶೀಲನೆ ನಡೆಸಿ ಸಾರ್ವಜನಿಕ ರಸ್ತೆ ಬಂದ್ ಮಾಡಿರುವ ಬಗ್ಗೆ ಕಂದಾಯ ಹಾಗೂ ಗ್ರಾಮ ಪಂಚಾಯತ್‌ನವರಿಂದ ಮಾಹಿತಿ ಪಡೆದುಕೊಂಡರು.


ಕ್ರಿಮಿನಲ್ ಮೊಕದ್ದಮೆ:
ರಸ್ತೆ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಇಒ ನವೀನ್ ಭಂಡಾರಿಯವರು, ಸೆಬಾಸ್ಟಿನ್‌ರವರು ಸರಕಾರಿ ಜಾಗದಲ್ಲಿದ್ದ ರಸ್ತೆ ಒತ್ತುವರಿ ಮಾಡಿಕೊಂಡು ಸರಕಾರಕ್ಕೆ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರು ಹೊಸದಾಗಿ ರಸ್ತೆ ಮಾಡಿದ್ದರೂ ಆ ರಸ್ತೆ ಮೂಲಕ ಹೆದ್ದಾರಿಗೆ ಸಂಪರ್ಕ ಕಷ್ಟವಾಗಿದೆ. ಸಾರ್ವಜನಿಕ ರಸ್ತೆಗೆ ಹಾಕಲಾಗಿದ್ದ ಕಾಂಕ್ರಿಟ್ ಅಗೆದುಹಾಕಿರುವುದು ಹಾಗೂ ರಸ್ತೆ ಮುಚ್ಚಿ ಸಾರ್ವಜನಿಕರು ಓಡಾಟ ಮಾಡದಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದ್ದಾರೆ.
ಕಂದಾಯ ನಿರೀಕ್ಷಕ ಪೃಥ್ವಿರಾಜ್, ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಗ್ರಾಮಕರಣಿಕ ಸತೀಶ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ, ಪಿಡಿಒ ಜಗದೀಶ್ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಇಒ ಅವರಿಗೆ ಮಾಹಿತಿ ನೀಡಿದರು. ಕೆ.ಕೆ.ಉಸ್ಮಾನ್ ಕಡೆಂಬಿಲ, ಯು.ಕೆ.ಹಮೀದ್ ಕಡೆಂಬಿಲ, ಇಕ್ಬಾಲ್, ಜಗನ್ನಾಥ ಶೆಟ್ಟಿ ಕೋಲ್ಪೆ, ಕೆ.ಮೊದಿನ್ ಕೋಲ್ಪೆ, ರಫೀಕ್, ಇಸ್ಮಾಯಿಲ್ ಕೋಲ್ಪೆ, ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಇಕ್ಬಾಲ್ ಕೆ. ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.


ಸರಕಾರಿ ಜಾಗ ಮನೆ ನಿವೇಶನಕ್ಕೆ:
ಕೋಲ್ಪೆಯಲ್ಲಿನ ಸರಕಾರಿ ಜಾಗ ಅತಿಕ್ರಮಣ ಆಗಿರುವ ಬಗ್ಗೆಯೂ ದೂರು ಬಂದಿದೆ. ಈ ಜಾಗದ ಸರ್ವೆ ನಡೆಸಿ ಮನೆ ನಿವೇಶನಕ್ಕೆ ಮೀಸಲಿಡುವಂತೆ ಗ್ರಾಮ ಪಂಚಾಯತ್‌ಗೆ ಸೂಚಿಸುತ್ತೇನೆ. ಈ ಪ್ರಕರಣದ ಬಗ್ಗೆ ಮುತುವರ್ಜಿ ವಹಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಾ.ಪಂ.ಇಒ ನವೀನ್ ಭಂಡಾರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here