ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 9ನೇ ಎಟಿಎಂ ಹಾಗೂ ನವೀಕೃತ ಡಿ.ಆರ್ ಸೆಂಟರ್ ಆ.14ರಂದು ಪುತ್ತೂರಿನ ಮುಖ್ಯ ಶಾಖೆಯ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಆ ಮೂಲಕ ಪುತ್ತೂರಿನ ಸಹಕಾರಿ ರಂಗದ ಇತಿಹಾಸದಲ್ಲಿಯೇ ಸಹಕಾರಿ ಬ್ಯಾಂಕ್‌ನ ಪ್ರಥಮ ಎಟಿಎಂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮೂಲಕ ಪ್ರಾರಂಭಗೊಂಡಿದೆ ಎಂಬ ಹೆಗ್ಗಲಿಕೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಆ.9ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1941ರಲ್ಲಿ ಪ್ರಾರಂಭಗೊಂಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರ ಸಹಾರದಿಂದ ಉತ್ತಮ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷರಾದ ಬಳಿಕ ಬ್ಯಾಂಕ್ ಸಾಧನೆಯ ಹಾದಿಯಲ್ಲಿ ಮುಂದುವರಿದಿದೆ. ಶೇ.100ರಷ್ಟು ಸಾಲ ವಸೂಲಾತಿಯಾಗುತ್ತಿದೆ. ಬ್ಯಾಂಕ್ 19 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, ಸ್ವ ಸಹಾಯ ಸಂಘಗಳ ನಿರ್ವಹಣೆಗೆ 17 ಬರಿ ನಬಾರ್ಡ್ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಮೊಬೈಲ್ ಬ್ಯಾಂಕ್ ಸೇವೆ, ಬಳಿಕ ಸಹಕಾರಿ ರಂಗದಲ್ಲಿ ಪ್ರಥಮ ಬಾರಿಗೆ ಕಾಮನ್ ಸಾಫ್ಟ್‌ವೇರ್‌ನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಳವಡಿಸಿಕೊಂಡಿದೆ. ನಂತರ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಿ ಎಟಿಎಂನ್ನು ಆರಂಭಿಸಿದ್ದು ಈಗಾಗಲೇ 8 ಕಡೆಗಳಲ್ಲಿ ಎಟಿಎಂ ಕಾರ್ಯನಿರ್ವಹಿಸುತ್ತಿದೆ. 9ನೇ ಎಟಿಎಂ ಪುತ್ತೂರಿನಲ್ಲಿ ಪ್ರಾರಂಭಗೊಳ್ಳಿದೆ. ಬ್ಯಾಂಕ್‌ನ ಪುತ್ತೂರು ಮುಖ್ಯ ಶಾಖೆಯು 1991ರಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ರೂ.344ಕೋಟಿ ವ್ಯವಹಾರ ನಡೆಸುತ್ತಿದೆ. ಮುಖ್ಯ ಶಾಖೆಯ ಕಟ್ಟಡದಲ್ಲಿ ನೂತನ ಎಟಿಎಂ ಉದ್ಘಾಟನೆಗೊಳ್ಳಲಿದೆ ಎಂದ ಅವರು ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ ನೂತನ ಎಟಿಎಂನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ನವೀಕೃತ ಡಿ.ಆರ್ ಸೆಂಟರ್‌ನ್ನು ನಗರ ಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಲಿದ್ದಾರೆ. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಧ್ಯಕ್ಷ ವಿಶೇಷ ಅಭಿನಂದನೆ:
ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ, ಮದರ್ ತೆರೆಸಾ ಪ್ರಶಸ್ತಿ ಹಾಗೂ ಸಹಕಾರಿ ಭೂಷಣ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಪುತ್ತೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಿದ್ದಾರೆ.
ಬ್ಯಾಂಕ್‌ನ ಪುತ್ತೂರು ಮುಖ್ಯ ಶಾಖಾ ವ್ಯವಸ್ಥಾಪಕ ಹರೀಶ್ ಕುಮಾರ್ ರೈ, ಎಂ.ಟಿ ರಸ್ತೆ ಶಾಖಾ ವ್ಯವಸ್ಥಾಪಕಿ ಜಲಜಾ, ಬ್ಯಾಂಕ್ ಮೇಲ್ವಿಚಾರಕರಾದ ವಸಂತ ಹಾಗೂ ಶರತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.