ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಹಾಗೂ ವಿದ್ಯಾರ್ಥಿಗಳ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು.
ಪುತ್ತೂರು ಬಿಆರ್‌ಸಿ ಚಾರ್ಜ್ ಕಾರ್ಡಿನೇಟರ್ ಆಗಿರುವ ನವೀನ್ ವೇಗಸ್‌ರವರು ಉದ್ಘಾಟಿಸಿ ಮಾತನಾಡಿ, ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು ಎಂದು ಹೇಳಿ, ಮಕ್ಕಳ ಜೊತೆ ಸಂವಹನ ನಡೆಸಿ ಮಕ್ಕಳ ಮೆದುಳನ್ನು ಚುರುಕುಗೊಳಿಸುವ ಪ್ರಶ್ನೆಗಳನ್ನು ಕೇಳುತ್ತಾ ವಿದ್ಯಾರ್ಥಿಗಳು ಕ್ರಿಯಾಶೀಲರಾಗುವಂತೆ ಹೇಳಿದರು. ಪ್ರಜಾಪ್ರಭುತ್ವ , ಮತದಾನದ ಮಹತ್ವ ಮತ್ತು ನಾಗರಿಕನಾಗಿ ನನ್ನ ಜವಾಬ್ದಾರಿ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ರಮೇಶ್ ಮಯ್ಯರವರು ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ಮಕ್ಕಳಲ್ಲಿ ನಾಯಕತ್ವ ಗುಣ, ಸಮಯ ಪಾಲನೆ, ಹೊಂದಾಣಿಕೆಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇದು ಕಲಿಕೆಗೆ ಪ್ರೇರಣೆಯನ್ನು ನೀಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗುವುದು ಎಂದು ಹೇಳಿದರು. ಮಂಜುಳಾ ನಿರೂಪಿಸಿದರು. ಜಯಲಕ್ಷ್ಮಿ ಸ್ವಾಗತಿಸಿ, ತ್ರಿವೇಣಿ ವಂದಿಸಿದರು.