ಬಡವರು ಕಚೇರಿಗೆ ಬಂದಾಗ ಸರಿಯಾದ ಸ್ಪಂದನೆ ಕೊಡಿ
ಉಪ್ಪಿನಂಗಡಿ, ಆರ್ಯಾಪು, ಒಳಮೊಗ್ರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ
ಪುತ್ತೂರು: ಸರಕಾರದ ಸೌಲಭ್ಯಗಳ ಮಾಹಿತಿ ಬಡ ಜನರಿಗೆ ಇರುವುದಿಲ್ಲ. ಸರಕಾರದ ಯೋಜನಗೆಳ ಮಾಹಿತಿಯನ್ನು ಬಡ ಜನರಿಗೆ ನೀಡಿ. ಸೇವಾ ಮನೋಭಾವ ಬೆಳೆಸಿಕೊಳ್ಳಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ಮತ್ತು ಬಂಟ್ವಾಳ ತಾಲೂಕಿನ 9 ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ನಡೆದ ಗ್ರಾಮ ಪಂಚಾಯತ್‌ನ ಪ್ರಗತಿಯ ಬಗ್ಗೆ ಶಾಸಕರು ಮಾತನಾಡಿದರು. ಬಡವರು ಕಚೇರಿಗೆ ಬಂದಾಗ ಸರಿಯಾದ ಸ್ಪಂದನೆ ಕೊಡಿ. ಭ್ರಷ್ಟಾಚಾರಕ್ಕೆ ನನ್ನದು ವಿರೋಧ ಇದೆ. ಬಡವರಿಗೆ ತೊಂದರೆಯಾದಲ್ಲಿ ನಿಮ್ಮ ಕಚೇರಿಗೆ ಬಂದು ಕುಳಿತುಕೊಳ್ಳುತ್ತೇನೆ. ಮರಣ ಪತ್ರ ನೀಡುವುದಕ್ಕೂ ಲಂಚ ಕೇಳುವ ಗ್ರಾಮ ಲೆಕ್ಕಾಧಿಕಾರಿಯವರೂ ಇದ್ದಾರೆ ಇದರ ಬಗ್ಗೆ ನನಗೆ ಕಂಪ್ಲೇಂಟ್ ಬಂದಿದೆ ಎಂದು ಹೇಳಿದರು. ಸರಕಾರ ಅಧಿಕಾರದ ಶಕ್ತಿಯನ್ನು ನಿಮಗೆ ಕೊಟ್ಟಿದೆ. ಅದನ್ನು ಉಪಯೋಗಿಸಿಕೊಳ್ಳಿ. ಅಭಿವೃದ್ಧಿ ಮತ್ತು ಸೇವೆಯಲ್ಲಿ ನನಗೆ ಪಕ್ಷಬೇಧ ಇಲ್ಲ. ನಿಮಗೆ ಯಾವುದೇ ತೊಂದರೆಯಾದಲ್ಲಿ ನನಗೆ ಬಂದು ಹೇಳಿ ಎಂದು ಹೇಳಿದರು.
ನರೇಗಾ ಯೋಜನೆ:
ಗ್ರಾಮ ಪಂಚಾಯತ್‌ನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಸಲಾದ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕಿ ಶೈಲಜಾ ಸುದೇಶ್ ಮಾಹಿತಿ ನೀಡಿ ಒದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾ.ಪಂಚಾಯತ್‌ನಲ್ಲಿ ಉತ್ತಮ ಸಾಧನೆಯಾಗುತ್ತಿದೆ ಎಂದು ಹೇಳಿದರು. ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಈ ವರ್ಷದಲ್ಲಿ ಅತ್ಯುತ್ತಮ ಸಾಧನೆಯಾಗಬೇಕು. ಗ್ರಾಮ ಪಂಚಾಯತ್‌ನಲ್ಲಿ ಇದರ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಬಕೇಕು ಎಂದು ಶಾಸಕರು ಪಿಡಿಒಗಳಿಗೆ ತಿಳಿಸಿದರು.
ವಸತಿ ಯೋಜನೆ, ಮನೆ ನಿವೇಶನ:
ರಾಜೀವ್ ಗಾಂಧಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ಚರ್ಚೆ ನಡೆಯಿತು. ವಸತಿ ಯೋಜನೆಗಳಲ್ಲಿ ಮಂಜೂರಾದ ಮನೆಗಳು ಮತ್ತು ತಿರಸ್ಕೃತಗೊಂಡ ಮನೆಗಳ ವಿವರವನ್ನು ಶಾಸಕರು ಪಡೆದುಕೊಂಡರು. ದಕ್ಷಿಣ ಕನ್ನಡ ಜಿಲ್ಲೆಗೆ ಪೂರಕವಾಗಿ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು. ಬಯಲು ಸೀಮೆಗೆ ಪೂರಕವಾದ ಯೋಜನೆ ನಮಗೆ ಬೇಡ. ಇದನ್ನು ಬದಲಾವಣೆ ಮಾಡಬೇಕು ಎಂದು ಅಭಿವೃದ್ಧಿ ಅಧಿಕಾರಿಯೋರ್ವರು ಹೇಳಿದರು. ಶಾಸಕರು ಮಾತನಾಡಿ ಮನೆಗಳು ಮಂಜೂರಾದರೂ ಕೆಲವು ಮೆನಗಳು ಯಾಕೆ ತಿರಸ್ಕೃತಗೊಳ್ಳುತ್ತಿದೆ? ವಸತಿ ಯೋಜನೆ ಪಡೆದುಕೊಂಡು ದೊಡ್ಡ ಮನೆ ಕಟ್ಟಿದ್ದಾರೆಂದು ರಿಜೆಕ್ಟ್ ಮಾಡಬೇಡಿ ಎಂದು ಹೇಳಿದರು. ವಸತಿ ಯೋಜನೆಯಲ್ಲಿ ಸಿಗುವ ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ರೂ 3 ಲಕ್ಷವಾದರೂ ಸಿಗಬೇಕು. ಕೆಲವು ಬಾರಿ ಕಾನೂನಿನ ವ್ಯಾಪ್ತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿಕೊಡಿ. ಬಡವರಿಗೆ ಅನ್ಯಾಯ ಮಾಡಬೇಡಿ ಪುತ್ತೂರು ತಾಲೂಕಿನಲ್ಲಿ 250 ಮನೆ ಮಂಜೂರಾತಿಗೆ ಬೇಡಿಕೆ ಬಂದಿದೆ. ಇದಕ್ಕೆ 200 ಸೇರಿಸಿ ಒಟ್ಟು 450 ಮನೆಗೆ ಅನುಮತಿ ಕೊಟ್ಟಿದ್ದೇನೆ. ಈ ವರ್ಷದಲ್ಲಿ ಕನಿಷ್ಟ 1000 ಜನರಿಗೆ ಮನೆ ನಿವೇಶನ ಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಕಂದಾಯ, ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದ ಪರಿಶೀಲನೆ ನಾನು ಮಾಡುತ್ತೇನೆ. ತಕರಾರು ಇಲ್ಲದ ಜಾಗವನ್ನು ನಿವೇಶನಕ್ಕೆ ಕೊಡಿ. ಸುಮಾರು 600 ಮಹಿಳೆಯರಿಂದ ಮನೆ ನಿವೇಶಕ್ಕೆ ಬೇಡಿಕೆ ಬಂದಿದೆ ಎಂದು ಹೇಳಿದರು.
ಘನತ್ಯಾಜ್ಯ ವಿಲೇವಾರಿ:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚೆ ನಡೆಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಉತ್ತಮವಾಗಿ ಒಣತ್ಯಾಜ್ಯ ಸಂಗ್ರಹ ಆಗುತ್ತದೆ. ಘನತ್ಯಾಜ್ಯ ಡಂಪಿಂಗ್ ಮಾಡಲು ಎಲ್ಲಾ ಪಂಚಾಯತ್‌ಗಳಿಗೂ ಜಾಗ ಮಂಜೂರಾತಿ ಆಗಿದೆ ಎಂದು ಹೇಳಿದರು.
ಡಾಟಾ ಎಂಟ್ರಿ ಆಪರೇಟರ್ ಇಲ್ಲ: ಗ್ರಾಮ ಪಂಚಾಯತ್‌ಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಇಲ್ಲ. ಇದರಿಂದಾಗಿ ಕೆಲಸ ಕಷ್ಟವಾಗುತ್ತದೆ. ಯೋಜನೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಕೆಲಸ ತಡವಾಗುತ್ತದೆ ಎಂದು ಪಿಡಿಒರೋರ್ವರು ಹೇಳಿದರು. ಶಾಸಕರು ಪ್ರತಿಕ್ರಿಯಿಸಿ ಗ್ರಾಮ ಪಂಚಾಯತ್‌ಗೆ ಬೇಕಾದ ಸಿಬಂದಿಗಳ ನೇಮಕಾತಿ ಮಾಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಗ್ರಾಮ ವನ್ ಕೇಂದ್ರ, ಆಧಾರ್ ತಿದ್ದುಪಡಿ: ಗ್ರಾಮ ಒನ್ ಕೇಂದ್ರ ಇಲ್ಲದ ಬಡಗನ್ನೂರು ಮತ್ತು ವಿಟ್ಲ ಪಡ್ನೂರು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರ ಪ್ರಾರಂಭಿಸುವಂತೆ ಶಾಸಕರು ತಿಳಿಸಿದರು. ಪ್ರಸ್ತುತ ಅಂಚೆ ಕಚೇರಿಗಳಲ್ಲಿ ಮಾತ್ರ ಆಧಾರ್ ತಿದ್ದುಪಡಿ ಆಗುತ್ತಿದ್ದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೂ ಮಾಡುವಂತೆ ಅಭಿಪ್ರಾಯ ವ್ಯಕ್ತವಾಯಿತು.
ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀಣ್ ಭಂಡಾರಿ ಸ್ವಾಗತಿಸಿ ವಂದಿಸಿದರು.
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ
2019-20, 2020-21 ಹಾಗೂ 2021-22ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತ್‌ಗಳಿಗೆ ರೂ.5ಲಕ್ಷ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ., ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಹಾಗೂ ಸದಸ್ಯರಾದ ಧನಂಜಯ, ತೌಶಿಫ್, ರಶೀದ್‌ರವರು ಪ್ರಶಸ್ತಿ ಪಡೆದುಕೊಂಡರು. 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಆರ್ಯಾಪು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ ರೈ, ಕಾರ್ಯದರ್ಶಿ ಮೋನಪ್ಪ ಪ್ರಶಸ್ತಿ ಪಡೆದುಕೊಂಡರು. 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಒಳಮೊಗ್ರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ತ್ರಿವೇಣೀ ಪಳ್ಳತ್ತಾರು, ಪಿಡಿಒ ಅವಿನಾಶ್ ಪ್ರಶಸ್ತಿ ಸ್ವೀಕರಿಸಿದರು.
ಬಂಟ್ವಾಳ ಇ.ಒ ಸಭೆಗೆ ಗೈರು, ಶಾಸಕರ ಅಸಮಾಧಾನ
ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಭೆಗೆ ಗೈರಾಗಿದ್ದರು. ಇದರ ಬಗ್ಗೆ ಅಸಮಾಧಾನಗೊಂಡ ಶಾಸಕರು ಬಂಟ್ವಾಳ ತಾಲೂಕಿನ 9 ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಗೂ ಸಂಬಂಧಿಸಿದ ಈ ಸಭೆಯಲ್ಲಿ ಬಂಟ್ವಾಳ ಇಒ ಭಾಗವಹಿಸಬೇಕಿತ್ತು ಯಾಕೆ ಸಭೆಗೆ ಬರಲಿಲ್ಲ ಎಂದು ಪ್ರಶ್ನಿಸಿದರು. ಅವರಿಗೆ ಬೇರೆ ಮೀಟಿಂಗ್ ಇದ್ದ ಕಾರಣ ಸಭೆಗೆ ಬರಲಿಲ್ಲ ಎಂಬ ಮಾಹಿತಿ ಪಡೆದುಕೊಂಡ ಶಾಸಕರು ಬಂಟ್ವಾಳ ವ್ಯಾಪ್ತಿಯ 9 ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಮುಂದಕ್ಕೆ ಬೇರೆಯೇ ನಡೆಸೋಣ ಎಂದರು.