ಉಪ್ಪಿನಂಗಡಿ, ಕಡಬ, ಆಲಂಕಾರು ಕೇಂದ್ರಗಳಿಗೆ ಗ್ರಾಮಸ್ಥರ ಅಲೆದಾಟ
ನೆಲ್ಯಾಡಿ: ನೆಲ್ಯಾಡಿ ಉಪಅಂಚೆ ಕಚೇರಿಯಲ್ಲಿ ನಡೆಯುತ್ತಿದ್ದ ಆಧಾರ್ ಸೇವೆ ಕಳೆದ ಏಳೆಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದು ಗ್ರಾಮಸ್ಥರು ಆಲಂಕಾರು, ಉಪ್ಪಿನಂಗಡಿ, ಕಡಬಕ್ಕೆ ಅಲೆದಾಟ ನಡೆಸುತ್ತಿದ್ದಾರೆ.
ಈ ಹಿಂದೆ ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಸಂಬಂಧಿತ ಸೇವೆ ಸಿಗುತ್ತಿತ್ತು. ನೆಲ್ಯಾಡಿ, ಕೌಕ್ರಾಡಿ, ಗೋಳಿತ್ತೊಟ್ಟು, ಕೊಣಾಲು, ಶಿರಾಡಿ, ಶಿಶಿಲ, ರೆಖ್ಯ, ಇಚ್ಲಂಪಾಡಿ, ಕೊಕ್ಕಡ, ಪಟ್ರಮೆ ಸೇರಿದಂತೆ ಅಸುಪಾಸಿನ ಗ್ರಾಮಸ್ಥರು ಇಲ್ಲಿ ಆಧಾರ್‌ಗೆ ಸಂಬಂಧಿಸಿದ ಸೇವೆ ಪಡೆಯುತ್ತಿದ್ದರು. ಆದರೆ ಕಳೆದ ಏಳೆಂಟು ತಿಂಗಳಿನಿಂದ ಇಲ್ಲಿ ಆಧಾರ್ ಸೇವೆ ಸಿಗುತ್ತಿಲ್ಲ. ಈಗ ಸರಕಾರದ ಗ್ಯಾರಂಟಿ ಯೋಜನೆಗೆ ಆಧಾರ್ ಕಾರ್ಡ್ ಅತೀ ಅಗತ್ಯವಾಗಿದೆ. ಆಧಾರ್ ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು ಸರಿಯಾಗಿ ನಮೂದಾಗಿರಬೇಕು. ಮೊಬೈಲ್ ಸಂಖ್ಯೆಯೂ ದಾಖಲಾಗಿರಬೇಕು. ಇಲ್ಲದೇ ಇದ್ದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಸರು ನೋಂದಾವಣೆ ಕಷ್ಟವಾಗಲಿದೆ. ಆದ್ದರಿಂದ ಗ್ರಾಮಸ್ಥರೆಲ್ಲರೂ ಈಗ ಆಧಾರ್ ತಿದ್ದುಪಡಿಗಾಗಿ ಓಡಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ನೆಲ್ಯಾಡಿ ಉಪ ಅಂಚೆಕಚೇರಿಯಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆಧಾರ್ ಕೇಂದ್ರಗಳಿಗೆ ಅಲೆದಾಟ:
ನೆಲ್ಯಾಡಿ ಭಾಗದ ಗ್ರಾಮಸ್ಥರು ಆಧಾರ್ ಸೇವೆಗಾಗಿ ಉಪ್ಪಿನಂಗಡಿ, ಆಲಂಕಾರು, ಕಡಬಕ್ಕೆ ಹೋಗಬೇಕಾಗಿದೆ. ಇದರಿಂದ ಗ್ರಾಮಸ್ಥರ ಹಣ, ಸಮಯವೂ ವ್ಯರ್ಥವಾಗುತ್ತಿದೆ. ಆಲಂಕಾರು, ಕಡಬಕ್ಕೆ ನೆಲ್ಯಾಡಿಯಿಂದ ಬಸ್ಸುಗಳ ಓಡಾಟವಿಲ್ಲ, ಜೀಪು ಸಂಚಾರವೂ ಇಲ್ಲ. ಸ್ವಂತ ವಾಹನವಿದ್ದರೇ ಕಡಬ, ಆಲಂಕಾರಿಗೆ ಸಂಚಾರ ಸುಲಭ. ಇಲ್ಲದೇ ಇದ್ದಲ್ಲಿ ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಬಂದು ಅಲ್ಲಿಂದ ಆಲಂಕಾರು, ಕಡಬಕ್ಕೆ ಹೋಗಬೇಕಾಗಿದೆ. ಸುತ್ತು ಬಳಸಿ, ಕಡಬ ಆಲಂಕಾರಿಗೆ ಹೋದರೂ ಅಲ್ಲಿ ಅದೇ ದಿನ ಆಧಾರ್ ಸೇವೆ ಸಿಗುತ್ತದೇ ಎಂಬುದೂ ಗ್ಯಾರಂಟಿ ಇಲ್ಲ. ಸಿಗದೇ ಇದ್ದರೇ ಆ ದಿನವೇ ವೇಸ್ಟ್. ಆದ್ದರಿಂದ ನೆಲ್ಯಾಡಿ ಉಪ ಅಂಚೆಕಚೇರಿಯಲ್ಲಿ ನಡೆಯುತ್ತಿದ್ದ ಆಧಾರ್ ಸೇವೆ ಪುನರಾರಂಭಗೊಳಿಸಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
ನೆಲ್ಯಾಡಿ ಉಪಅಂಚೆ ಕಚೇರಿಯಲ್ಲಿ ಆಧಾರ್‌ಗೆ ಸಂಬಂಧಿಸಿದ ಸೇವೆಗೆ ಈ ಹಿಂದೆ ಅರಸಿನಮಕ್ಕಿ ಅಂಚೆ ಕಚೇರಿಯ ಸಿಬ್ಬಂದಿ ಅಶೋಕ್ ಅವರನ್ನು ನೇಮಕ ಮಾಡಲಾಗಿತ್ತು. ಅವರು ನೆಲ್ಯಾಡಿ ಉಪ ಅಂಚೆ ಕಚೇರಿಗೆ ಬಂದು ಸೇವೆ ನೀಡುತ್ತಿದ್ದರು. ಅವರು ಮುಂಭಡ್ತಿ ಪಡೆದುಕೊಂಡು ವರ್ಗಾವಣೆಗೊಂಡ ಬಳಿಕ ಮತ್ತೊಬ್ಬರು ಸಿಬ್ಬಂದಿಯನ್ನು ಆಧಾರ್ ಸೇವೆ ನೀಡಲು ನೇಮಕ ಮಾಡಲಾಗಿತ್ತು. ಕ್ರಮೇಣ ಆಧಾರ್‌ಗೆ ಸಂಬಂಧಿಸಿದ ಸೇವೆಗೆ ಜನ ಬರುವುದೂ ಕಡಿಮೆಯಾಯಿತು. ದಿನಕ್ಕೆ ಕನಿಷ್ಠ ೪೦ ಮಂದಿಗೆ ಸೇವೆ ನೀಡಬೇಕೆಂಬ ಗುರಿ ತಲುಪುವುದೂ ಕಷ್ಟವಾಯಿತು. ಜೊತೆಗೆ ಜಿಪಿಎಸ್, ಪ್ರಿಂಟರ್ ಸಹ ಕೈಕೊಟ್ಟಿದ್ದರಿಂದ ಆಧಾರ್ ಸೇವೆಯೂ ಸ್ಥಗಿತಗೊಂಡಿತು. ಕಳೆದ ಏಳೆಂಟು ತಿಂಗಳಿನಿಂದ ಇಲ್ಲಿ ಆಧಾರ್‌ಗೆ ಸಂಬಂಧಿಸಿದ ಯಾವುದೇ ಸೇವೆ ಸಿಗುತ್ತಿಲ್ಲ. ಗೋಳಿತ್ತೊಟ್ಟು, ಕೊಣಾಲು, ಗುಂಡ್ಯ, ರೆಖ್ಯ, ಶಿರಾಡಿ, ಇಚ್ಲಂಪಾಡಿಯಲ್ಲಿ ಶಾಖೆ ಹೊಂದಿರುವ ನೆಲ್ಯಾಡಿ ಉಪ ಅಂಚೆಕಚೇರಿಯಲ್ಲಿ ಆಧಾರ್ ಸೇವೆ ಸಿಗದೇ ಇರುವುದರಿಂದ ಜನರಿಗೆ ತೊಂದರೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಇಲ್ಲಿ ಆಧಾರ್ ಸೇವೆ ಪುನರಾರಂಭಿಸಲು ಮುಂದಾಗಬೇಕೆಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
‘ ಜಿಪಿಎಸ್, ಪ್ರಿಂಟರ್ ಸಮಸ್ಯೆಯಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ. ಆಧಾರ್ ಸೇವೆಗೆ ಜನರೂ ಬರುತ್ತಿರಲಿಲ್ಲ. ದಿನದಲ್ಲಿ ಕನಿಷ್ಟ 40 ಮಂದಿಗೆ ಸೇವೆ ನೀಡಬೇಕೆಂಬ ಇಲಾಖೆಯ ಗುರಿ ತಲುಪುತ್ತಿರಲಿಲ್ಲ. ಇದರಿಂದಾಗಿ ಕಳೆದ ಏಳೆಂಟು ತಿಂಗಳಿನಿಂದ ಆಧಾರ್ ಸೇವೆ ಸಿಗುತ್ತಿಲ್ಲ. ಈಗ ಜನ ಕೇಳಿಕೊಂಡು ಬರುತ್ತಿದ್ದಾರೆ. ಅವರನ್ನು ಅವರಿಗೆ ಸಮೀಪದ ಕೇಂದ್ರಗಳಿಗೆ ಕಳಿಸುತ್ತಿದ್ದೇವೆ. ಸಿಸ್ಟಮ್ ಅಪ್‌ಡೇಟ್‌ಗೆ ಕ್ರಮ ಕೈಗೊಳ್ಳಲಾಗಿದೆ.
-ರಾಮಣ್ಣ ಶೆಟ್ಟಿ, ಅಂಚೆ ಪಾಲಕರು