ಶಾಲೆಗೆ ಮುಂಡೂರು ಸಿಎ ಬ್ಯಾಂಕ್ನಿಂದ ನೀರಿನ ಟ್ಯಾಂಕ್ ಕೊಡುಗೆ
ಪುತ್ತೂರು: ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯಲ್ಲಿ `ಶಾಲೆಯೊಂದಿಗೆ ನಾವು ನೀವು’ ಎನ್ನುವ ಕಾರ್ಯಕ್ರಮ ಆ.10ರಂದು ನಡೆಯಿತು. ಶಾಲಾ ಎಸ್ಡಿಎಂಸಿಗೆ ತೆರವಾದ ಸ್ಥಾನಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಿದ್ದು ಅದಕ್ಕಾಗಿ ಸಂಘದ ನಿರ್ದೇಶಕ ಎಸ್.ಡಿ ವಸಂತ ಅವರನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಮಕ್ಕಳಿಗೆ ಕ್ರೀಡಾ ಕಿಟ್ ನೀಡಿ ಸಹಕರಿಸಿದ ಎಸ್ಡಿಎಂಸಿ ಸದಸ್ಯ ಗಣೇಶ್ ನೇರೊಳ್ತಡ್ಕ ಅವರನ್ನು ಕೂಡಾ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಶಾಲಾ ಎಸ್ಡಿಎಂಸಿಗೆ ಸರಕಾರದಿಂದ ಯಾವುದೇ ಅನುದಾನ ಇಲ್ಲ, ಸಣ್ಣ ಪುಟ್ಟ ಖರ್ಚುಗಳನ್ನು ನಾವೇ ಭರಿಸುತ್ತಿದ್ದೇವೆ, ಶಾಲೆಯೊಂದಿಗೆ ಪೋಷಕರು ನಿರಂತರ ಸಂಪರ್ಕ ಇಟ್ಟುಕೊಂಡು ಸಹಕರಿಸಿದಾಗ ಶಾಲೆಯ ಅಭಿವೃದ್ಧಿ ಸುಲಭವಾಗಿ ಆಗುತ್ತದೆ ಎಂದು ಹೇಳಿದರು. ನಮ್ಮ ಶಾಲೆಯಲ್ಲಿ ಸುದೀರ್ಘ ಸಮಯ ಸೇವೆ ಸಲ್ಲಿಸಿ ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ಮುಂದಿನ ದಿನಗಳಲ್ಲಿ ಎಲ್ಲರನ್ನು ಸೇರಿಸಿಕೊಂಡು ಉತ್ತಮ ರೀತಿಯ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮುಂಡೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಎಸ್.ಡಿ ವಸಂತ ಮಾತನಾಡಿ ಶಾಲೆಯ ಮುಖ್ಯಸ್ಥರು ಸರಿಯಿದ್ದರೆ ಆ ಶಾಲೆ ಅಭಿವೃದ್ಧಿ ಹೊಂದುತ್ತದೆ, ಶಾಲಾ ಎಸ್ಡಿಎಂಸಿ ಮತ್ತು ಶಿಕ್ಷಕ ವೃಂದದವರು ಸಮನ್ವಯತೆಯಿಂದ ಕೆಲಸ ಮಾಡಿದ ಶಾಲೆಗಳು ಯಾವತ್ತೂ ಅಭಿವೃದ್ಧಿ ಹಿಂದೆ ಬಿದ್ದಿಲ್ಲ ಎಂದರು. ಹಿಂದೆ ಕಲ್ಪಣೆ ಶಾಲೆಯಲ್ಲಿ 300ರಷ್ಟು ಮಕ್ಕಳಿದ್ದರು, ಆದರೆ ಈಗ ಬಹಳಷ್ಟು ಕ್ಷೀಣಿಸಿದೆ, ಇದರ ಬಗ್ಗೆ ಗಂಭೀರ ಚಿಂತನೆ ನಡೆಸುವ ಮೂಲಕ ಮುಂದಿನ ವರ್ಷ ಹೆಚ್ಚು ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳಬೇಕು ಮತ್ತು ಮಕ್ಕಳು ಈ ಶಾಲೆ ಬಿಟ್ಟು ಬೇರೆ ಶಾಲೆಗಳಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಸ್ತಾವನೆಗೈದ ಶಾಲಾ ಮುಖ್ಯ ಗುರು ಕಮಲಾರವರು ನಮ್ಮ ಶಾಲೆಯ ಅಭಿವೃದ್ಧಿಗೆ ಊರವರು ಸಹಕಾರ ನೀಡಬೇಕು, ಮುಂದಕ್ಕೆ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚನೆಯಾಗಬೇಕು ಎಂದು ಹೇಳಿದರು. ಶಾಲೆಗೆ ನೂತನವಾಗಿ ಬಂದಿರುವ ಶಿಕ್ಷಕಿ ಉಮಾವತಿ ರೆಂಜಲಾಡಿಯವರು ತಮ್ಮ ಪರಿಚಯ ಮಾಡಿದರು. ವೇದಿಕೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಉಮಾವತಿ, ಎಸ್ಡಿಎಂಸಿ ಸದಸ್ಯ ಗಣೇಶ್ ನೇರೊಳ್ತಡ್ಕ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ಶಿಕ್ಷಕ ಸತೀಶ್ ವಂದಿಸಿದರು. ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.